ADVERTISEMENT

ದಾವಣಗೆರೆ | ಮಹಾನಗರ ಪಾಲಿಕೆಗೆ ‘ಮಿನಿಸ್ಟೀರಿಯಲ್‌’ ಪ್ರಶಸ್ತಿ

‘ಸ್ವಚ್ಛ ಸರ್ವೇಕ್ಷಣೆ’ಯಲ್ಲಿ ದಾವಣಗೆರೆಗೆ 32ನೇ ಸ್ಥಾನ, ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 6:46 IST
Last Updated 18 ಜುಲೈ 2025, 6:46 IST
ದೆಹಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರಲಾಲ್‌ ಖಟ್ಟರ್‌ ಅವರು ದಾವಣಗೆರೆ ಮಹಾನಗರ ಪಾಲಿಕೆಗೆ ‘ಮಿನಿಸ್ಟೀರಿಯಲ್‌’ ಪ್ರಶಸ್ತಿ ಪ್ರದಾನ ಮಾಡಿದರು
ದೆಹಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರಲಾಲ್‌ ಖಟ್ಟರ್‌ ಅವರು ದಾವಣಗೆರೆ ಮಹಾನಗರ ಪಾಲಿಕೆಗೆ ‘ಮಿನಿಸ್ಟೀರಿಯಲ್‌’ ಪ್ರಶಸ್ತಿ ಪ್ರದಾನ ಮಾಡಿದರು   

ದಾವಣಗೆರೆ: ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿನ ಸಾಧನೆಗಾಗಿ ದಾವಣಗೆರೆ ಮಹಾನಗರ ಪಾಲಿಕೆಗೆ ಕೇಂದ್ರ ಸರ್ಕಾರದ ‘ಸ್ವಚ್ಛ ಸರ್ವೇಕ್ಷಣೆ’ಯಲ್ಲಿ ‘ಮಿನಿಸ್ಟೀರಿಯಲ್‌’ ಪ್ರಶಸ್ತಿ ಲಭಿಸಿದೆ. ದೆಹಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರಲಾಲ್‌ ಖಟ್ಟರ್‌ ಪ್ರಶಸ್ತಿ ಪ್ರದಾನ ಮಾಡಿದರು.

ರಾಷ್ಟ್ರಮಟ್ಟದ ಸ್ವಚ್ಛತಾ ಸಮೀಕ್ಷೆಯಲ್ಲಿ 3ರಿಂದ 10 ಲಕ್ಷದ ಜನಸಂಖ್ಯೆ ಹೊಂದಿದ ನಗರ ಸ್ಥಳೀಯ ಸಂಸ್ಥೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ 32ನೇ ಸ್ಥಾನ ಪಡೆದಿದೆ. ‘ಮಿನಿಸ್ಟೀರಿಯಲ್‌’ ಪ್ರಶಸ್ತಿಗೆ ಭಾಜನವಾಗಿರುವ ರಾಜ್ಯದ ಏಕೈಕ ನಗರ ಸ್ಥಳೀಯ ಸಂಸ್ಥೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ವರ್ಷ ಸ್ವಚ್ಛ ಸರ್ವೇಕ್ಷಣಾ ಸಮಿಕ್ಷೆ ಕೈಗೊಳ್ಳುತ್ತದೆ. 2024ರ ಪ್ರಶಸ್ತಿಗೆ ಕ್ಷೇತ್ರ ಪರಿಶೀಲನೆ ನಡೆಸಿದ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಮೂರು ಹಂತದಲ್ಲಿ ಸಮೀಕ್ಷೆ ಕೈಗೊಂಡಿತ್ತು. 800 ಜನರಿಂದ ಅಭಿಪ್ರಾಯ, ಪ್ರತಿಕ್ರಿಯೆ ಸಂಗ್ರಹಿಸಿತ್ತು. ಘನತ್ಯಾಜ್ಯ ನಿರ್ವಹಣಾ ಕಾಮಗಾರಿಗಳ ಅನುಷ್ಠಾನ, ಮನೆ– ಮನೆ ಕಸ ಸಂಗ್ರಹ, ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಹಾಗೂ ಸಂಸ್ಕರಣೆ ಸೇರಿ ಹಲವು ಆಯಾಮಗಳಲ್ಲಿ ವಿಶ್ಲೇಷಣೆ ನಡೆಸಿತ್ತು.

ADVERTISEMENT

‘ಹಸಿ ಮತ್ತು ಒಣ ಕಸ ವಿಂಗಡಣೆ, ತ್ಯಾಜ್ಯ ಸಾಗಣೆ, ಸಂಗ್ರಹಿಸಿದ ತ್ಯಾಜ್ಯದ ಸಂಸ್ಕರಣೆ, ಸಾರ್ವಜನಿಕ ಉದ್ಯಾನ ನಿರ್ವಹಣೆ, ಕೆರೆ, ಬಸ್‌ ತಂಗುದಾಣ ಸೇರಿ ಹಲವು ಅಂಶಗಳನ್ನು ಪರಿಗಣಿಸಲಾಗಿದೆ. ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಇದು ಪ್ರೇರಣೆಯಾಗಿದೆ’ ಎಂದು ಮಹಾನಗರ ಪಾಲಿಕೆಯ ಪರಿಸರ ಎಂಜಿನಿಯರ್‌ ಬಸವಣ್ಣ ಸಂತಸ ವ್ಯಕ್ತಪಡಿಸಿದರು.

‘ಜೆ.ಎಚ್‌. ಪಟೇಲ್‌ ನಗರದಲ್ಲಿ ಕಾರ್ಯಾರಂಭಗೊಂಡಿರುವ ‘ಸ್ವಚ್ಛ ಗೃಹ ಕಲಿಕಾ ಕೇಂದ್ರ’ದಲ್ಲಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ. ನಗರದಲ್ಲಿ ನಿತ್ಯ 170 ಟನ್‌ ಕಸ ಸಂಗ್ರಹವಾಗುತ್ತಿದೆ. ಅವರಗೊಳ್ಳ ಬಳಿಯ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಗೊಬ್ಬರ ತಯಾರಿಸಲಾಗುತ್ತಿದೆ. ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಶೇ 90 ದಾಟಿದೆ. ಕೊಳಚೆಪ್ರದೇಶಗಳ ನಿವಾಸಿಗಳು ಕೂಡ ಕಸ ವಿಂಗಡಣೆ ಮಾಡುತ್ತಿದ್ದಾರೆ’ ಎಂದರು.

ಪಾಲಿಕೆ ಆಯುಕ್ತೆ ರೇಣುಕಾ, ಪರಿಸರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್‌.ಆರ್‌. ಜಗದೀಶ್, ಪರಿಸರ ಎಂಜಿನಿಯರ್‌ ಬಸವಣ್ಣ ಸೇರಿದಂತೆ ಕಾರ್ಮಿಕರನ್ನು ಒಳಗೊಂಡ ಪಾಲಿಕೆಯ ಹತ್ತು ಸದಸ್ಯರ ತಂಡ ಪ್ರಶಸ್ತಿ ಸ್ವೀಕರಿಸಿತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಸ್ವಚ್ಛ ಭಾರತ್‌ ಮಿಷನ್‌ ನಿರ್ದೇಶಕ ಸೆಲ್ವಮಣಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್‌ ಹಾಜರಿದ್ದರು.

ಪ್ರಶಸ್ತಿ ಪ್ರದಾನ ಮಾಡಿದ ಸಚಿವ ಮನೋಹರಲಾಲ್‌ ಖಟ್ಟರ್‌ ಪ್ರಶಸ್ತಿ ಸ್ವೀಕರಿಸಿದ ಪಾಲಿಕೆಯ 10 ಜನರ ತಂಡ ಪ್ರಶಸ್ತಿಗೆ ಭಾಜನವಾದ ರಾಜ್ಯದ ಏಕೈಕ ನಗರ

ತ್ಯಾಜ್ಯ ನಿರ್ವಹಣೆಯಲ್ಲಿ ಸಾಧಿಸಿದ ಪ್ರಗತಿಗೆ ಪ್ರಶಸ್ತಿ ಲಭಿಸಿದೆ. ಸ್ವಚ್ಛತಾ ಸಿಬ್ಬಂದಿ ಪರಿಸರ ಹಾಗೂ ಆರೋಗ್ಯ ಶಾಖೆಯ ಕಾರ್ಯದ ಫಲವಿದು
ರೇಣುಕಾ ಆಯುಕ್ತೆ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.