ADVERTISEMENT

ಪಾಲಿಕೆಯಲ್ಲಿ ಸ್ಪಷ್ಟ ಬಹುಮತ: ಉಗ್ರಪ್ಪ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 10:39 IST
Last Updated 10 ನವೆಂಬರ್ 2019, 10:39 IST
ವಿ.ಎಸ್‌.ಉಗ್ರಪ್ಪ
ವಿ.ಎಸ್‌.ಉಗ್ರಪ್ಪ   

ದಾವಣಗೆರೆ: ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಹಿಂದೆ ನೀಡಿದ ಅಧಿಕಾರ ವಿಕೇಂದ್ರೀಕರಣ, ಜನ‍ಪರ ಆಡಳಿತವೇ ಅದಕ್ಕೆ ಕಾರಣವಾಗಲಿದೆ’ ಎಂದರು.

‘ಕಪ್ಪು ಹಣ ತರುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ. ಬೆಲೆ ಏರಿಕೆಯನ್ನು ನಿಯಂತ್ರಿಸುತ್ತೇವೆ ಎಂದೆಲ್ಲ ಪುಂಖಾನುಪುಂಖವಾಗಿ ಭರವಸೆಗಳನ್ನು ನೀಡಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿತ್ತು. ಈಗ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಜನರನ್ನು ಮರಳು ಮಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಬಡತನ, ನಿರುದ್ಯೋಗ ಹೋಗಲಾಡಿಸಲು ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಶಿಕ್ಷಣ, ಆರೋಗ್ಯ, ರಸ್ತೆ, ರೈಲು ಸೇರಿ ಎಲ್ಲ ಕ್ಷೇತ್ರಗಳಲ್ಲಿ ಕೆಲಸಗಳು ಆಗುತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

ಜಿಡಿಪಿ 5ಕ್ಕೆ ಕುಸಿದಿದೆ. ಹಸಿವಿನಿಂದ ಬಳಲುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ ಭಾರತಕ್ಕಿಂತ ಮುಂದಿವೆ. ಸಿಮೆಂಟ್‌, ಸ್ಟೀಲ್‌, ಅಟೊಮೊಬೈಲ್‌ ಕೈಗಾರಿಕೆಗಳು, ಸರ್ಕಾರಿ ಸೆಕ್ಟರ್‌ಗಳು ಬಾಗಿಲು ಹಾಕುತ್ತಿವೆ. ದೇಶವನ್ನು ಡೋಲಾಯಮಾನ ಸ್ಥಿತಿಗೆ ತಂದು ಇಟ್ಟಿದ್ದಾರೆ ಎಂದರು.

ಡಿ.ಕೆ.ಶಿವಕುಮಾರ್‌ ಮೇಲೆ ಬಿಜೆಪಿ ಸೇಡು:

ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ನ ನಿಷ್ಠಾವಂತರು. ಹೈಕಮಾಂಡ್‌ ತಿಳಿಸಿದ್ದನ್ನು ಪಕ್ಷದ ಹಿತದೃಷ್ಟಿಯಿಂದ ಮಾಡುವವರು. ಗುಜರಾತಿನಲ್ಲಿ ರಾಜ್ಯಸಭೆಗೆ ಆಯ್ಕೆ ನಡೆಯುವ ವೇಳೆ ಅಹ್ಮದ್‌ ಪಟೇಲ್‌ ಅವರ ಆಯ್ಕೆ ತಪ್ಪಿಸಲು ಬಿಜೆಪಿ ಪ್ರಯತ್ನಿಸಿತ್ತು. ಆಗ ಕಾಂಗ್ರೆಸಿನ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ರಕ್ಷಿಸಿದ ಪ್ರಕರಣದಲ್ಲಿ ಶಿವಕುಮಾರ್‌ ಪಾತ್ರ ಮಹತ್ವದ್ದು. ಇದರಿಂದ ಅಮಿತ್‌ ಶಾಗೆ ಸೋಲಾಯಿತು. ಅಲ್ಲಿಂದ ಸೇಡು ಆರಂಭವಾಯಿತು ಎಂದು ವಿಶ್ಲೇಷಿಸಿದರು.

ಐಟಿ, ಇಡಿ, ಸಿಬಿಐ ದಾಳಿಗಳು ಹಲವರ ಮೇಲೆ ನಡೆದಿವೆ. ಶಿವಕುಮಾರ್‌ ಕುಟುಂಬಕ್ಕೆ ನೀಡಿದಷ್ಟು ಕಿರುಕುಳ ಬೇರೆ ಯಾರಿಗೂ ನೀಡಿಲ್ಲ. ಅದಕ್ಕೆ ರಾಜಕೀಯವೇ ಕಾರಣ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್‌, ಮುಖಂಡರಾದ ಲಿಯಾಕತ್‌ ಅಲಿ, ಅಲ್ಲಾವಲಿ ಗಾಜಿಖಾನ್‌, ಅಯಾಜ್‌, ಅಬುಸಲಿಹಾ ಅವರೂ ಇದ್ದರು.

‘ಸರ್ಕಾರವನ್ನು ಬಿಜೆಪಿಯೇ ಉರುಳಿಸುತ್ತದೆ’

ಈಗಿನ ಸರ್ಕಾರವನ್ನು ಬೇರೆ ಯಾರೂ ಅತಂತ್ರಗೊಳಿಸಬೇಕಿಲ್ಲ. 2011ರಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಸಿದ ಬಿಜೆಪಿಯ ಶಕ್ತಿ ಮತ್ತು ವ್ಯಕ್ತಿಗಳೇ ಈ ಬಾರಿಯೂ ಆ ಕೆಲಸ ಮಾಡಲಿದ್ದಾರೆ. ಬಿಜೆಪಿಯಲ್ಲಿರುವ ಬಣ ರಾಜಕೀಯದಿಂದ ಸರ್ಕಾರ ಉರುಳಲಿದೆ ಎಂದು ಉಗ್ರಪ್ಪ ತಿಳಿಸಿದರು.

ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ ಆಡಿದ ಮಾತುಗಳು, ದೇವೇಗೌಡರ ಮಾತುಗಳು ಹೇಗಿದ್ದವು. ಈಗ ಹೇಗೆ ಬದಲಾಗಿವೆ ಎಂಬುದನ್ನು ಜನ ಗಮನಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.