ADVERTISEMENT

ಶಿಕ್ಷಕರ ಸಮರ್ಪಣಾ ಭಾವ: ಅಭಿವೃದ್ಧಿಯತ್ತ ಶಾಲೆ

ಮೆದಿಕೆರೆನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಗ್ರಾಮಸ್ಥರು, ದಾನಿಗಳ ಸಹಕಾರ: ಫಲಿತಾಂಶದಲ್ಲೂ ಶಾಲೆ ಮುಂದು

ಡಿ.ಶ್ರೀನಿವಾಸ
Published 4 ಡಿಸೆಂಬರ್ 2021, 3:53 IST
Last Updated 4 ಡಿಸೆಂಬರ್ 2021, 3:53 IST
ಜಗಳೂರು ತಾಲ್ಲೂಕಿನ ಮೆದಿಕೆರೆನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸ್ಮಾರ್ಟ್‌ಕ್ಲಾಸ್
ಜಗಳೂರು ತಾಲ್ಲೂಕಿನ ಮೆದಿಕೆರೆನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸ್ಮಾರ್ಟ್‌ಕ್ಲಾಸ್   

ಜಗಳೂರು:ಮೂಲಸೌಕರ್ಯಗಳಿಲ್ಲದೆ ಕಳೆಗುಂದಿದ್ದ ತಾಲ್ಲೂಕಿನ ಮೆದಿಕೆರೆನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರ ಕಾಳಜಿ ಹಾಗೂ ಗ್ರಾಮಸ್ಥರ ಸಹಕಾರದಿಂದ ಇಂದು ಆಕರ್ಷಕ ಚಿತ್ತಾರಗಳು ಹಾಗೂ ಸ್ಮಾರ್ಟ್ ತರಗತಿಗಳ ಮೂಲಕ ತಾಲ್ಲೂಕಿನ ಅತ್ಯುತ್ತಮ ಶಾಲೆಯಾಗಿ ಹೊರಹೊಮ್ಮಿದೆ.

ಮುಖ್ಯಶಿಕ್ಷಕ ಎಚ್.ಎನ್.ಅರುಣ್ ಕುಮಾರ್ ಹಾಗೂ ಸಹಶಿಕ್ಷಕರ ತಂಡದ ಸಮರ್ಪಣಾ ಮನೋಭಾವದಿಂದ ಮೂರು ವರ್ಷಗಳಲ್ಲಿ ಶಾಲೆಯ ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದ ಹೆಗ್ಗಳಿಕೆ ಶಾಲೆಯದ್ದು. ಶಾಲೆಯ ಸಾಧನೆಯಿಂದ ಪ್ರೇರಿತರಾದ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಉದಾರವಾಗಿ ಧನಸಹಾಯ ಮಾಡುತ್ತಿದ್ದಾರೆ. ಇದರಿಂದ ಶಾಲೆ ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ.

ಶಾಲೆಯ ಚಿತ್ತಾರಕ್ಕೆ ₹ 1.30 ಲಕ್ಷ ಕೊಟ್ಟ ಮುಖ್ಯಶಿಕ್ಷಕ: ಶಾಲಾ ಅನುದಾನ ಕೊರತೆ ಕಾರಣ ಹಲವು ವರ್ಷಗಳಿಂದ ಶಾಲೆ ಸುಣ್ಣ–ಬಣ್ಣ ಇಲ್ಲದೆ ಕಳೆಗುಂದಿತ್ತು. ಎರಡು ವರ್ಷದ ಹಿಂದೆ ಶಾಲೆಗೆ ವರ್ಗಾವಣೆಯಾಗಿ ಬಂದ ಮುಖ್ಯಶಿಕ್ಷಕ ಎಚ್.ಎನ್. ಅರುಣ್ ಕುಮಾರ್ ಅವರು ಶಾಲೆಯನ್ನು ಚಿತ್ತಾಕರ್ಷಕವಾಗಿ ಮಾಡುವ ಮೂಲಕ ಶಾಲೆಗೆ ಮಕ್ಕಳು ಖುಷಿಯಿಂದ ಬರುವಂತೆ ಪ್ರೇರೇಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಸ್ವಂತ ₹ 1.30 ಲಕ್ಷ ವ್ಯಯಿಸಿ ಇಡೀ ಕಟ್ಟಡಕ್ಕೆ ವೈಯರಿಂಗ್ ಹಾಗೂ ವಿವಿಧ ಬಣ್ಣಗಳ ಚಿತ್ರಗಳಿಂದ ಶಾಲೆಯನ್ನು ಆಕರ್ಷಕವಾಗಿಸಿದ್ದಾರೆ.

ADVERTISEMENT

ಕಲಾವಿದರನ್ನು ಕರೆಯಿಸಿ ರೈಲು ಗಾಡಿಯನ್ನು ಹೋಲುವಂತೆ ಇಡೀ ಕಟ್ಟಡವನ್ನು ಸುಂದರವಾಗಿಸಲಾಗಿದೆ. ಶಾಲೆ ಅಭಿವೃದ್ಧಿಗೆ ತಮ್ಮ ಹಣವನ್ನು ವಿನಿಯೋಗಿಸಿದ್ದಲ್ಲದೆ, ಗ್ರಾಮದ ಹಿರಿಯರನ್ನು ಕಂಡು ಶಾಲೆಯ ಮೂಲಸೌಕರ್ಯಗಳ ಅಗತ್ಯಗಳ ಬಗ್ಗೆ ಮುಖ್ಯಶಿಕ್ಷಕರು ಮನವರಿಕೆ ಮಾಡಿಕೊಟ್ಟರು. ಮುಖ್ಯಶಿಕ್ಷಕರ ಪ್ರಯತ್ನಕೆಕ ಗ್ರಾಮಸ್ಥರು ಕೈಜೋಡಿಸಿದರು. ಗ್ರಾಮದ ನಿವೃತ್ತ ಅಧಿಕಾರಿಗಳಾದ ವೆಂಕಟಸ್ವಾಮಿ, ಚಿಕ್ಕಯ್ಯ ₹ 90 ಸಾವಿರ ವೆಚ್ಚದ ಪ್ರೊಜೆಕ್ಟರ್‌ಗಳನ್ನು ಕೊಡುಗೆ ನೀಡಿದ್ದಾರೆ. ಗ್ರಾಮದ ಮುಖಂಡ ಕೆ.ಬಿ. ಕಲ್ಲೆರುದ್ರೇಶ್ ಅವರ ಪ್ರಯತ್ನದಿಂದ ಕಿಯೋನಿಕ್ಸ್ ಕಂಪನಿಯವರು ಶಾಲೆಗೆ ಅಗತ್ಯವಾಗಿರುವ ₹ 5 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ತರಗತಿ ರೂಪಿಸಿದ್ದಾರೆ.

‘ಮುಖ್ಯಶಿಕ್ಷಕ ಅರುಣ್ ಕುಮಾರ್ ಹಾಗೂ ಎಸ್‌ಡಿಎಂಸಿ ಮತ್ತು ಸಹ ಶಿಕ್ಷಕರ ಪರಿಶ್ರಮದಿಂದ ನಮ್ಮ ಗ್ರಾಮದ ಸರ್ಕಾರಿ ಪ್ರೌಢಶಾಲೆ ಖಾಸಗಿ ಶಾಲೆಯನ್ನೂ ಮೀರಿಸುವಂತೆ ಅತ್ಯುತ್ತಮ ಗುಣಮಟ್ಟ ಹೊಂದಿದೆ. ಪ್ರತಿ ವರ್ಷ ಶೇ 100ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಬರುತ್ತಿದ್ದು, ಈ ಶಾಲೆಯಲ್ಲಿ ಕಲಿಯುವ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ.ತಾಲ್ಲೂಕಿನಲ್ಲೇ ನಮ್ಮ ಗ್ರಾಮದ ಶಾಲೆ ಮಾದರಿ ಶಾಲೆಯಾಗಿದೆ’ ಎಂದು ಗ್ರಾಮದ ಎಂ.ವಿ. ಶ್ರೀನಿವಾಸ್ ಹೆಮ್ಮೆಯಿಂದ ಹೇಳಿದರು.

‘ನಮ್ಮ ತಂದೆ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ನಿವೃತ್ತರಾಗಿದ್ದಾರೆ.ಹಳ್ಳಿಗಾಡಿನ ಬಡ ಮಕ್ಕಳ ಬಗೆಗಿನ ಅವರ ಕಾಳಜಿ ಹಾಗೂ ಸ್ಫೂರ್ತಿಯಿಂದ ನಾನು ಶಾಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಕಾರಣವಾಗಿದೆ. ಶಾಲೆಯಲ್ಲಿ ಆಕರ್ಷಕ ಚಿತ್ರಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು, ಸಂವಿಧಾನದ ಪ್ರಸ್ತಾವ ಸೇರಿ ಮಕ್ಕಳ ಕಲಿಕೆಗೆ ಪೂರಕವಾದ ಎಲ್ಲಾ
ರೀತಿಯ ಪೇಂಟಿಂಗ್‌ಗಳನ್ನು ಶಾಲೆಯ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರ ಅತ್ಯುತ್ತಮವಾಗಿದೆ’ ಎಂದು ಮುಖ್ಯಶಿಕ್ಷಕ ಎಚ್.ಎನ್. ಅರುಣ್‌ಕುಮಾರ್ ಸಂತಸ ಹಂಚಿಕೊಂಡರು.

ಹಳ್ಳಿ ಶಾಲೆಯಾದರೂ ಯಾವುದೇ ಕೊರತೆಗಳಿಲ್ಲದಂತೆ ಹಾಗೂ ಆಧುನಿಕ ಸೌಲಭ್ಯದಿಂದ ಮಾದರಿ ಶಾಲೆಯಾಗಿ ರೂಪಿಸಲಾಗಿದೆ. ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಇದೆಲ್ಲಾ ಸಾಧ್ಯವಾಗಿದೆ.

ಎಚ್.ಎನ್. ಅರುಣ್‌ಕುಮಾರ್, ಮುಖ್ಯಶಿಕ್ಷಕ

ಗ್ರಾಮೀಣ ಭಾಗದ ಮಕ್ಕಳಿಗೆ ಕಂಪ್ಯೂಟರ್ ಆಧಾರಿತ ಸ್ಮಾರ್ಟ್ ತರಗತಿಗಳ ಮೂಲಕ ಪಾಠಪ್ರವಚನ ನಡಯುತ್ತಿದೆ. ಪ್ರತಿ ವರ್ಷ ಶೇ 100ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಬರುತ್ತಿದೆ.

ಎಂ.ವಿ. ಶ್ರೀನಿವಾಸ್, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.