ADVERTISEMENT

ಹೊನ್ನಾಳಿ: ಜಾಗ ಉಳಿಸಿಕೊಳ್ಳಲು ಅಸಹಾಯಕರಾಗಿರುವ ಶಿಕ್ಷಕರು

ಟಿ.ಬಿ. ಶಾಲೆ ಎಂದೂ ಹೆಸರುವಾಸಿ ದೇವನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಎನ್.ಕೆ.ಆಂಜನೇಯ
Published 1 ಫೆಬ್ರುವರಿ 2023, 5:43 IST
Last Updated 1 ಫೆಬ್ರುವರಿ 2023, 5:43 IST
ಹೊನ್ನಾಳಿಯ ಟಿ.ಬಿ. ವೃತ್ತದಲ್ಲಿರುವ ದೇವನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ (ಎಡಚಿತ್ರ). ಶಾಲೆಯ ಮುಂಭಾಗದ ಜಾಗದಲ್ಲಿ ಶೆಡ್‌ನಲ್ಲಿ ಹೋಟೆಲ್‌ ನಿರ್ಮಿಸಿರುವುದು.
ಹೊನ್ನಾಳಿಯ ಟಿ.ಬಿ. ವೃತ್ತದಲ್ಲಿರುವ ದೇವನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ (ಎಡಚಿತ್ರ). ಶಾಲೆಯ ಮುಂಭಾಗದ ಜಾಗದಲ್ಲಿ ಶೆಡ್‌ನಲ್ಲಿ ಹೋಟೆಲ್‌ ನಿರ್ಮಿಸಿರುವುದು.   

ಹೊನ್ನಾಳಿ: ತಾಲ್ಲೂಕಿನಲ್ಲಿಯೇ ಅತ್ಯಂತ ಹಳೆಯ ಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ನಗರದ ಟಿ.ಬಿ. ವೃತ್ತದಲ್ಲಿರುವ ದೇವನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಟಿ.ಬಿ. ಶಾಲೆ) 1886ರಲ್ಲಿ ಸ್ಥಾಪನೆಯಾಗಿದ್ದು, ಶಾಲಾ ಕಟ್ಟಡಕ್ಕೀಗ 137 ವರ್ಷಗಳು ತುಂಬಿವೆ.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 180 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಆರಂಭವಾಗಿದ್ದ ಶಾಲೆಯಲ್ಲಿ 2019–20ರಿಂದ ದ್ವಿಭಾಷಾ (ಬೈಲಿಂಗ್ವಲ್‌) ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಶಾಲೆಯಲ್ಲಿ ಒಟ್ಟು 10 ಕೊಠಡಿಗಳಿದ್ದು, 5 ಕೊಠಡಿಗಳು ಸಂಪೂರ್ಣ ಹಾಳಾಗಿವೆ. ಒಂದು ಕೊಠಡಿಯಲ್ಲಿ ಹಾಳಾದ ಪೀಠೋಪಕರಣಗಳನ್ನು ತುಂಬಿದ್ದು, 4 ಕೊಠಡಿಗಳಲ್ಲಿ ಮಾತ್ರ ಪಾಠ ಪ್ರವಚನ ನಡೆಸಲಾಗುತ್ತಿದೆ. 9 ಶಿಕ್ಷಕರಿದ್ದು, ಎರಡೂ ಮಾಧ್ಯಮಗಳಲ್ಲಿ ಪಾಠ ಮಾಡುತ್ತಿದ್ದಾರೆ.

ಶಾಲೆಯು ಪ್ರಾರಂಭಿಕ ಹಂತದಲ್ಲಿ 8.30 ಎಕರೆ ಭೂಮಿ ಹೊಂದಿತ್ತು. ಹೀಗಾಗಿ ಎಲ್ಲಾ ಆಟೋಟ ಸ್ಪರ್ಧೆಗಳನ್ನು ಶಾಲೆಯ ಆವರಣದಲ್ಲಿಯೇ ನಡೆಸಲಾಗುತ್ತಿತ್ತು. 5 ಎಕರೆಗೂ ಹೆಚ್ಚು ಭೂಮಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾಯಿಸಲಾಗಿದೆ. ಉಳಿದಿರುವ 3 ಎಕರೆ ಭೂಮಿಯಲ್ಲಿಯೇ ಶಿಕ್ಷಣ ಇಲಾಖೆ, ಬಿಆರ್‌ಸಿ ಕಚೇರಿ, ಗುರುಭವನದ ಕಟ್ಟಡ, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲಾಗಿದೆ. ಹೀಗೆ ಶಾಲೆಯ ವಿಸ್ತೀರ್ಣ ದಿನೇ ದಿನೇ ಕಿರಿದಾಗುತ್ತಿದ್ದು, ಶಿಕ್ಷಕರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಶಾಲಾ ಕಟ್ಟಡ ಸಂಪೂರ್ಣ ಹಾಳಾಗಿರುವುದರಿಂದ ಆಗಾಗ ತೇಪೆ ಹಾಕುವ ಕೆಲಸ ನಡೆಯುತ್ತಿರುತ್ತದೆ. ಶಾಲಾ ಆವರಣಕ್ಕೆ ಕಾಂಪೌಂಡ್‌ ಇಲ್ಲ. ಶಾಲೆಯ ಚಾವಣಿ ದಿನೇ ದಿನೇ ಕುಸಿದು ಬೀಳುತ್ತಿದೆ. ಶೌಚಾಲಯ ಉತ್ತಮವಾಗಿಲ್ಲ, ಡೆಸ್ಕ್‌ಗಳಿಲ್ಲ, ಲ್ಯಾಬ್‍ಗಳಿಲ್ಲ, ಕಂಪ್ಯೂಟರ್‌ಗಳಿಲ್ಲ. ಬಡ ಕೂಲಿಕಾರ್ಮಿಕರ ಮಕ್ಕಳಿಗೆ ಆಸರೆಯಾಗಿರುವ ಶಾಲೆಯನ್ನು ಅಭಿವೃದ್ಧಿಪಡಿಸಲು ಗಮನಹರಿಸಬೇಕು’ ಎಂದು ಮುಖ್ಯಶಿಕ್ಷಕ ಬಿ.ಎಂ. ಶಾಂತವೀರಯ್ಯ ಮನವಿ ಮಾಡಿದ್ದಾರೆ.

‘ಶಾಲೆಯ ಮುಂಭಾಗದಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಸದ್ಯ ಉಳಿದಿರುವ ಶಾಲಾ ಜಾಗದಲ್ಲಿಯೇ 8ರಿಂದ 10 ಅಡಿ ಜಾಗ ಪಿಡಬ್ಲ್ಯೂಡಿಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಇದೇ ನೆಪದಲ್ಲಿ ಕೆಲವರು ಶಾಲೆಯ ಮುಂಭಾಗದಲ್ಲಿ ಟೆಂಟ್‌ಗಳಲ್ಲಿ ಹೋಟೆಲ್‌ಗಳನ್ನು ತೆರೆದಿದ್ದಾರೆ. ಟ್ಯಾಕ್ಸಿ ಮಾಲೀಕರು ಟ್ಯಾಕ್ಸಿ ಸ್ಟ್ಯಾಂಡ್ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಜಾಗವನ್ನು ಹದ್ದುಬಸ್ತುಗೊಳಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ
ಕ್ರಮ ಕೈಗೊಳ್ಳಬೇಕು’ ಎಂದು ಶಾಲೆಯ ಶಿಕ್ಷಕರು ಆಗ್ರಹಿಸಿದ್ದಾರೆ.

ಶಾಲೆಯಲ್ಲಿ ಓದಿದ ಗಣ್ಯಮಾನ್ಯರು

ಶಾಸಕರಾಗಿದ್ದ ದಿ.ಎಚ್.ಬಿ. ಕೃಷ್ಣಮೂರ್ತಿ ಅವರು ಇದೇ ಶಾಲೆಯಲ್ಲಿಯೇ ಓದಿದವರು. ಎಂ. ಲಕ್ಷ್ಮಣ್‍ರಾವ್ ಕಾಡಾ ಅಧ್ಯಕ್ಷರಾಗಿದ್ದಾರೆ. ಎಚ್.ತಿಪ್ಪೇರುದ್ರಸ್ವಾಮಿ, ಎಚ್.ಎಂ. ಚನ್ನಯ್ಯ ಅವರು ಸಾಹಿತಿಗಳಾಗಿದ್ದಾರೆ. ಹಿರೇಕಲ್ಮಠದ ಪೀಠಾಧ್ಯಕ್ಷರಾದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹೆಸರಾಂತ ವೈದ್ಯ ಡಾ.ರಾಜ್‍ಕುಮಾರ್, ಡಾ.ನಾಗರಾಜ್ ಹತ್ವಾರ್ ಅವರೂ ಸೇರಿ ಅನೇಕ ಗಣ್ಯರು ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ.

ಶಾಲೆಯ ಆಸ್ತಿ ಉಳಿಸಲು ನಿತ್ಯ ಹೆಣಗಾಟ

ಶಾಲೆಯ ಆಸ್ತಿಯನ್ನು ಉಳಿಸಲು ನಿತ್ಯ ಹೆಣಗಾಡುತ್ತಿದ್ದೇವೆ. ಏನೇ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡರೂ ಕಾಣದ ಕೈಗಳು ನಮ್ಮ ಪ್ರಯತ್ನಗಳನ್ನು ವಿಫಲಗೊಳಿಸುತ್ತಿವೆ. ಶಾಲಾ ಜಾಗದ ಒತ್ತುವರಿ ತಡೆಯುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು. ಕಾಲೇಜು ಮುಂಭಾಗದಲ್ಲಿ ಆರ್ಚ್ ನಿರ್ಮಾಣ ಕಾಮಗಾರಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶಾಲಾ ಆವರಣ ತಗ್ಗು ಇರುವುದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗುತ್ತದೆ. ಅದನ್ನು ಎತ್ತರಿಸಲು ಕ್ರಮ ಕೈಗೊಳ್ಳಬೇಕು.

– ನಾಗರಾಜ್ ಮಾಸಡಿ, ಎಸ್‍ಡಿಎಂಸಿ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.