ADVERTISEMENT

ಹರಿಹರ: ಕೆರೆಗಳಿಗೆ ನೀರು ತುಂಬಿಸುವ ಪೈಪ್‍ಲೈನ್‍ ಒಡೆದು ನೀರು ಅಪವ್ಯಯ

ರೈತರ ಪಾಲಿಗೆ ಗಗನ ಕುಸುಮವಾಗುತ್ತಿರುವ ಮಹತ್ವಾಕಾಂಕ್ಷೆ ಯೋಜನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 17:46 IST
Last Updated 26 ಜೂನ್ 2020, 17:46 IST
ಹರಿಹರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರ ಬಳಿ ಶುಕ್ರವಾರ 22 ಕೆರೆಗಳಿಗೆ ತುಂಬಿಸುವ ಪೈಪ್‍ಲೈನ್‍ ಒಡೆದು ಲಕ್ಷಾಂತರ ಲೀಟರ್‍ ಅಪವ್ಯಯವಾಗುತ್ತಿರುವ ದೃಶ್ಯ.
ಹರಿಹರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರ ಬಳಿ ಶುಕ್ರವಾರ 22 ಕೆರೆಗಳಿಗೆ ತುಂಬಿಸುವ ಪೈಪ್‍ಲೈನ್‍ ಒಡೆದು ಲಕ್ಷಾಂತರ ಲೀಟರ್‍ ಅಪವ್ಯಯವಾಗುತ್ತಿರುವ ದೃಶ್ಯ.   

ಹರಿಹರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರ ದೊಡ್ಡಬಾತಿ ಬಳಿಯ 22 ಕೆರೆಗಳಿಗೆ ತುಂಬಿಸುವ ಪೈಪ್‍ಲೈನ್‍ ಒಡೆದು ಶುಕ್ರವಾರ ಬೆಳಿಗ್ಗೆ ಲಕ್ಷಾಂತರ ಲೀಟರ್‍ ನೀರು ವ್ಯರ್ಥವಾಗಿದೆ.

ಸರ್ಕಾರ, ಜಿಲ್ಲೆಯ ಬರಗಾಲ ಪೀಡಿತ ಪ್ರದೇಶದ 22 ಕೆರೆಗಳಿಗೆ ನೀರು ತುಂಬಿಸುವ ಸದುದ್ದೇಶದಿಂದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ 12 ವರ್ಷಗಳ ಹಿಂದೆ ರಾಜನಹಳ್ಳಿ ಸಮೀಪದ ತುಂಗಾಭದ್ರಾ ನದಿ ಬಳಿ ಜಾಕ್ವೆಲ್‍ ನಿರ್ಮಿಸಲಾಗಿದೆ. ಆಮೆಗತಿ ಹಾಗೂ ಕಳಪೆ ಕಾಮಗಾರಿಯಿಂದ ಈ ಯೋಜನೆ ನನೆಗುದಿಗೆ ಬೀಳುವ ಹಂತಕ್ಕೆ ತಲುಪಿತ್ತು. ಸಿರಿಗೆರೆಯ ಶಿವಾಚಾರ್ಯ ಸ್ವಾಮೀಜಿಯ ಪ್ರಯತ್ನದ ಫಲವಾಗಿ ಕಳೆದ ಕೆಲ ವರ್ಷಗಳಿಂದ ಯೋಜನೆ ಕಾರ್ಯಾರಂಭಗೊಂಡಿತ್ತು.

ಯೋಜನೆ ಆರಂಭದ ದಿನಗಳಿಂದಲೂ ಪೈಪ್‍ಲೈನ್‍ ಸಮಸ್ಯೆ ಮತ್ತು ತಾಂತ್ರಿಕ ಸಮಸ್ಯೆಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಿಫಲವಾಗಿದೆ. ಪ್ರಸ್ತುತ ವರ್ಷ ಸಂಸದರ ಒತ್ತಾಯಕ್ಕೆ ಜೂನ್‍ ತಿಂಗಳ ಮಧ್ಯದಲ್ಲಿ ನೀರು ತುಂಬುವ ಯೋಜನೆ ಚಾಲನೆಗೊಂಡಿದ್ದು, ಬರಗಾಲ ಪೀಡಿತ ಪ್ರದೇಶದ ರೈತರಲ್ಲಿ ಆಶಾ ಭಾವನೆ ಮೂಡಿಸಿತ್ತು.

ADVERTISEMENT

ಕಳಪೆ ಕಾಮಗಾರಿ ಫಲವಾಗಿ ಪದೇ, ಪದೇ ಪೈಪ್‍ಲೈನ್‍ ಒಡೆದು ಯೋಜನೆಯ ರೈತರ ಪಾಲಿಗೆ ಗಗನ ಕುಸುಮವಾಗಿ ಪರಿಣಿಮಸಿದೆ.

ಮುಖಂಡ ಎನ್‍.ಎಚ್‍. ಶ‍್ರೀನಿವಾಸ ಮಾತನಾಡಿ, ಪೈಪ್‍ಲೈನ್‍ ಒಡೆದು ನೀರು ಹೊರಬರುತ್ತಿರುವ ರಭಸಕ್ಕೆ ಕಲ್ಲುಗಳು ಸಿಡಿದು ರಾಷ್ಟ್ರೀಯ ಹೆದ್ದಾರಿಯ ಸಂಚಾರ ಅಸ್ತವ್ಯಸ್ತಗೊಂಡು, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪೈಪ್‍ಲೈನ್‍ ಹಾದುಹೋಗಿರುವ ಹಿನ್ನೆಲೆ ಅಧಿಕಾರಿಗಳು ಸೂಕ್ತ ನಿರ್ವಹಣೆಗೆ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಯೋಜನೆಯ ನಿರ್ವಹಣೆ ವ್ಯವಸ್ಥಾಪಕ ನರಸಿಂಹ ಮಾತನಾಡಿ, ‘ಪೈಪ್‍ಲೈನ್‍ ಅಳವಡಿಸಿ 12 ವರ್ಷಗಳಾಗಿವೆ. ಪೈಪ್‍ಲೈನ್‍ ತುಕ್ಕು ಹಿಡಿದು ಒಡೆದಿದೆ. 1,500 ಎಚ್‍.ಪಿ ಸಾರ್ಮಥ್ಯದ ಮೋಟರ್ ಚಾಲನೆ ಮಾಡಿದಾಗ ಒತ್ತಡಕ್ಕೆ ಈ ಅವಘಡ ಸಂಭವಿಸಿದೆ. ಒತ್ತಡ ಪರೀಕ್ಷೆ ನಂತರ ನೀರು ತುಂಬಿಸಲು ಚಾಲನೆ ನೀಡಲಾಗಿತ್ತು. ಕೂಡಲೇ, ಪೈಪ್‍ಲೈನ್‍ ದುರಸ್ತಿಗೆ ಸೂಚನೆ ನೀಡಲಾಗಿದೆ ಎಂದರು.

ಬರಗಾಲ ಪೀಡಿತ ಪ್ರದೇಶದ ರೈತರ ಪಾಲಿಗೆ ಆಶಾಕಿರಣವಾಗಿದ್ದ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿರುವುದು ವ್ಯವಸ್ಥೆಯ ಕರಾಳ ದರ್ಶನಕ್ಕೆ ಸಾಕ್ಷಿಯಾಗಿದೆ.

‘ಹೈಡ್ರೋ ಟೆಸ್ಟಿಂಗ್ ಸರಿಯಾಗಿ ಮಾಡಿಲ್ಲ’

‘22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ₹140 ಕೋಟಿಯದ್ದಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೈಪ್‌ಗಳನ್ನು ಶಿಫ್ಟಿಂಗ್‌ ಮಾಡುತ್ತಿದ್ದಾರೆ. ಆದರೆ ಪೈಪ್‌ಗಳ ವೆಲ್ಡಿಂಗ್‌ ಸರಿಯಾಗಿ ಮಾಡದ ಕಾರಣ ಪದೇ-ಪದೇ ಪೈಪ್‌ಲೈನ್‌ ಒಡೆದು ಹೋಗುತ್ತಿದೆ. ಅಲ್ಲದೇ ಪ್ರತಿ ಅರ್ಧ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಪೈಪ್‌ಗಳ ಕಾರ್ಯಕ್ಷಮತೆ ಪರೀಕ್ಷಿಸುವ ಹೈಡ್ರೋ ಟೆಸ್ಟಿಂಗ್ ಮಾಡಬೇಕು. ಆದರೆ ಒಂದು ಕಿ.ಮೀ. ದೂರದಲ್ಲಿ ಹೈಡ್ರೋ ಟೆಸ್ಟಿಂಗ್ ಮಾಡಿರುವುದರಿಂದ ಈ ಅನಾಹುತಕ್ಕೆ ಕಾರಣ’ ಎಂಬುದು 22 ಕೆರೆ ಏತ ನೀರಾವರಿ ಅಧ್ಯಕ್ಷ ಮಂಜುನಾಥ್‌ಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.