ದಾವಣಗೆರೆ: ‘ಪಠ್ಯವು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಎಚ್ಚರಿಸುವಂತಿರಬೇಕು’ ಎಂದು ಸಾಹಿತಿ ಲೋಕೇಶ ಅಗಸನಕಟ್ಟೆ ಹೇಳಿದರು.
ನಗರದ ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಪ್ರಸರಾಂಗ ಹಾಗೂ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯ ಸಹಯೋಗದಲ್ಲಿ ಮಂಗಳವಾರ ನಡೆದ 2024-25ನೇ ಸಾಲಿನ ರಾಜ್ಯ ಶಿಕ್ಷಣ ನೀತಿಯ ಪದವಿ ಕನ್ನಡ ಭಾಷಾ ಪಠ್ಯ ಪುಸ್ತಕಗಳ ಲೋಕಾರ್ಪಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ತಂತ್ರಜ್ಞಾನದ ಯುಗದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗೆ ಬರುತ್ತಿಲ್ಲ. ಆದರೂ, ಹಾಜರಾತಿ ನೀಡುವ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳಿಗೆ ಜ್ಞಾನ ಧಾರೆ ಎರೆಯುವುದು ಹಾಗೂ ಅವರೊಳಗಿನ ಮಾನವೀಯ ಗುಣಗಳನ್ನು ಜೀವಂತವಾಗಿಡುವುದು ಪ್ರಾಧ್ಯಾಪಕರ ಜವಾಬ್ದಾರಿಯಾಗಿದೆ’ ಎಂದರು.
‘ಪ್ರಾಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಪಠ್ಯವು ಪೂರಕವಾಗಿರಬೇಕು. ಯಾವ ವಿಷಯವನ್ನು ನೀಡಬೇಕು ಎಂಬ ಅರಿವು ಪಠ್ಯ ರಚನೆಯ ಸಂಪಾದಕೀಯ ಮಂಡಳಿಗೆ ಇರಬೇಕು. ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಸಾಹಿತ್ಯದ ಅಭಿರುಚಿ ಮೂಡಿಸಬೇಕು’ ಎಂದು ಹೇಳಿದರು.
‘ಒತ್ತಡಕ್ಕೆ ಒಳಗಾಗಿ ಪಠ್ಯದಲ್ಲಿ ಕೆಲವು ಪದ್ಯಗಳನ್ನು ಸೇರಿಸಿದಂತಿದೆ. ಲೇಖಕರು ಅಪರಿಚಿತರಾದರೂ, ಅವರ ಪದ್ಯವಾದರೂ, ಅರ್ಥವಾಗುವಂತಿರಬೇಕು. ಪಠ್ಯದಲ್ಲಿನ ಕೆಲವು ಗದ್ಯ –ಪದ್ಯಗಳು ಪ್ರಾಧ್ಯಾಪಕರಿಗೇ ಅರ್ಥವಾಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಏನು ಅರ್ಥವಾಗುತ್ತದೆ’ ಎಂದು ಪ್ರಶ್ನಿಸಿದರು.
‘ಪಠ್ಯವು ಕೆಲವು ಮಿತಿಗಳ ನಡುವೆಯೂ ಸಾರ್ಥಕತೆ ಪಡೆದಿದೆ. ಪುಸ್ತಕಗಳ ವಿನ್ಯಾಸವೂ ಚೆನ್ನಾಗಿದೆ. ಎಲ್ಲ ಪಠ್ಯಕ್ಕೂ ಥೀಮ್ ಇದೆ. ಮಾನವೀಯತೆ, ಜಾಗತೀಕರಣ ಸೇರಿದಂತೆ ಬೇರೆ ಬೇರೆ ವಿಷಯಗಳಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಎಫ್.ಡಿ, ಬಿ.ಎಫ್.ಎ ಕೋರ್ಸ್‌ಗಳ ಕನ್ನಡ ಭಾಷಾ ಪಠ್ಯ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಪ್ರಾಚಾರ್ಯ ಗುರು ಎ.ಸಿ. ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಶಿವಕುಮಾರ ಕಣಸೋಗಿ, ಸ್ನಾತ್ತಕ ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಜೋಗಿನಕಟ್ಟೆ ಮಂಜುನಾಥ, ಅಧ್ಯಾಪಕರ ವೇದಿಕೆಯ ಕಾರ್ಯದರ್ಶಿ ಅಂಜನಪ್ಪ ಎಸ್.ಆರ್., ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಷಣ್ಮುಖ ಕೆ. ಉಪಸ್ಥಿತರಿದ್ದರು.
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
‘ಕನ್ನಡ ಪಠ್ಯವು ಸರಳವಾಗಿರಲಿ’ ‘
ಪಠ್ಯ ರಚನೆಗೆ ಹಿರಿಯ ಪ್ರಾಧ್ಯಾಪಕರ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಇದಕ್ಕಾಗಿ ವರ್ಷದ ಮುಂಚೆಯೇ ಸಿದ್ಧತೆ ನಡೆಸಬೇಕು. ಅವಸರದಲ್ಲಿ ಪಠ್ಯ ರಚಿಸುವುದರಿಂದ ದೋಷಗಳು ಉಳಿಯುತ್ತಿವೆ’ ಎಂದು ಪಠ್ಯ ಪುಸ್ತಕ ಲೋಕಾರ್ಪಣೆಗೊಳಿಸಿದ ದಾವಣಗೆರೆ ವಿಶ್ವವಿದ್ಯಾಲಯದ ಬಿ.ಡಿ.ಕುಂಬಾರ ಹೇಳಿದರು. ‘ವಿಜ್ಞಾನ ವಿದ್ಯಾರ್ಥಿಗಳಿಗೂ ಸುಲಭವಾಗಿ ಅರ್ಥವಾಗುವಂತೆ ಕನ್ನಡ ಪಠ್ಯವು ಸರಳವಾಗಿರಬೇಕು. ಕಠಿಣವಾದ ಪಠ್ಯವನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ವಿವರಿಸುವ ಬಗ್ಗೆ ಚರ್ಚಿಸಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.