ADVERTISEMENT

ಮಹಿಳೆಗೆ ಸೌಲಭ್ಯ ದೊರೆತಿರುವುದು ದೇವರಿಂದಲ್ಲ, ಸಂವಿಧಾನದಿಂದ: ಮೀನಾಕ್ಷಿ ಬಾಳಿ

ಮಹಿಳಾ ಭಾರತ ಗೋಷ್ಠಿಯಲ್ಲಿ ಹೋರಾಟಗಾರ್ತಿ ಮೀನಾಕ್ಷಿ ಬಾಳಿ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:15 IST
Last Updated 29 ಮೇ 2022, 4:15 IST
ಮೀನಾಕ್ಷಿ ಬಾಳಿ
ಮೀನಾಕ್ಷಿ ಬಾಳಿ   

ದಾವಣಗೆರೆ: ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ಮಹಿಳೆಗೆ ಏನಾದರೂ ಸಿಕ್ಕಿದ್ದರೆ ಅದು ದೇವರಿಂದಲ್ಲ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಬರೆದ ಸಂವಿಧಾನದಿಂದ ಎಂದು ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಹೇಳಿದರು.

ಮೇ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಭಾರತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಹಿಳೆಗೆ ಶಿಕ್ಷಣ ಸಿಕ್ಕಿದೆ. ಕೆಲವು ಮಂದಿಗೆ ಉದ್ಯೋಗವೂ ದೊರೆತಿದೆ. ಮಹಿಳೆಯರ ಪರವಾಗಿ ಕಾನೂನುಗಳೂ ಬಂದಿವೆ. ಸಂವಿಧಾನ ನೀಡಿದ ಸೌಲಭ್ಯಗಳನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ADVERTISEMENT

‘ನಾವು ಅಳವಡಿಸಿಕೊಂಡಿರುವ ಸಾಮಾಜಿಕ ಜೀವನವು ಅಸಮಾನತೆಯ ನಂಬಿಕೆ, ಅವೈಜ್ಞಾನಿಕ ಕ್ರಿಯೆಗಳಿಂದ ಕೂಡಿದೆ. ವಿಧವೆಯರ ಸಂಖ್ಯೆ ಹೆಚ್ಚಾಗಿದೆ. ಹಿಂದೆ ದಲಿತರು, ಶೂದ್ರರಲ್ಲಿ ಮರು ಮದುವೆಗೆ ಅವಕಾಶ ಇತ್ತು. ಆದರೆ ವೈದಿಕದ ಪ್ರಭಾವದಿಂದಾಗಿ ಅವರಲ್ಲಿಯೂ ಪತಿ ಸತ್ತರೆ ಮತ್ತೆ ಮದುವೆಯಾಗುವ ಅವಕಾಶ ಕಡಿಮೆಯಾಗಿದೆ. ಕೊರೊನಾ ಕಾಲದಲ್ಲಿ ಬಾಲ್ಯವಿವಾಹ ಜಾಸ್ತಿಯಾಗಿದೆ. ವರದಕ್ಷಿಣೆ ಎಲ್ಲ ಸಮುದಾಯಗಳಲ್ಲಿ ಸೃಷ್ಟಿಯಾಗಿದೆ. ಹಿಂದೆ ಲಂಬಾಣಿ, ಮುಸ್ಲಿಂ ಸಹಿತ ಅನೇಕ ಸಮುದಾಯಗಳಲ್ಲಿ ವರದಕ್ಷಿಣೆ ಇರಲಿಲ್ಲ. ಈಗ ಎಲ್ಲ ಕಡೆ ಬಂದಿದೆ. ಹೆಣ್ಣುಮಕ್ಕಳು ಮೇಕಪ್‌ ಮತ್ತು ಸೆಲ್ಫಿಯಲ್ಲಿ ಕಳೆದುಹೋಗಿದ್ದಾರೆ’ ಎಂದು ವಿಶ್ಲೇಷಿಸಿದರು.

ಅದ್ದೂರಿ ಮದುವೆಗಳು ಮಹಿಳೆಗೆ ದೊಡ್ಡ ಶಾಪವಾಗಿದೆ. ಈ ಬಂಡವಾಳಶಾಹಿ, ಅನ್ಯಾಯ, ಕೋಮು, ಹಿಂಸೆ ಎಲ್ಲದರ ಪರಿಣಾಮ ಹೆಣ್ಣಿನ ಮೇಲೆ ಆಗುತ್ತಿದೆ. ದೇವದಾಸಿ ಪದ್ಧತಿ ಇನ್ನೂ ನಿರ್ಮೂಲನೆಯಾಗಿಲ್ಲ. ಕೊರೊನಾ ನಂತರ ಉದ್ಯೋಗ ಹೋಗಿರುವುದರಿಂದ ಈಗ ಗರತಿಪಟ್ಟ ಎಂಬ ಆಚರಣೆಯನ್ನು ಮಹಿಳೆಯರು ಮಾಡುತ್ತಿದ್ದಾರೆ. ಅಂದರೆ ದೇವರ ಹೆಸರಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ ಎಂದರು.

ರಾಜಕೀಯಕ್ಕೆ ಬರುವ ಹೆಣ್ಣುಮಕ್ಕಳ ಬಗ್ಗೆ ಹೇಳುವ ಅಶ್ಲೀಲ ಮಾತುಗಳನ್ನು ಆಡುವ ಮೂಲಕ ಅವರ ರಾಜಕೀಯ ಪ್ರವೇಶವನ್ನೇ ತಡೆಯಲಾಗುತ್ತಿದೆ ಎಂದು ಬೇಸರಿಸಿದರು.

ಕೆಸ್ತರ ಮೌರ್ಯ ಮಾತನಾಡಿ, ‘ನೂರಾರು ಭಾರತಗಳಿವೆ. ಅದರಲ್ಲಿ ದಲಿತ ಭಾರತವಿದೆ. ಮಹಿಳಾ ಭಾರತ ಇದೆ. ಅದರಲ್ಲಿ ದಲಿತ ಮಹಿಳಾ ಭಾರತ ಇನ್ನೂ ನಿಕೃಷ್ಟವಾಗಿದೆ. ಎಲ್ಲ ಮಹಿಳೆಯರು ದಲಿತರೇ. ಆದರೆ ಎಲ್ಲ ಮಹಿಳೆಯರ ಮೇಲೆ ಒಂದೇ ರೀತಿಯ ಶೋಷಣೆ ಆಗುತ್ತಿಲ್ಲ. ದಲಿತ ಮಹಿಳೆಯರ ಮೇಲೆ ಆಗುವ ಶೋಷಣೆ ಬಹಳ ಹೆಚ್ಚು’ ಎಂದು ಹೇಳಿದರು.

ಮಹಿಳೆಯರ ಅತ್ಯಾಚಾರವನ್ನು ಖಂಡಿಸುವಾಗಲೂ ನಾವು ಜಾತಿ ನೋಡುತ್ತಿದ್ದೇವೆ. ನಿರ್ಭಯ ಪ್ರಕರಣಕ್ಕೆ ಸ್ಪಂದಿಸಿದ ರೀತಿಯಲ್ಲಿ ದಾನಮ್ಮನ ಅತ್ಯಾಚಾರಕ್ಕೆ ಸ್ಪಂದಿಸಲು ಆಗದೇ ಇರಲು ಜಾತಿ ಕಾರಣ. ಸಂವಿಧಾನದಿಂದಾಗಿ ಸ್ವಲ್ಪವಾದರೂ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆಯಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತ ಮಹಿಳೆಯ ಮೇಲೆ ಶೇ 9ರಷ್ಟು ದೌರ್ಜನ್ಯ ಹೆಚ್ಚಾಗಿದೆ ಎಂದು ವಿಷಾದಿಸಿದರು.

ಹೆಣ್ಣಾಗಿ ಹುಟ್ಟಿ ಗಂಡಾದಾಗ ಅನುಭವಿಸಿದ ಸಂಕಟ, ಅಪಮಾನಗಳನ್ನು ರೂಮಿ ಹರೀಶ್‌ ಬಿಚ್ಚಿಟ್ಟರು. ರಂಗಕರ್ಮಿ ಬಾ.ಮ. ಬಸವರಾಜಯ್ಯ ಉಪಸ್ಥಿತರಿದ್ದರು. ಶಬಾನ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.