ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೃತಗ್ಯತ ಟ್ರಸ್ಟ್ ವತಿಯಿಂದ ಬಣ್ಣದ ಲೇಪನ ಹೊಂದಿರುವುದು
ಕಡರನಾಯ್ಕನಹಳ್ಳಿ: ಗ್ರಾಮಸ್ಥರು ಹಾಗೂ ಸ್ವಯಂ ಸೇವಾ ಸಂಸ್ಥೆ ನೀಡಿದ ನೆರವಿನಿಂದ ಸಮೀಪದ ಉಕ್ಕಡಗಾತ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಣ್ಣ ಬಳಿಸಿಕೊಂಡು ಕಂಗೊಳಿಸುತ್ತಿದೆ.
ಬೆಂಗಳೂರಿನ ಕೃತಗ್ಯತ ಟ್ರಸ್ಟ್ ಮುಖ್ಯಸ್ಥ ಅರುಣ್ ದಿವಾಕರ್ ಅವರು ಈಚೆಗೆ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಬ್ಯಾಗ್, ಸೈನ್ಸ್ ಕಿಟ್ ಉಚಿತವಾಗಿ ವಿತರಿಸಲು ಶಾಲೆಗೆ ಭೇಟಿ ನೀಡಿದ್ದರು. ಆ ವೇಳೆ ಶಾಲೆಯು ಬಣ್ಣ ಇಲ್ಲದೆ ಕಳೆಗುಂದಿದ್ದನ್ನು ಗಮನಿಸಿ ಟ್ರಸ್ಟ್ ವತಿಯಿಂದ ಬಣ್ಣ ಬಳಿಸಲು ನೆರವು ನೀಡುವುದಾಗಿ ಭರವಸೆ ನೀಡಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹರಿಹರ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ ಅವರೊಂದಿಗೆ ಮಾತನಾಡಿ ₹ 1 ಲಕ್ಷ ವೆಚ್ಚದಲ್ಲಿ ಶಾಲೆಯ ಗೋಡೆಗಳಿಗೆ ಬೇಕಾದ ಬಣ್ಣದ ವ್ಯವಸ್ಥೆ ಮಾಡಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ಮಹಾಂತಯ್ಯ ಚೊಗಚಿಕೊಪ್ಪ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಜಿ. ಚಂದ್ರಶೇಖರ್ ಅವರು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಭೆ ಕರೆದು ಬಣ್ಣ ಬಳಿಯುವವರಿಗೆ ಕೂಲಿ ಹಣ ಭರಿಸಲು ತಿರ್ಮಾನಿಸಿ ₹ 40,000 ಸಂಗ್ರಹಿಸಿದ್ದರು. ಎಲ್ಲರ ಪ್ರಯತ್ನದ ಫಲವಾಗಿ ಸರ್ಕಾರಿ ಶಾಲೆ ಆಕರ್ಷಕವಾಗಿ ಕಾಣಿಸುತ್ತಿದೆ.
ಕೃತಗ್ಯತ ಟ್ರಸ್ಟ್ ಐದು ವರ್ಷಗಳಿಂದ ಹರಿಹರ ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಬ್ಯಾಗ್, ಲೇಖನ ಸಾಮಗ್ರಿ, ನಲಿಕಲಿ ಮಕ್ಕಳಿಗೆ ಚೇರ್, ಟೇಬಲ್ ಹಾಗೂ ವಿಜ್ಞಾನ ಉಪಕರಣಗಳನ್ನು ನೀಡಿರುತ್ತಾರೆ. ಹಲವು ಶಾಲೆಗಳಿಗೆ ಶೌಚಾಲಯ ನಿರ್ಮಿಸಿ ಕೊಟ್ಟಿರುತ್ತಾರೆ ಇವರ ಸೇವೆ ಶ್ಲಾಘನೀಯವಾದುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹರಿಹರ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ ತಿಳಿಸಿದರು.
‘ದೇಶದ ಅಭಿವೃದ್ಧಿ ಶಿಕ್ಷಣದ ತಳಹದಿಯ ಮೇಲೆ ನಿಂತಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣಕ್ಕಾಗಿ ಕೃತಗ್ಯತ ಟ್ರಸ್ಟ್ ಅಳಿಲು ಸೇವೆ ಸಲ್ಲಿಸುತ್ತಿದೆ’ ಎಂದು ಟ್ರಸ್ಟ್‌ನ ಅರುಣ್ ದಿವಾಕರ್ ತಿಳಿಸಿದರು.
ಟ್ರಸ್ಟ್ ಹಾಗೂ ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಗೌಡ ಜಿಗಳಿ, ಸದಸ್ಯ ಶಂಕ್ರಪ್ಪ ಕಂದೋಡ್, ಗ್ರಾಮಸ್ಥರಾದ ಸಿದ್ದಪ್ಪ ಪೂಜಾರ್, ನಾಗರಾಜ್ ಪೂಜಾರ್ ಅವರ ಸಹಕಾರದಿಂದ ಶಾಲೆ ಅಭಿವೃದ್ಧಿ ಹೊಂದಿದೆ ಎಂದು ಉಕ್ಕಡಗಾತ್ರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರು ತಿಳಿಸಿದರು.
ಸಂಘ ಸಂಸ್ಥೆಗಳು ಮತ್ತು ಸಮುದಾಯದ ಸಹಕಾರದಿಂದ ಪ್ರತಿ ಗ್ರಾಮದಲ್ಲೂ ಸರ್ಕಾರಿ ಶಾಲೆಗಳು ಸಬಲೀಕರಣ ಹೊಂದಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ.ಜಿ.ಚಂದ್ರಶೇಖರ್, ಎಸ್‌ಡಿಎಂಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.