ADVERTISEMENT

ಕೋವಿಡ್‌ನಿಂದ ಸಾವು ಸಂಭವ ಕಡಿಮೆ; ಅವಕಾಶವಾದಿ ರೋಗಾಣುಗಳೇ ಸಾವಿಗೆ ಕಾರಣ

ಸೋಂಕು ನಿಮಿತ್ತ ಮಾತ್ರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 19:30 IST
Last Updated 19 ಜುಲೈ 2020, 19:30 IST
ಡಾ.ಜಿ.ಡಿ. ರಾಘವನ್‌
ಡಾ.ಜಿ.ಡಿ. ರಾಘವನ್‌   

ದಾವಣಗೆರೆ: ಕೊರೊನಾದಿಂದ ಸಾವು ಸಂಭವಿಸುವ ಸಾಧ್ಯತೆ ತುಂಬಾ ಕಡಿಮೆ. ಇದು ಮನುಷ್ಯನ ಶ್ವಾಸಕೋಶವನ್ನು ಆವರಿಸುವ ಒಂದು ವೈರಾಣು. ವೈರಾಣುಗಳ ವಿಶೇಷತೆ ಏನೆಂದರೆ, ಇವು ಮನುಷ್ಯನ ದೇಹದ ಒಳಗೆ ಹೇಗೆ ಪ್ರವೇಶ ಮಾಡುತ್ತವೆಯೋ, ಹಾಗೆಯೇ ಹೊರಗೆ ಹೋಗುತ್ತವೆ.

ಯಾವುದೇ ವೈರಾಣುಗಳನ್ನು ಕೊಲ್ಲಲು ಸಾಧ್ಯವಿಲ್ಲ. ಅವುಗಳು ಗುಣಾಕಾರ ಮಾದರಿಯಲ್ಲಿ ಹೆಚ್ಚಾಗುವುದನ್ನು ನಿಯಂತ್ರಿಸಬಹುದು. ಕೊರೊನಾ ವೈರಸ್‌ ಅನ್ನು ಸಹ ಸಾಯಿಸಲು ಸಾಧ್ಯವಿಲ್ಲ. ಅದು ದೇಹದ ಒಳಗೆ ಪ್ರವೇಶ ಮಾಡಿದ ಮೇಲೆ ರೋಗ ಲಕ್ಷಣಗಳನ್ನು ಉಂಟು ಮಾಡಲು ಪ್ರಾರಂಭಿಸುತ್ತದೆ ಅಥವಾ ಸುಪ್ತ ಸ್ಥಿತಿಯಲ್ಲಿ ಇರುತ್ತದೆ. ಲಕ್ಷಣಗಳ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ.

ಯಾವುದೇ ವೈರಾಣು ದೇಹದ ಒಳಗೆ ಪ್ರವೇಶ ಮಾಡಿದ ಮೇಲೆ ಮಾನವನ ದೇಹದ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಆಗ ಬೇರೆ ಅವಕಾಶವಾದಿ ರೋಗಾಣುಗಳು ದೇಹದ ಒಳಗೆ ಪ್ರವೇಶಿಸಿ ರೋಗದ ತೀವ್ರತೆಯನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಕೊ–ಮೊರ್ಬಿಡಿಟಿ ಅಥವಾ ಸಹ ಅಸ್ವಸ್ಥಗಳಾದ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಹೃದ್ರೋಗ ಮುಂತಾದ ಸಮಸ್ಯೆಗಳಿದ್ದರೆ ವೈರಸ್ ಸೋಂಕು ಶ್ವಾಸಕೋಶದ ಕೆಳ ಭಾಗಗಳಿಗೆ ಹರಡಿ ನ್ಯುಮೋನಿಯಾಕ್ಕೆ ತಿರುಗುತ್ತದೆ. ಈ ಹಂತದಲ್ಲಿ ರೋಗಿಯನ್ನು ಐಸಿಯುಗೆ ವರ್ಗಾಯಿಸಿ ಚಿಕಿತ್ಸೆ ಮುಂದುವರಿಸಬೇಕಾಗುತ್ತದೆ. 60 ವರ್ಷ ಮೇಲಿನ ವ್ಯಕ್ತಿಗಳಿದ್ದರೆ ಸಮಸ್ಯೆ ಇನ್ನೂ ತೀವ್ರಗೊಳ್ಳುವುದರಿಂದ ಇನ್‌ಟ್ಯೂಬ್‌ ಅಥವಾ ವೆಂಟಿಲೇಟರ್ ಅಥವಾ ಜೀವರಕ್ಷಕ ಸಾಧನ ಅಳವಡಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಯ ಅಳಿವು–ಉಳಿವು 50-50 ಮಾತ್ರ.

ADVERTISEMENT

10ರಿಂದ 50 ವರ್ಷದ ವಯೋಮಾನದ, ಯಾವುದೇ ಲಕ್ಷಣಗಳಿಲ್ಲದ, ಸಹ ಅಸ್ವಸ್ಥ ಇಲ್ಲದ ವ್ಯಕ್ತಿಗಳು ಶೇ 99.99ರಷ್ಟು ಗುಣಮುಖರಾಗುತ್ತಾರೆ.

ಇಲ್ಲಿಯವರೆಗೆ ಕೊರೊನಾ ಸೋಂಕಿನಿಂದ ಮರಣ ಸಂಭವಿಸಿವೆ ಎಂದು ಈಗ ಗುರುತಿಸಲಾದ ಪ್ರಕರಣಗಳಲ್ಲಿ ಕೊರೊನಾ ಒಂದು ಕಾಂಟ್ರಿಬ್ಯೂಟರಿ ಅಥವಾ ನಿಮಿತ್ತ ಮಾತ್ರ. ಹೀಗಾಗಿ, ಕೊರೊನಾ ಸೋಂಕು ಅಥವಾ ಕೋವಿಡ್ ಬಗ್ಗೆ ಹೆದರುವ ಅವಶ್ಯಕತೆಯೇ ಇಲ್ಲ. ಕೊರೊನಾ ವೈರಾಣು ವ್ಯಕ್ತಿಯ ಸಾವಿನೊಂದಿಗೆ ತಾನೂ ಸಾಯುತ್ತದೆ. ಒಂದು ಅಧ್ಯಯನದ ಪ್ರಕಾರ ಸೋಂಕು ಇರುವ ವ್ಯಕ್ತಿಯು ಮೃತಪಟ್ಟರೆ ವೈರಾಣು 2ರಿಂದ 6 ತಾಸು ಮಾತ್ರ ಜೀವಂತವಾಗಿರುತ್ತದೆ. ಮೃತದೇಹದಲ್ಲಿ ವೈರಾಣು ಇಲ್ಲದೇ ಇದ್ದರೂ ದೇಹದ ಹೊದಿಕೆ, ಮೇಲ್ಮೈ ಇತ್ಯಾದಿಗಳು ವೈರಸ್‌ನಿಂದ ಕಲುಷಿತವಾಗಿರುತ್ತವೆ. ಆದ್ದರಿಂದ ಶವಸಂಸ್ಕಾರ ಮಾಡುವಾಗ ಎಚ್ಚರದಿಂದ ಇರಬೇಕು. ಹೆದರುವ, ಅಸಹ್ಯ ಪಡುವ ಅಥವಾ ಆತಂಕಕ್ಕೆ ಒಳಗಾಗುವ ಅವಶ್ಯಕತೆಯೇ ಇಲ್ಲ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದವರು ಸೋಂಕು ಹರಡುವ ವಾಹಕರಾಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಬಹಳ ಮುಂಜಾಗರೂಕ ಕ್ರಮಗಳನ್ನು ವಹಿಸಿದೆ.

ಜನರು ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳ ಅನ್ವಯ ನಡೆದುಕೊಳ್ಳಬೇಕು. ಆರೋಗ್ಯ ಇಲಾಖೆಯ ಸೂಚನೆಗಳನ್ನು, ನೀತಿ–ನಿಯಮಗಳನ್ನು ಪಾಲಿಸಬೇಕು. ಕೊರೊನಾ ಸಾಂಕ್ರಾಮಿಕವು ಸಮುದಾಯದ ಒಳಗಡೆ ಪ್ರವೇಶಿಸದಂತೆ ಮೊದಲು ತಾವೇ ನಿರ್ಬಂಧ ಹಾಕಿಕೊಳ್ಳಬೇಕು. ಕೊರೊನಾ ಮಾರಣಾಂತಿಕ ಅಲ್ಲದಿದ್ದರೂ ಒಂದು ಗಂಭೀರವಾದ ಸೋಂಕು. ಮುಂದಿನ ಆರು ತಿಂಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಅನವಶ್ಯಕ ಪ್ರಯಾಣ, ಸ್ವೇಚ್ಛಾಚಾರಗಳಿಗೆ ಕಡಿವಾಣ ಹಾಕಬೇಕು.

(ಲೇಖಕರು: ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.