ADVERTISEMENT

ಪತ್ನಿಯ ಕೊಂದ ವೈದ್ಯ: 9 ತಿಂಗಳ ಬಳಿಕ ಪ್ರಕರಣ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:57 IST
Last Updated 25 ಅಕ್ಟೋಬರ್ 2021, 3:57 IST

ಹೊನ್ನಾಳಿ: ಪತ್ನಿಗೆ ಹೈಡೋಸ್‌ ಇಂಜೆಕ್ಷನ್‌ ನೀಡಿ ವೈದ್ಯ ತನ್ನ ಪತ್ನಿಯನ್ನೇ ಬುದ್ಧಿವಂತಿಕೆಯಿಂದ ಕೊಲೆ ಮಾಡಿದ್ದು, 9 ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿರುವ ಡಾ. ಚನ್ನೇಶ್ವರಪ್ಪ ಕೊಲೆ ಆರೋಪಿ.

ಡಾ. ಚನ್ನೇಶ್ವರಪ್ಪ ಮತ್ತು ಹಿರೆಕೇರೂರು ತಾಲ್ಲೂಕಿನ ಚಂದ್ರಪ್ಪ ಅವರ ಮಗಳು ಶಿಲ್ಪಾ ಅವರನ್ನು 2005ರಲ್ಲಿ ಮದುವೆಯಾಗಿದ್ದರು. ಇವರಿಗೆ 15 ವರ್ಷದ ಮಗಳು ಮತ್ತು 10 ವರ್ಷದ ಮಗ ಇದ್ದಾರೆ.

ADVERTISEMENT

ಕಳೆದ ಫೆಬ್ರುವರಿಯಲ್ಲಿ ಶಿಲ್ಪಾ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಪೋಷಕರಿಗೆ ಈ ಸಾವು ಸಂಶಯವನ್ನುಂಟು ಮಾಡಿತ್ತು. ಈ ಬಗ್ಗೆ ವಿಚಾರಿಸಿದಾಗ ಕಡಿಮೆ ರಕ್ತದೊತ್ತಡ ಇದ್ದಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾಳೆ ಎಂದು ಚನ್ನೇಶ್ವರಪ್ಪ ತಿಳಿಸಿದ್ದರು. ಆದರೆ ಆಸ್ಪತ್ರೆಗೆ ಒಯ್ದು ಮರಣೋತ್ತರ ಪರೀಕ್ಷೆ ಮಾಡಿಸದೇ ತಂದಿರುವುದು ಪೋಷಕರ ಅನುಮಾನವನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. ಶವವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರ ಎಡಭುಜದ ಮೇಲೆ ಸೂಜಿಯಿಂದ ಚುಚ್ಚಿದ ಗುರುತುಗಳು ಕಂಡು ಬಂದಿದ್ದವು. ಬಾಯಿಂದ ರಕ್ತ ಮಿಶ್ರಿತ ನೊರೆ ಕಂಡು ಬಂದಿತ್ತು.

ತಡವಾಗಿ ದೂರು: ಈ ಪ್ರಕರಣ ಫೆಬ್ರುವರಿಯಲ್ಲಿ ನಡೆದಿದ್ದರೂ ಪೋಷಕರು ದೂರು ನೀಡಿರಲಿಲ್ಲ. ಗ್ರಾಮದ ಪಂಚಮರ ಸಮಕ್ಷಮದಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ದೂರು ಕೊಡದಂತೆ ವೈದ್ಯ ಮಾಡಿಕೊಂಡಿದ್ದ. ಮಗಳು ಭೂಮಿಕಾ ಮತ್ತು ಮಗ ಮಲ್ಲಿಕಾರ್ಜುನನಿಗೆ ಜಮೀನು, ನಿವೇಶನ ಹಾಗೂ ಹಣದ ನೆರವು ನೀಡುವ ಭರವಸೆ ನೀಡಿ ಅದನ್ನು ಬರೆದು ಕೊಟ್ಟಿದ್ದ. ಆದರೆ ಬರು ಬರುತ್ತಾ ತಾನು ಕೊಟ್ಟ ಮಾತನ್ನೇ ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದ. ಒತ್ತಾಯ ಮಾಡಿದರೆ ಮಗ, ಮಗಳನ್ನು ಅವಳ ತಾಯಿಯಂತೆಯೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಹಾಗಾಗಿ ಶಿಲ್ಪಾಳ ಪೋಷಕರು ಸೆ.28ರಂದು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಸಿಪಿಐ ದೇವರಾಜ್ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿದೆ. ಇದೀಗ ಓವರ್‌ಡೋಸ್‌ ನೀಡಿ ಕೊಲೆ ಮಾಡಿರುವುದು ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿದೆ.

ಶಿಲ್ಪಾಗೆ ತೀವ್ರವಾದ ತಲೆನೋವಿತ್ತು. ಅದಕ್ಕೆ ಆಕೆ ಮಾತ್ರೆ ತೆಗೆದುಕೊಂಡಿದ್ದಳು ಎಂದು ಡಾ. ಚನ್ನೇಶಪ್ಪ ತಿಳಿಸಿದ್ದರು. ಆದರೆ ಶಿಲ್ಪಾ ಬಿಎಸ್ಸಿ, ಬಿಇಡಿ ಶಿಕ್ಷಣ ಪಡೆದಿದ್ದಳು. ಆಕೆಗೆ ಯಾವ ಕಾಯಿಲೆಯೂ ಇರಲಿಲ್ಲ. ಚನ್ನೇಶ್ವರಪ್ಪ ಮತ್ತು ಅವರ ತಾಯಿ ಜಯಮ್ಮ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದ ಬಗ್ಗೆ ಮಗಳು ಆಗಾಗ ಫೋನ್ ಮಾಡಿ ಕಣ್ಣೀರಿಡುತ್ತಾ ತಿಳಿಸಿದ್ದರು ಎಂದು ಪೋಷಕರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.