ADVERTISEMENT

ಬಾಕಿ ಉಳಿದ ಪಾಠ ಮುಗಿಸಿದ ಬಳಿಕವೇ ನಡೆಯಲಿದೆ ಪರೀಕ್ಷೆ

ಪ್ರಜಾವಾಣಿ ಫೋನ್‌ ಇನ್‌ನಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 14:45 IST
Last Updated 24 ಏಪ್ರಿಲ್ 2020, 14:45 IST
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಡಾ. ಬಸವರಾಜ ಬಣಕಾರ ಉತ್ತರಿಸಿದರು. ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್‌, ಪರೀಕ್ಷಾಂಗ ಕುಲಸಚಿವೆ ಡಾ. ಎಚ್‌.ಎಸ್‌. ಅನಿತಾ ಇದ್ದರು.
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಡಾ. ಬಸವರಾಜ ಬಣಕಾರ ಉತ್ತರಿಸಿದರು. ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್‌, ಪರೀಕ್ಷಾಂಗ ಕುಲಸಚಿವೆ ಡಾ. ಎಚ್‌.ಎಸ್‌. ಅನಿತಾ ಇದ್ದರು.   

ದಾವಣಗೆರೆ: ‘ಲಾಕ್‌ಡೌನ್‌ ಅವಧಿಯಲ್ಲೂ ವಿದ್ಯಾರ್ಥಿಗಳಿಗೆ ಪಾಠ ಮಾಡಲು ವಿಶ್ವವಿದ್ಯಾಲಯದ ಎಲ್ಲಾ ಪ್ರಾಧ್ಯಾಪಕರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಬಾಕಿ ಉಳಿದಿರುವ ಪಾಠಗಳನ್ನು ಲಾಕ್‌ಡೌನ್‌ ಮುಗಿದ ಬಳಿಕ ಎರಡು–ಮೂರು ವಾರಗಳಲ್ಲಿ ಕ್ಷಿಪ್ರ ಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಆ ಬಳಿಕ ಪರೀಕ್ಷೆ ನಡೆಸಿ, ಬೇಗನೆ ಫಲಿತಾಂಶ ನೀಡಲಾಗುವುದು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

ಶುಕ್ರವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ ಫೋನ್‌ ಇನ್‌' ಕಾರ್ಯಕ್ರಮದಲ್ಲಿ ಆನ್‌ಲೈನ್‌ ಪಾಠ, ಪರೀಕ್ಷೆ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಕುಲಪತಿ ಉತ್ತರಿಸಿದರು. ಶೈಕ್ಷಣಿಕ ಚಟುವಟಿಕೆ ಪೂರ್ಣಗೊಳಿಸಲು ವಿಶ್ವವಿದ್ಯಾಲಯ ಕೈಗೊಳ್ಳಲಿರುವ ಪರಿಹಾರೋಪಾಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳ ಆತಂಕವನ್ನು ದೂರ ಮಾಡಿದರು.

ಪರೀಕ್ಷೆ ಮುಗಿದ ತಕ್ಷಣವೇ ಆಯಾ ವಿಷಯವಾರು ಮೌಲ್ಯಮಾಪನವನ್ನು ಆರಂಭಿಸಲಾಗುವುದು. ಕೊನೆಯ ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ ಫಲಿತಾಂಶ ನೀಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದು ಕುಲಪತಿ ತಿಳಿಸಿದರು.

ADVERTISEMENT

ಸಾಮಾಜಿಕ ಬದ್ಧತೆ: ಬಡವರಿಗೆ ಆಹಾರ ಧಾನ್ಯ ಹಾಗೂ ಮಾಸ್ಕ್‌ಗಳನ್ನು ವಿತರಿಸಲು ದಾವಣಗೆರೆ ಜಿಲ್ಲಾಡಳಿತಕ್ಕೆ ₹ 2 ಲಕ್ಷ ಹಾಗೂ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ₹ 1.50 ಲಕ್ಷ ದೇಣಿಗೆ ನೀಡಲಾಗಿದೆ. ಜೊತೆಗೆ ಐದು ದತ್ತು ಗ್ರಾಮಗಳ ಬಡವರಿಗೆ ಮತ್ತು ಕೊಳೆಗೇರಿ ಜನರಿಗೆ ಆಹಾರ ಧಾನ್ಯ ಹಾಗೂ ಮಾಸ್ಕ್‌ಗಳನ್ನು ವಿತರಿಸುವ ಮೂಲಕ ವಿಶ್ವವಿದ್ಯಾಲಯ ಸಾಮಾಜಿಕ ಬದ್ಧತೆ ಮೆರೆದಿದೆ ಎಂದೂ ಹಲಸೆ ಮಾಹಿತಿ ನೀಡಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಕಣಸೋಗಿ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗಮನ ಸೆಳೆದ ಇಂಟರ್‌ನ್ಯಾಷನಲ್‌ ವೆಬಿನಾರ್‌
‘ವಿಶ್ವವಿದ್ಯಾಲಯದ ಎಂ.ಬಿ.ಎ ವಿಭಾಗವು ಲಾಕ್‌ಡೌನ್‌ ಅವಧಿಯಲ್ಲಿ ನಾಲ್ಕು ದಿನಗಳ ‘ಇಂಟರ್‌ನ್ಯಾಷನಲ್‌ ವೆಬಿನಾರ್‌’ ಅನ್ನು ನಡೆಸಿದ್ದು, ಇದು ರಾಜ್ಯದ ವಿಶ್ವವಿದ್ಯಾಲಯಗಳಲ್ಲೇ ಮೊದಲ ಪ್ರಯತ್ನವಾಗಿದೆ’ ಎಂದು ಕುಲಪತಿ ಪ್ರೊ. ಶರಣಪ್ಪ ಹಲಸೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೆಬಿನಾರ್‌ಗೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ 1,024 ಜನ ನೋಂದಣಿ ಮಾಡಿಕೊಂಡಿದ್ದರು. ₹ 100 ಶುಲ್ಕ ನಿಗದಿಪಡಿಸಲಾಗಿತ್ತು. ವೆಬಿನಾರ್‌ನಿಂದ ಸಂಗ್ರಹಗೊಂಡ ಹಣದಲ್ಲಿ ಶೇ 50ರಷ್ಟನ್ನು ಮುಖ್ಯಮಂತ್ರಿಗಳ ಕೋವಿಡ್‌–19 ಪರಿಹಾರ ನಿಧಿಗೆ ನೀಡಲಾಗುವುದು ಎಂದು ಕುಲಪತಿ ತಿಳಿಸಿದರು.

ವಿದ್ಯಾರ್ಥಿಗಳ ಮನೋಬಲ ವೃದ್ಧಿಗೆ ಮೆಂಟರ್‌ಗಳ ನೇಮಕ
ಯುಜಿಸಿ ಸೂಚನೆಯಂತೆ ಎಲ್ಲಾ ವಿಭಾಗಗಳಲ್ಲೂ ಪ್ರತಿ ಐದು ವಿದ್ಯಾರ್ಥಿಗಳಿಗೆ ಒಬ್ಬ ಪ್ರಾಧ್ಯಾಪಕರನ್ನು ಮೆಂಟರ್‌ಗಳನ್ನಾಗಿ ನೇಮಕ ಮಾಡಲಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುವ ವಿದ್ಯಾರ್ಥಿಗಳೊಂದಿಗೆ ಈ ಮೆಂಟರ್‌ಗಳು ಆಪ್ತಸಮಾಲೋಚನೆ ನಡೆಸಲಿದ್ದಾರೆ. ಯಾವ ಯಾವ ಪ್ರಶ್ನೆಗಳನ್ನು ಕೇಳಬೇಕು ಎಂಬ ನಮೂನೆಯನ್ನೂ ಮೆಂಟರ್‌ಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಈ ಮೆಂಟರ್‌ಗಳು ಬಗೆಹರಿಸಲಿದ್ದಾರೆ. ವಾರಕ್ಕೊಮ್ಮೆ ಮೆಂಟರ್‌ಗಳು ವಿದ್ಯಾರ್ಥಿಗಳೊಂದಿಗೆ ಫೋನ್‌ ಮೂಲಕ ಆಪ್ತಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಕುಲಸಚಿವ ಡಾ. ಬಸವರಾಜ ಬಣಕಾರ ಮಾಹಿತಿ ನೀಡಿದರು.

ಪ್ರಾಧ್ಯಾಪಕರಿಂದಲೂ ಉತ್ತಮ ಪ್ರತಿಕ್ರಿಯೆ
‘ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ಪಾಠ ಆರಂಭಿಸಿರುವುದಕ್ಕೆ ಪ್ರಾಧ್ಯಾಪಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದುವರೆಗೆ 886 ಸ್ಟಡಿ ಮಟಿರಿಯಲ್‌ಗಳನ್ನು 132 ಪ್ರಾಧ್ಯಾಪಕರು ಅಪ್‌ಲೋಡ್‌ ಮಾಡಿದ್ದಾರೆ. ಹಲವು ಶಿಕ್ಷಕರು ಕೈಬರಹದ ಮೂಲಕ ಸ್ಟಡಿ ಮಟಿರಿಯಲ್‌ ಹಾಕಿದ್ದಾರೆ. ಇದರಿಂದಾಗಿ ಶಿಕ್ಷಕರೂ ತಮಗಾಗಿ ಶ್ರಮ ಪಡುತ್ತಿದ್ದಾರೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಬರುತ್ತಿದೆ. ದಿನಾಲೂ ಎಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಪಾಠ ಕೇಳುತ್ತಿದ್ದಾರೆ ಎಂಬ ಲೆಕ್ಕವೂ ನಮಗೆ ಲಭಿಸುತ್ತಿದೆ’ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವೆ ಡಾ. ಅನಿತಾ ಎಚ್‌.ಎಸ್‌ ತಿಳಿಸಿದರು.

ಲಾಕ್‌ಡೌನ್‌ನಲ್ಲೂ ನಿರಂತರ ಕಲಿಕೆಗೆ ಯತ್ನ
‘ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ 3,500 ವಿದ್ಯಾರ್ಥಿಗಳು ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಸುಮಾರು 70 ಸಾವಿರ ಸ್ನಾತಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಲಾಕ್‌ಡೌನ್‌ ಅವಧಿಯ ನಡುವೆಯೂ ನಿರಂತರವಾಗಿ ಕಲಿಕಾ ಪ್ರಕ್ರಿಯೆ ನಡೆಸಲು ಆನ್‌ಲೈನ್‌ ಮೂಲಕ ಪಾಠ ಮಾಡುತ್ತಿದ್ದೇವೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಬಹುತೇಕ ಸ್ಟಡಿ ಮಟಿರಿಯಲ್‌ ಕೊಟ್ಟಿದ್ದಾರೆ. ಸ್ನಾತಕ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅದೇ ಮಾದರಿಯಲ್ಲಿ ಸ್ಟಡಿ ಮಟಿರಿಯಲ್‌ ತಲುಪಿಸುವಂತೆ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸಭೆ ನಡೆಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿ ರಾವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.