ADVERTISEMENT

ಮಾಯಕೊಂಡ ಎಲ್ಲ ಜಾತಿ, ಧರ್ಮದವರ ಭಾವೈಕ್ಯದ ಬೀಡು: ಡಾ.ಎಂ.ಕೆ. ರಮೇಶ್

ಮಾಯಕೊಂಡದ ದಾವಣಗೆರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 5:25 IST
Last Updated 10 ಅಕ್ಟೋಬರ್ 2021, 5:25 IST
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ‘ಮಾಯಕೊಂಡದ ದಾವಣಗೆರೆ ನಿವಾಸಿಗಳ ಸಾಂಸ್ಕೃತಿಕ ಹಾಗೂ ಕ್ಷೇಮಾಭಿವೃದ್ಧಿ ಸಂಘ’ವನ್ನು ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಎಂ.ಕೆ. ರಮೇಶ್ ಉದ್ಘಾಟಿಸಿದರು. ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಅವರೂ ಇದ್ದರು.
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ‘ಮಾಯಕೊಂಡದ ದಾವಣಗೆರೆ ನಿವಾಸಿಗಳ ಸಾಂಸ್ಕೃತಿಕ ಹಾಗೂ ಕ್ಷೇಮಾಭಿವೃದ್ಧಿ ಸಂಘ’ವನ್ನು ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಎಂ.ಕೆ. ರಮೇಶ್ ಉದ್ಘಾಟಿಸಿದರು. ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಅವರೂ ಇದ್ದರು.   

ದಾವಣಗೆರೆ: ‘ಮಾಯಕೊಂಡ ಎಲ್ಲ ಜಾತಿ- ಧರ್ಮಗಳ ಸಾಂಸ್ಕೃತಿಕ ಭಾವೈಕ್ಯದ ಬೀಡು’ ಎಂದು ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಎಂ.ಕೆ. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮಾಯಕೊಂಡದ ದಾವಣಗೆರೆ ನಿವಾಸಿಗಳ ಸಾಂಸ್ಕೃತಿಕ ಹಾಗೂ ಕ್ಷೇಮಾಭಿವೃದ್ಧಿ ಸಂಘ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವ್ಯಕ್ತಿ ಬೆಳೆದು ಎಷ್ಟೇ ಉನ್ನತ ಹುದ್ದೆಗೇರಿದರೂ ಜನ್ಮ ನೀಡಿದ ಊರಿನ ಋಣ ತೀರಿಸುವ ಕೆಲಸ ಮಾಡಬೇಕು. ಆದರೆ ಇಂದು ಹಳ್ಳಿಯ ಪರಿಸರದ ಜೊತೆಗೆ ಜನರ ಮಾನಸಿಕ ಸ್ಥಿತಿಯೂ ಬದಲಾಗಿದೆ. ಜನರ ಅಭಿರುಚಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಪ್ರೀತಿ, ವಿಶ್ವಾಸ
ಕ್ಕಿಂತಲೂ ವ್ಯಾವಹಾರಿಕತೆ ಹೆಚ್ಚಾಗಿದೆ. ಆದ್ದರಿಂದ ಬದಲಾದ ಪರಿಸ್ಥಿತಿಯಲ್ಲಿ ನಮ್ಮತನವನ್ನು ಮರೆಯದೆ, ಸೌಹಾರ್ದ ಜೀವನ ನಡೆಸುವುದು ಮುಖ್ಯ’ ಎಂದರು.

ADVERTISEMENT

‘ಐತಿಹಾಸಿಕ ಹಿನ್ನೆಲೆಯುಳ್ಳ ಮಾಯಕೊಂಡ ಹಿಂದಿನಿಂದಲೂ ಸಾಂಸ್ಕೃತಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ನಾಡಿನ ಉದ್ದಗಲಕ್ಕೂ ಹೆಸರು ಮಾಡಿದೆ. ಇಂದಿನ ಯುವಪೀಳಿಗೆ ಶೈಕ್ಷಣಿಕ ರಂಗದಲ್ಲಿ ಎತ್ತರಕ್ಕೆ ಬೆಳೆದು ಗ್ರಾಮದ ಹೆಸರನ್ನು ಅಜರಾಮರಗೊಳಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ್ ಕುರ್ಕಿ, ‘ಮಾಯಕೊಂಡದ ಸಾಂಸ್ಕೃತಿಕ ಹಾಗೂ ಕ್ಷೇಮಾಭಿವೃದ್ಧಿ ಸಂಘ ಇಂದು ಎಲ್ಲ ಜನರನ್ನು ಒಗ್ಗೂಡಿಸುವ ಮೂಲಕ ಭಾವ ಸಂಗಮ ಕಾರ್ಯಕ್ರಮ ಆಯೋಜಿಸುತ್ತಿದ್ದು, ಎಲ್ಲ ಜನರ ಒಳಿತಿಗೆ ಶ್ರಮಿಸಲಿ’ ಎಂದು ಆಶಿಸಿದರು.

ಆರ್. ನಾಗರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ಕೆಎಸ್‌ಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಕೆ. ಬಸವರಾಜ, ಮಂಡಿ ಶರಣಪ್ಪ, ಎಚ್.ಎನ್. ಮೂರ್ತಿ, ಜಿ. ಮಲ್ಲಿಕಾರ್ಜುನಪ್ಪ, ಜೆ. ಮಲ್ಲಿಸ್ವಾಮಿ, ಜಿ. ರಾಜಶೇಖರಪ್ಪ, ಬಿ. ಬೀರಲಿಂಗಪ್ಪ ಕಾರ್ಯಕ್ರಮದಲ್ಲಿ ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಸಂಗೀತ, ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.