ADVERTISEMENT

ಪರ್ಯಾಯ ಸಮಾಜ ನಿರ್ಮಾಣ ಅಗತ್ಯ: ಡಾ.ಸಿದ್ಧನಗೌಡ ಪಾಟೀಲ

ಆನ್‌ಲೈನ್ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 20 ಮೇ 2020, 12:58 IST
Last Updated 20 ಮೇ 2020, 12:58 IST
ಡಾ.ಸಿದ್ದನಗೌಡ ಪಾಟೀಲ
ಡಾ.ಸಿದ್ದನಗೌಡ ಪಾಟೀಲ   

ದಾವಣಗೆರೆ: ವಿಜ್ಞಾನ, ತಂತ್ರಜ್ಞಾನ ಮತ್ತು ಯಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜವನ್ನು ಪರ್ಯಾಯವಾಗಿ ರೂಪಿಸಿ, ಸದೃಢ ದೇಶ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಕಾರ್ಯಯೋಜನೆ ಸಿದ್ಧಗೊಳ್ಳಬೇಕು ಎಂದು ರಾಜಕೀಯ ಚಿಂತಕ ಡಾ.ಸಿದ್ಧನಗೌಡ ಪಾಟೀಲ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ‘ಸಾಮಾಜಿಕ ಸ್ಥಿತ್ಯಂತರ’ ಕುರಿತ ವಿಶೇಷ ಆನ್‍ಲೈನ್ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಕೊರೊನಾ ವೈರಾಣು ಜಗತ್ತಿನ ಎಲ್ಲ ವರ್ಗದ ಜನರ ಸಾಮಾಜಿಕ ವ್ಯವಸ್ಥೆಯನ್ನೇ ಬದಲಿಸಿದೆ. ಪರಿವರ್ತನೆಗೆ ವೇದಿಕೆಯಾಗಿ ಸಂಘರ್ಷದಿಂದ ಸಮನ್ವಯದತ್ತ ಜನರನ್ನು ಒಯ್ಯುವಂತೆ ಮಾಡಿದೆ. ಆರ್ಥಿಕ ಹಸಿವು, ಸಾಮಾಜಿಕ ಅಸ್ಪ್ರ್ಯತೆಯಿಂದ ಕಂಗೆಟ್ಟು ವಲಸೆ ಹೋಗಿದ್ದ ಕಾರ್ಮಿಕರು ವಾಪಸ್ ಬರುವಂತಾಗಿದೆ. ಅಸಂಖ್ಯಾತ ಜನರ ಉದ್ಯೋಗವಿಲ್ಲದೆ, ನಿರಾಶ್ರಿತರಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಅವರೆಲ್ಲರ ರಕ್ಷಣೆಯ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾಗಬೇಕಾಗಿದೆ’ ಎಂದರು.

ADVERTISEMENT

‘ವ್ಯಕ್ತಿಕೇಂದ್ರಿತ ಆಡಳಿತ ವ್ಯವಸ್ಥೆಗಿಂತ ಸಮುದಾಯದ ಸಹಭಾಗಿತ್ವವನ್ನು ಒಳಗೊಂಡ ವಿಕೇಂದ್ರೀಕೃತ ರಾಜಕೀಯ ವ್ಯವಸ್ಥೆ ಭಾರತಕ್ಕೆ ಬೇಕಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಪಕ್ಷಾತೀತವಾಗಿ ಸಮಾಲೋಚನೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಎದುರಿಸುವ ಯೋಜನೆ ರೂಪುಗೊಳ್ಳಬೇಕಿತ್ತು. ವಾರ್ಡ್ ಮಟ್ಟದಲ್ಲಿ, ಗ್ರಾಮಮಟ್ಟದಲ್ಲಿಯೇ ಸಮಿತಿ ರಚಿಸಬೇಕಿತ್ತು. ದಲಿತ, ರೈತ, ಕಾರ್ಮಿಕ ಸಂಘಟನೆಗಳಿಗೆ ಜನರ ರಕ್ಷಣೆಯ ಜವಾಬ್ದಾರಿಯನ್ನು ಒಪ್ಪಿಸಿದ್ದರೆ ದೇಶದ ಪರಿಸ್ಥಿತಿ ಈ ಮಟ್ಟಿಗೆ ಕೈಮೀರುತ್ತಿರಲಿಲ್ಲ’ ಎಂದು ನುಡಿದರು.

‘ದೇಶದ ಪ್ರಸ್ತುತ ಪರಿವರ್ತನೆಯ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ನೈತಿಕ ಪ್ರಜ್ಞೆಯ ಜೊತೆಗೆ ನಿರುದ್ಯೋಗ, ಕೃಷಿ, ಆರೋಗ್ಯ ಮತ್ತು ಬದುಕಿನ ಭದ್ರತೆಗೆ ಆದ್ಯತೆ ನೀಡಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸದಿದ್ದರೆ ಅಪಾಯಕಾರಿ ಸ್ಥಿತಿ ತಲುಪಿ, ಅರಾಜಕತೆಯ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಭೂತ ಕಾಲವನ್ನು ನೋಡಿ, ವರ್ತಮಾನದಲ್ಲಿ ನಿಂತು ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯನ್ನು ಮಾಧ್ಯಮ ಮತ್ತು ಜನಪ್ರತಿನಿಧಿಗಳು ಮಾಡಬೇಕು’ ಎಂದು ಸಲಹೆ ನೀಡಿದರು.

‘ಕೃಷಿ, ಕೃಷಿ ಆಧಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ವ್ಯವಸ್ಥೆ ಆಗಬೇಕಾಗಿದೆ. ಬಡವರು, ದುರ್ಬಲರು, ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ನೀಡದಿದ್ದರೆ ಮುಂದೆ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ. ಅದು ಇನ್ನೂ ಆತಂಕಕಾರಿ. ದೇಶದ ಆರ್ಥಿಕ, ಸಾಮಾಜಿಕ ನೆಲೆಯೇ ಅಭದ್ರಗೊಳ್ಳುವ ಆತಂಕಕವಿದೆ. ಅದನ್ನು ಸವಾಲಾಗಿ ಸ್ವೀಕರಿಸಿ ಸಮಸ್ಯೆ ಎದುರಿಸಲು ಪ್ರಜಾಪ್ರಭುತ್ವ ಸಿದ್ಧವಾಗಬೇಕು’ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಅವರು, ‘ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ, ನವ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು. ಸರ್ಕಾರದ ಜೊತೆ ನಿಂತು ಆತಂಕ ನಿವಾರಿಸಿ, ದೇಶವನ್ನು ಸದೃಢಗೊಳಿಸಲು ಎಲ್ಲರ ಸಹಕಾರ ಮುಖ್ಯ’ ಎಂದರು.

ಕುಲಸಚಿವ ಪ್ರೊ.ಬಸವರಾಜ ಬಣಕಾರ, ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಶಿವಕುಮಾರ ಕಣಸೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಎಂ.ವಿನಯ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.