ADVERTISEMENT

ಕೊರೊನಾ ಪಾಡ್‌ ಮುಗಿಯಿತು: ಶಾಮನೂರು ಶಿವಶಂಕರಪ್ಪ

ಹೆದರುವಂಥದ್ದೇನಿಲ್ಲ: ಗುಣಮುಖರಾದ ಶಾಸಕ ಶಾಮನೂರು ಶಿವಶಂಕರಪ್ಪ

ಬಾಲಕೃಷ್ಣ ಪಿ.ಎಚ್‌
Published 15 ಆಗಸ್ಟ್ 2020, 20:15 IST
Last Updated 15 ಆಗಸ್ಟ್ 2020, 20:15 IST
ಬೆಂಗಳೂರು ಸ್ಪರ್ಶ ಆಸ್ಪತ್ರೆಯಿಂದ ಬಿಡುಗಡೆಗೊಂಡ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಪುತ್ರಿ  ಮೀನಾ ಪಾಟೀಲ್ ಹಾಗೂ ಅಳಿಯ ಡಾ.ಶರಣ್ ಪಾಟೀಲ್ ಜತೆ
ಬೆಂಗಳೂರು ಸ್ಪರ್ಶ ಆಸ್ಪತ್ರೆಯಿಂದ ಬಿಡುಗಡೆಗೊಂಡ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಪುತ್ರಿ  ಮೀನಾ ಪಾಟೀಲ್ ಹಾಗೂ ಅಳಿಯ ಡಾ.ಶರಣ್ ಪಾಟೀಲ್ ಜತೆ   

ದಾವಣಗೆರೆ: ‘ಕೊರೊನಾ ಪಾಡ್‌ ಮುಗಿಯಿತು. ಆರಾಮ ಇದ್ದೀನಿ. ಬಂದರೆ ಒಂದು ವಾರ ಇರುತ್ತದೆ ಅಷ್ಟೇ. ಅದರಲ್ಲಿ ಹೆದರುವಂಥದ್ದೇನಿಲ್ಲ’.

ಕೊರೊನಾಮುಕ್ತರಾದ 90ರ ಹರೆಯದ ಶಾಸಕ ಶಾಮನೂರು ಶಿವಶಂಕರಪ್ಪ ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡ ಅನುಭವದ ಮಾತುಗಳಿವು.

‘ಆಗಾಗ ಪರೀಕ್ಷೆ ಮಾಡಿಸುತ್ತಿದ್ದೆ. ನಾಲ್ಕನೇ ಬಾರಿ ಪರೀಕ್ಷೆ ಮಾಡಿದಾಗ ಪಾಸಿಟಿವ್‌ ಎಂದು ಬಂದಿತ್ತು. ನನ್ನ ಅಳಿಯನ ಆಸ್ಪತ್ರೆ ‘ಸ್ಪರ್ಶ’ದಲ್ಲಿ ದಾಖಲಾದೆ. ಹೇಳಿಕೊಳ್ಳುವಂಥ ಔಷಧ, ಚಿಕಿತ್ಸೆಯನ್ನೇನೂ ಪಡೆದಿಲ್ಲ. ಬೆಳಿಗ್ಗೆ ಒಂದು ಇಂಜೆಕ್ಷನ್‌ ಕೊಟ್ಟರು. ದಿನಕ್ಕೆ ಮೂರು ಬಾರಿ ಮೊಬಿಲೈಸೇಸನ್‌ ಮಾಡಿದರು. ನನಗೆ ಕೊರೊನಾ ಸೋಂಕಿನ ಯಾವ ಲಕ್ಷಣಗಳೂ ಇರಲಿಲ್ಲ. ಊಟ ಮನೆಯಿಂದ ಬರುತ್ತಿತ್ತು’ ಎಂದು ವಿವರಿಸಿದರು.

ADVERTISEMENT

‘ಸಾರ್ವಜನಿಕರ ರಂಗದಲ್ಲಿ ಇರುವುದರಿಂದ ಜನ ಬರುತ್ತಾರೆ, ಹೋಗುತ್ತಾರೆ. ಮಗ, ಸೊಸೆ ಮತ್ತು ಅವನ ಕುಟುಂಬಕ್ಕೆ ಕೊರೊನಾ ಬಂದಿತ್ತು. ಮೂರು ದಿನಗಳ ಬಳಿಕ ಪರೀಕ್ಷೆ ಮಾಡಿಸಿದಾಗ ನನಗೂ ಸೋಂಕು ತಗುಲಿತ್ತು. ಈಗ ನಾನು ಬೆಂಗಳೂರಿನಲ್ಲಿ, ಅವರು ದಾವಣಗೆರೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದೇವೆ’ ಎಂದು ತಿಳಿಸಿದರು.

‘ಜನರು ಹೆದರುವ ಅವಶ್ಯಕತೆ ಇಲ್ಲ. ಹೆದರುವುದರಿಂದಲೇ ಸಮಸ್ಯೆ ಉಂಟಾಗುತ್ತದೆ. ಸ್ವಲ್ಪ ಎಚ್ಚರದಿಂದ ಇರಿ. ಓಡಾಡುವಾಗ, ಜನರಲ್ಲಿ ಮಾತನಾಡುವಾಗ ಮಾಸ್ಕ್‌ ಹಾಕಿಕೊಂಡಿರಿ. ಸುಮ್ಮನೆ ಯಾರ ಹತ್ತಿರ ಹೋಗಬೇಡಿ. ಅಂತರ ಕಾಪಾಡಿಕೊಂಡು ಇರಿ. ಇಷ್ಟಿದ್ದರೆ ಕೊರೊನಾ ಬರುವುದಿಲ್ಲ’ ಎಂದು ಸಲಹೆ ನೀಡಿದರು.

‘ನೆಗಡಿ, ಜ್ವರ ಬಾರದಂತೆ ಜಾಗೃತರಾಗಿರಿ. ಬಂದರೂ ಒಂದು ವಾರದ ನಂತರ ಗುಣಮುಖರಾಗಿ ಬಿಡುತ್ತೀರಿ. ಹೆದರಿಕೊಂಡು ಅಪಾಯ ಆಹ್ವಾನಿಸುವ ಬದಲು ಗುಂಡಿಗೆ ಗಟ್ಟಿಮಾಡಿಕೊಂಡು ಬದುಕಿರಿ’ ಎಂದು ಜನರಿಗೆ ಧೈರ್ಯ ತುಂಬಿದರು.

‘ನಂಗೆ ಕೊರೊನಾ ಬಂದು 9 ದಿನಗಳು ಮುಗಿದಿವೆ. 14 ದಿನ ಮುಗಿಸಿಕೊಂಡು ದಾವಣಗೆರೆಗೆ ಬರುತ್ತೇನೆ. ಯಾರೂ ನನ್ನನ್ನು ನೋಡಲು, ಆರೋಗ್ಯ ವಿಚಾರಿಸಲು ಬರುವುದು ಬೇಡ. ಕುಂದುಕೊರತೆ ಬಗ್ಗೆ ಮಾತನಾಡಲು ಏನಾದರೂ ಇದ್ದರೆ ನನ್ನ ಮೊಬೈಲ್‌ಗೆ (9844097399) ಕರೆ ಮಾಡಿ’ ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.