ADVERTISEMENT

ದಾವಣಗೆರೆ: ಪಾಲಿಕೆ ರಾಜಕಾರಣದಲ್ಲಿ ಕಾಣಿಸಿಕೊಂಡ ಅಚ್ಚರಿಮುಖ

ಶಿಕ್ಷಣಕ್ಷೇತ್ರದಿಂದ ರಾಜಕೀಯ ಪಡಸಾಲೆಯಲ್ಲಿ ರೇಖಾರಾಣಿ

ಬಾಲಕೃಷ್ಣ ಪಿ.ಎಚ್‌
Published 10 ಮೇ 2022, 2:51 IST
Last Updated 10 ಮೇ 2022, 2:51 IST
ನಾಮಪತ್ರ ಸಲ್ಲಿಕೆ ವೇಳೆ ರೇಖಾರಾಣಿ ಜತೆಗೆ ಅವರ ಅತ್ತೆ ಜಸ್ಟಿನ್‌ ಡಿಸೋಜ
ನಾಮಪತ್ರ ಸಲ್ಲಿಕೆ ವೇಳೆ ರೇಖಾರಾಣಿ ಜತೆಗೆ ಅವರ ಅತ್ತೆ ಜಸ್ಟಿನ್‌ ಡಿಸೋಜ   

ದಾವಣಗೆರೆ: ಅನಿವಾರ್ಯವಾಗಿ ಬಂದ ಉಪಚುನಾವಣೆಯಲ್ಲಿ ಅಚ್ಚರಿಯಾಗಿ ಒಂದು ಮುಖ ಕಾಣಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು ನಾಮಪತ್ರ ಸಲ್ಲಿಸಿರುವುದು ಇದೀಗ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ನಾಂದಿಯಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಹೆಸರುಮಾಡಿರುವ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪಕರಾದ ದಿವಂಗತ ಶಿವಣ್ಣ ಮತ್ತು ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್‌ ಡಿಸೋಜ ಅವರ ಸೊಸೆ ರೇಖಾರಾಣಿ ಕೆ.ಎಸ್‌. ಈ ರೀತಿ ಅಚ್ಚರಿ ಮೂಡಿಸಿದವರು.

ಕೆಇಬಿ ಕಾಲೊನಿಯಲ್ಲಿ ಕಾಂಗ್ರೆಸ್‌ನಿಂದ ರೇಖಾರಾಣಿ, ಬಿಜೆಪಿಯಿಂದ ಶ್ವೇತಾ ಎಸ್‌. ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಶ್ವೇತಾ ಅವರ ಪತಿ ಶ್ರೀನಿವಾಸ್‌ಗೆ ತನ್ನ ಗೆಲುವಿನ ಜತೆಗೆ ಪತ್ನಿಯನ್ನೂ ಗೆಲ್ಲಿಸಿಕೊಂಡು ಬರುವ ಸವಾಲು ಇದ್ದರೆ, ಪಾಲಿಕೆಯಲ್ಲಿಬಿಜೆಪಿ ಸ್ಥಾನವನ್ನು ಇನ್ನಷ್ಟು ಹೆಚ್ಚಿಸುವ ಗುರಿ ಬಿಜೆಪಿಯದ್ದಾಗಿದೆ. ಇತ್ತ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಮನೆಯವರನ್ನೇ ಇಳಿಸುವ ಪ್ರಯತ್ನ ನಡೆದಿತ್ತಾದರೂ ಪ್ರಯೋಜನವಾಗಿರಲಿಲ್ಲ. ಈಗ ಹೊಸಬರನ್ನು ಕಣಕ್ಕಿಳಿಸಿರುವುದು ಕಾಂಗ್ರೆಸ್‌ಗೆ ಗೆಲ್ಲಿಸಿಕೊಂಡು ಬರುವ ಸವಾಲು ಎದುರಾಗಿದ್ದರೆ, ತನ್ನಕುಟುಂಬ ಇಲ್ಲಿವರೆಗೆ ಉಳಿಸಿಕೊಂಡು ಬಂದ ಹೆಸರು ರಾಜಕೀಯದಲ್ಲಿ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅತ್ತೆ ಜಸ್ಟಿನ್‌ ಡಿಸೋಜ, ಪತಿ ಹೇಮಂತ್‌ ಡಿ.ಎಸ್‌. ಮತ್ತು ಕುಟುಂಬದಮೇಲಿದೆ.

ADVERTISEMENT

‘ಶಿಕ್ಷಣ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರ ತದ್ವಿರುದ್ಧ ವಾದುದು ಎಂದು ನಾವಂದುಕೊಂಡಿಲ್ಲ. ಒಂದಕ್ಕೊಂದು ಪೂರಕವಾದ ಕ್ಷೇತ್ರಗಳು ಅವು. ಶಿಕ್ಷಣದ ಮೂಲಕ ಮಕ್ಕಳ ಬೆಳವಣಿಗೆಗೆ ಕೆಲಸ ಮಾಡುತ್ತಿದ್ದೇವೆ. ಈ ಮಕ್ಕಳ ಹೆತ್ತವರ ಸಮಸ್ಯೆಗೆ ಜನಪ್ರತಿನಿಧಿಗಳಾಗಿ ಸ್ಪಂದಿಸಲು ಸಾಧ್ಯವಿದೆ. ರಾಜಕಾರಣಕ್ಕೆ ಒಳ್ಳೆಯವರು ಬರಬೇಕು. ಆಗ ಬದಲಾವಣೆ ಸಾಧ್ಯ’ ಎಂದು ಜಸ್ಟಿನ್‌ ಡಿಸೋಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಮನೂರು ಶಿವಶಂಕರಪ್ಪ, ಎಸ್‌.ಎಸ್. ಮಲ್ಲಿಕಾರ್ಜುನ ಮತ್ತು ವಾರ್ಡ್‌ನ ಸದಸ್ಯರು ಸ್ಪರ್ಧಿಸುವಂತೆ ತಿಳಿಸಿದ್ದರಿಂದ ಸೊಸೆಯನ್ನು ಕಣಕ್ಕೆ ಇಳಿಸಿದ್ದೇವೆ’ ಎ‌ಂದರು.

‘ರಾಜಕಾರಣದಲ್ಲಿ ವ್ಯಕ್ತಿ ಮತ್ತು ವ್ಯಕ್ತಿತ್ವ ಮುಖ್ಯ. ಸಿದ್ಧಗಂಗಾ ಸಂಸ್ಥೆಯು ಕಳೆದ 50 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅದೇ ರೀತಿ ಜನರ ಕೆಲಸ ಮಾಡಲು ಸ್ಪರ್ಧಿಸುತ್ತಿದ್ದಾರೆ. ಒಳ್ಳೆಯ ಕೆಲಸಗಳಾಗಬೇಕು. ಜನರ ಅಭಿವೃದ್ಧಿಯಾಗಬೇಕು. ಬೇರೆ ವಿಚಾರಗಳಿಗಿಂತ ಅದು ಮುಖ್ಯ’ ಎಂದು ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

*

ಸಮಾಜಸೇವೆ ಮಾಡಬೇಕು ಎಂಬ ಆಸೆ ಇತ್ತಾದರೂ ನಾನು ರಾಜಕೀಯಕ್ಕೆ ಬರುತ್ತೇನೆ ಎಂಬ ಕಲ್ಪನೆ ನಾಲ್ಕು ದಿನಗಳ ಹಿಂದಿನವರೆಗೂ ಇರಲಿಲ್ಲ.
-ರೇಖಾರಾಣಿ ಕೆ.ಎಸ್‌., ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.