ADVERTISEMENT

ದಾವಣಗೆರೆ | ಆಟೊಗಳಿಗೆ ಮೀಟರ್‌ ಇಲ್ಲ; ಡಿಸಿ, ಎಸ್ಪಿ ಆದೇಶಕ್ಕೂ ಕಿಮ್ಮತ್ತಿಲ್ಲ...!

ಜಿಲ್ಲೆಯಲ್ಲಿ ‘ಆಟೊಟೋಪ’ಕ್ಕೆ ಬೀಳದ ಕಡಿವಾಣ; ಬೇಕಾಬಿಟ್ಟಿ ದರ ವಸೂಲಿಯಿಂದ ಪ್ರಯಾಣಿಕರು ಹೈರಾಣ

ಜಿ.ಶಿವಕುಮಾರ
Published 12 ಮೇ 2025, 7:36 IST
Last Updated 12 ಮೇ 2025, 7:36 IST
ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ನಿಲುಗಡೆ ಮಾಡಿದ್ದ ಆಟೊಗಳಿಗೆ ಮೀಟರ್‌ ಅಳವಡಿಸದೇ ಇರುವುದು –ಪ್ರಜಾವಾಣಿ ಚಿತ್ರಗಳು/ ಸತೀಶ ಬಡಿಗೇರ್‌
ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ನಿಲುಗಡೆ ಮಾಡಿದ್ದ ಆಟೊಗಳಿಗೆ ಮೀಟರ್‌ ಅಳವಡಿಸದೇ ಇರುವುದು –ಪ್ರಜಾವಾಣಿ ಚಿತ್ರಗಳು/ ಸತೀಶ ಬಡಿಗೇರ್‌   

ದಾವಣಗೆರೆ: ‘ಏ... ಬಿಡ್ರಿ. ‌ಡಿ.ಸಿ, ಎಸ್ಪಿ ಬರ್ತಾರೆ, ಹೋಗ್ತಾರೆ. ಜಿಲ್ಲೆಗೆ ಬಂದ ಹೊಸತರಲ್ಲಿ ನಮ್ಮನ್ನೆಲ್ಲಾ ಕರ್ದು ಮೀಟಿಂಗ್‌ ಮಾಡ್ತಾರೆ. ಮೀಟರ್‌ ಹಾಕ್ರೀ, ಸುಸ್ಥಿತಿ ಪ್ರಮಾಣ ಪತ್ರ ಪಡೀರಿ, ನಿಯಮ ಪಾಲನೆ ಮಾಡ್ರೀ.. ಅಂತೆಲ್ಲಾ ಹೇಳ್ತಾರೆ. ನಾವೂ ತಲೆ ಅಲ್ಲಾಡಿಸಿ ಬರ್ತೀವಿ. ಒಂದ್‌ ಹತ್‌ ದಿನ ಅವ್ರಿಗೆ ಆ ಹುರುಪು ಇರುತ್ತೆ. ಆಮೇಲೆ ಮೊದಲಿನ ಥರಾನೇ ಎಲ್ಲವೂ ನಡಿಯುತ್ತೆ...

ಆಟೊದಲ್ಲಿ ಮೀಟರ್‌ ಇಲ್ಲದ್ದನ್ನು ಕಂಡು ನಗರದ ಆಟೊ ಚಾಲಕರೊಬ್ಬರನ್ನು ಪ್ರಶ್ನಿಸಿದಾಗ ಅವರಿಂದ ಬಂದ ಉತ್ತರವಿದು. ಜಿಲ್ಲೆಯಲ್ಲಿ ಅಧಿಕಾರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಅವರ ಆದೇಶಗಳು ಬರೀ ಕಾಗದಕ್ಕಷ್ಟೇ ಸೀಮಿತ ಎಂಬ ಆರೋಪಕ್ಕೆ ಇದು ಪುಷ್ಟಿ ನೀಡುವಂತಿದೆ. 

2024ರ ಡಿಸೆಂಬರ್‌ 3ರಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಸೇರಿದಂತೆ ಸಾರಿಗೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಆಟೊ ಚಾಲಕರು ಮತ್ತು ಮಾಲೀಕರ ಸಭೆ ನಡೆದಿತ್ತು. ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಟೊಗಳೂ ಮೀಟರ್‌ ಅಳವಡಿಸಿಕೊಳ್ಳುವುದನ್ನು ಆ ಸಭೆಯಲ್ಲಿ ಕಡ್ಡಾಯಗೊಳಿಸಲಾಗಿತ್ತು. ಇದಕ್ಕೆ ಒಂದು ವಾರದ ಗಡುವನ್ನೂ ನೀಡಲಾಗಿತ್ತು. ಮೀಟರ್‌ ಬಳಕೆ ಮಾಡದೇ ಇರುವ ಆಟೊಗಳ ವಿರುದ್ಧ ಕ್ರಮ ಜರುಗಿಸಬೇಕೆಂಬ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. 

ADVERTISEMENT

ಸಭೆ ನಡೆದು ಈಗಾಗಲೇ 5 ತಿಂಗಳು ಕಳೆದಿದೆ. ಹೀಗಿದ್ದರೂ ನಗರ ಹಾಗೂ ಜಿಲ್ಲೆಯಲ್ಲಿನ ಆಟೊಗಳಲ್ಲಿ ಮೀಟರ್‌ ಕಾಣಿಸುತ್ತಿಲ್ಲ! ಬೆರಳೆಣಿಕೆಯಷ್ಟು ಆಟೊಗಳಲ್ಲಿ ಮೀಟರ್‌ ಇದ್ದರೂ ಅವು ಓಡೋಲ್ಲ! ಜಿಲ್ಲೆಯಲ್ಲಿ ‘ಆಟೊಟೋಪ’ಕ್ಕೆ ಕಡಿವಾಣ ಬೀಳುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ₹ 5,000ದವರೆಗೂ ದಂಡ ವಿಧಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದರೂ ಚಾಲಕರು ಹಾಗೂ ಮಾಲೀಕರು ಕ್ಯಾರೆ ಎನ್ನುತ್ತಿಲ್ಲ.  

ಬೇಕಾಬಿಟ್ಟಿ ದರ ವಸೂಲಿ:

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 15,000 ಆಟೊಗಳಿವೆ. ಚಾಲಕರು ಬಾಡಿಗೆ ಓಡಿಸುವಾಗ ಕಡ್ಡಾಯವಾಗಿ ಮೀಟರ್ ಹಾಕಬೇಕು ಎಂಬ ನಿಯಮವಿದ್ದರೂ ಅದನ್ನು ಯಾರೂ ಪಾಲಿಸುತ್ತಿಲ್ಲ.

‘ಆಟೊ ಚಾಲಕರು ಪ್ರಯಾಣಿಕ ಸ್ನೇಹಿ ಹಾಗೂ ಮೀಟರ್ ದರಕ್ಕೆ ಬದ್ಧರಾಗದೇ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಾರೆ. ಪೆಟ್ರೋಲ್‌, ಅನಿಲ ಬೆಲೆ ಏರಿಕೆಯ ನೆಪ ಮುಂದಿಟ್ಟು ಮನಸೋ ಇಚ್ಛೆ ಬಾಡಿಗೆ ಕೇಳುತ್ತಾರೆ. ಅದನ್ನು ಕೊಡಲು ಒಪ್ಪದೇ ಇದ್ದರೆ ಕರೆದಲ್ಲಿ ಬರುವುದಿಲ್ಲ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಇದು ಮತ್ತಷ್ಟು ಹೊರೆಯಾಗಿ ಪರಿಣಮಿಸುತ್ತಿದೆ’ ಎಂದು ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ ನಿವಾಸಿ ಲೋಕೇಶ್‌ ಬೇಸರ ವ್ಯಕ್ತಪಡಿಸಿದರು.  

‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಖಾಸಗಿ ಬಸ್‌ ನಿಲ್ದಾಣದಿಂದ ಚರ್ಚ್‌ ರಸ್ತೆ, ಪಿ.ಜೆ. ಬಡಾವಣೆಗೆ ಒಂದೂವರೆ ಕಿ.ಮೀ ಕೂಡ ಆಗುವುದಿಲ್ಲ. ಈ ಭಾಗಗಳಿಗೆ ಕನಿಷ್ಟ ₹ 30 ದರ ಪಡೆಯಬೇಕು. ಆದರೆ, ಆಟೊದವರು ₹ 50, ₹ 60 ಕೇಳುತ್ತಾರೆ. ಬೇರೆ ಊರುಗಳಿಂದ ಬಂದವರಾಗಿದ್ದರೆ ಇನ್ನೂ ಹೆಚ್ಚು ಬಾಡಿಗೆ ಹೇಳುತ್ತಾರೆ. ಈಚೆಗೆ ನಮ್ಮ ನೆಂಟರೊಬ್ಬರು ಚನ್ನಗಿರಿಯಿಂದ ನಗರಕ್ಕೆ ಬಂದಿದ್ದರು. ಅವರನ್ನು ಖಾಸಗಿ ಬಸ್‌ ನಿಲ್ದಾಣದಿಂದ ಲಕ್ಷ್ಮಿ ಫ್ಲೋರ್‌ ಮಿಲ್‌ಗೆ ಕರೆದುಕೊಂಡು ಬಂದಿದ್ದ ಆಟೊ ಚಾಲಕ ₹ 100 ಬಾಡಿಗೆ ಪಡೆದಿದ್ದ’ ಎಂದು ಎಸ್‌.ಎಸ್‌.ಲೇಔಟ್‌ ನಿವಾಸಿ ಪ್ರಕಾಶ್‌ ತಿಳಿಸಿದರು.

‘ರೈಲ್ವೆ ನಿಲ್ದಾಣದಿಂದ ಎಚ್‌ಕೆಆರ್‌ ಸರ್ಕಲ್‌, ದುರ್ಗಾಂಬಿಕಾ ದೇವಸ್ಥಾನಕ್ಕೆ ಕರೆದುಕೊಂಡು ಬರಲು ₹ 70, ₹ 80 ಬಾಡಿಗೆ ಕೇಳುತ್ತಾರೆ. ವಯಸ್ಸಾದವರು, ಬೇರೆ ಊರುಗಳಿಂದ ಬಂದವರು ವಿಧಿ ಇಲ್ಲದೇ ಅವರು ಕೇಳಿದಷ್ಟು ಹಣ ಕೊಡಬೇಕಾದ ಅನಿವಾರ್ಯತೆ ಇದೆ. ರಾತ್ರಿಯಾದರೆ ₹ 150, ₹ 200ಕ್ಕಿಂತ ಕಡಿಮೆ ಬಾಡಿಗೆಗೆ ಬರುವುದೇ ಇಲ್ಲ’ ಎಂದು ನಿಟುವಳ್ಳಿ ನಿವಾಸಿ ಸತೀಶ್‌ ಎಸ್‌. ದೂರಿದರು. 

‘ನಾವು ದಿನದ ಗುತ್ತಿಗೆ ಆಧಾರದಲ್ಲಿ ಆಟೊ ಪಡೆದಿದ್ದೇವೆ. ಬಂದ ಆದಾಯದಲ್ಲೇ ಇಂತಿಷ್ಟು ಮೊತ್ತವನ್ನು ಮಾಲೀಕರಿಗೆ ಕೊಡಬೇಕು. ಒಂದು ದಿನ ತಪ್ಪಿದರೆ, ಅದಕ್ಕೆ ಬಡ್ಡಿ ಸೇರಿಸಿ ಮರು ದಿನ ಕಟ್ಟಬೇಕು. ಆದ್ದರಿಂದ ಬೇರೆ ದಾರಿ ಇಲ್ಲದೆ ಬಹುಪಾಲು ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆಟೊ ಚಾಲಕರೊಬ್ಬರು ತಿಳಿಸಿದರು.   

‘ಮೀಟರ್‌ ಹಾಕಲು ಹೋದರೆ ಪ್ರಯಾಣಿಕರೇ ಬೇಡ ಅಂತಾರೆ. ನಿಮ್ಮ ಮೀಟರ್‌ ಸರಿ ಇದೆಯೋ ಇಲ್ಲವೊ. ನಿಗದಿಗಿಂತಲೂ ಜಾಸ್ತಿ ತೋರಿಸಿದರೆ ನಾವು ಹೇಗೆ ಕೊಡುವುದು. ₹50 ಇಲ್ಲವೇ ₹60 ಕೊಡುತ್ತೇವೆ. ಬಂದರೆ ಬನ್ನಿ ಇಲ್ಲದಿದ್ದರೆ ಬೇರೆ ಆಟೊ ಹಿಡಿದು ಹೋಗುತ್ತೇವೆ ಎಂದು ಹೇಳುತ್ತಾರೆ. ನಮ್ಮ ಜೀವನವೂ ನಡಿಯಬೇಕಲ್ಲ. ಹೀಗಾಗಿ ಮೀಟರ್‌ ಹಾಕದೆಯೇ ಅವರೇ ನಿಗದಿ ಪಡಿಸಿದ ಮೊತ್ತಕ್ಕೆ ಅವರು ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗಿ ಬಿಡುತ್ತೇವೆ’ ಎಂದು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಆಟೊ ಚಾಲಕರು ಹೇಳಿದರು. 

‘ರಾತ್ರಿ ಮನೆಯ ಬಳಿ ನಿಲುಗಡೆ ಮಾಡಿದ್ದ ಆಟೊಗಳಲ್ಲಿನ ಮೀಟರ್‌ ಅನ್ನು ದುಷ್ಕರ್ಮಿಗಳು ಕದ್ದೊಯ್ಯುತ್ತಾರೆ. ಈ ಕಾರಣಕ್ಕೆ ಅದನ್ನು ತೆಗೆದಿಟ್ಟಿದ್ದೇವೆ. ಮೀಟರ್‌ ಅಳವಡಿಕೆಯನ್ನು ಕಡ್ಡಾಯಗೊಳಿಸಿದರೆ ನಾವೂ ನಿಯಮ ಪಾಲನೆ ಮಾಡುತ್ತೇವೆ’ ಎಂದು ತಿಳಿಸಿದರು. 

ಸೂಚನೆ ಇದೇ ಮೊದಲಲ್ಲ...

ಆಟೊಗಳಿಗೆ ಕಡ್ಡಾಯವಾಗಿ ಮೀಟರ್‌ ಅಳವಡಿಸುವಂತೆ ಅಧಿಕಾರಿಗಳು, ಚಾಲಕರು ಹಾಗೂ ಮಾಲೀಕರಿಗೆ ಸೂಚಿಸಿರುವುದು ಇದೇ ಮೊದಲಲ್ಲ.

ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಆಟೊಗಳಲ್ಲಿ ಕಡ್ಡಾಯವಾಗಿ ಮೀಟರ್‌ ಅಳವಡಿಸಬೇಕು. ಹಳೆಯ ಮೀಟರ್‌ ಹೊಂದಿರುವವರು ಪರಿಷ್ಕೃತ ಆಟೊ ದರ ಪಟ್ಟಿಯನ್ನು ಪ್ರಯಾಣಿಕರಿಗೆ ಕಾಣುವಂತೆ ಚಾಲಕರ ಸೀಟಿನ ಹಿಂಭಾಗ ಅಂಟಿಸಬೇಕು ಹಾಗೂ ಉಳಿದವರು ಹೊಸ ಮೀಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು 2021ರ ಸೆಪ್ಟೆಂಬರ್‌ನಲ್ಲಿ ಆಗಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೂಚಿಸಿದ್ದರು. ಆಗ ಸ್ವಲ್ಪ ಕಾಲಾವಕಾಶ ಕೋರಿದ್ದ ಚಾಲಕರು ಹಾಗೂ ಮಾಲೀಕರು ಬಳಿಕ ಸುಮ್ಮನಾಗಿದ್ದರು.  

ಏಕೆ ಹಿಂದೇಟು..?

ಹೊಸ ಮೀಟರ್ ಅಳವಡಿಕೆಗೂ ಮೊದಲು ಬಾಕಿ ಇರುವ ವಿಮೆಯ ಮೊತ್ತ ತುಂಬಿ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.

ಇದರ ಜೊತೆಗೆ ಫಿಟ್ನೆಸ್‌ ಪ್ರಮಾಣಪತ್ರ ಹಾಗೂ ವಾಯುಮಾಲಿನ್ಯ ತಪಾಸಣೆಯನ್ನೂ ಮಾಡಿಸಿಕೊಳ್ಳಬೇಕು. ಇದಕ್ಕೆ ಹಣ ಬೇಕು. ಮೀಟರ್‌ ದರ ₹ 4,500 ದಿಂದ ₹ 5,000ದವರೆಗೂ ಇದೆ. ಇಷ್ಟು ಹಣ ಹೊಂದಿಸುವುದು ಕಷ್ಟ ಎಂಬುದು ಚಾಲಕರು ಮತ್ತು ಮಾಲೀಕರ ವಾದ. 

‘ನಿರಂತರ ದಾಳಿ; ದಂಡಾಸ್ತ್ರದ ಪ್ರಯೋಗ’

‘ಮೀಟರ್‌ ಅಳವಡಿಸುವಂತೆ ಹಲವು ಬಾರಿ ಸೂಚಿಸಿದ್ದರೂ ಅನೇಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ದಾಳಿ ಮತ್ತು ದಂಡಾಸ್ತ್ರದ ಮೊರೆ ಹೋಗಿದ್ದೇವೆ. ನಾಲ್ಕು ತಿಂಗಳಲ್ಲಿ ಒಟ್ಟು 600 ಆಟೊಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. 48 ಆಟೊಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ದಾವಣಗೆರೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುಥೇಶ್‌ ತಿಳಿಸಿದರು.

‘ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಿದ್ದರೂ ಪೊಲೀಸರ ಸಹಕಾರದೊಂದಿಗೆ ದಾಳಿ ಮುಂದುವರಿಸಿದ್ದೇವೆ. ನಿಯಮ ಉಲ್ಲಂಘಿಸಿದವರಿಗೆ ₹ 5,000ದಿಂದ ₹ 13,000ದವರೆಗೂ ದಂಡ ವಿಧಿಸಿದ್ದೇವೆ. ಸಾರ್ವಜನಿಕರು ಆಟೊ ಹತ್ತುವ ಮುನ್ನ ಮೀಟರ್ ಹಾಕಿದ್ದಾರೋ ಇಲ್ಲವೋ ಎಂಬುದನ್ನು ನೋಡಬೇಕು. ಹಾಕದಿದ್ದರೆ ಚಾಲಕರನ್ನು ಪ್ರಶ್ನಿಸಬೇಕು. ಈ ಕುರಿತು ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.

‘ಕಡಿಮೆ ದರಕ್ಕೆ ಹೋದರೆ ಹೊಡೀತಾರೆ’

‘ದಾವಣಗೆರೆಯಲ್ಲಿ ಮಾನವೀಯತೆಯಿಂದ ಸೇವೆ ಸಲ್ಲಿಸುವ ಆಟೊ ಚಾಲಕರೂ ಇದ್ದಾರೆ. ಕಡಿಮೆ ದರಕ್ಕೆ ಬಾಡಿಗೆ ಹೋದವರನ್ನು ಕೆಲ ಚಾಲಕರೇ ಹಿಡಿದು ಹೊಡೆದಿರುವ ಉದಾಹರಣೆಗಳೂ ಇವೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣದ ಬಳಿ ಕೆಲವರು ಗುಂಪು ಕಟ್ಟಿಕೊಂಡಿದ್ದಾರೆ. ಹೊಸಬರು ಅಲ್ಲಿ ಹೋಗುವಂತೆಯೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಫೆಡರೇಷನ್‌ ಆಫ್‌ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್‌ನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶ್ರೀನಿವಾಸ ಮೂರ್ತಿ ದೂರಿದರು.

‘ನಗರದಲ್ಲಿ ನಾಲ್ಕೈದು ಆಟೊ ಸಂಘಟನೆಗಳಾಗಿದ್ದು, ಎಲ್ಲವೂ ಒಂದೊಂದು ಪಕ್ಷದ ಪರ ಇವೆ. ಅಧಿಕಾರಿಗಳು ನಿಯಮ ಮೀರಿದ ಆಟೊಗಳನ್ನು ಜಪ್ತಿ ಮಾಡಿದರೆ ರಾಜಕಾರಣಿಗಳ ಮೂಲಕ ಒತ್ತಡ ಹಾಕಿಸುತ್ತಾರೆ. ಹೀಗಾಗಿ ಅಧಿಕಾರಿಗಳೂ ಅಸಹಾಯಕರಾಗಿದ್ದಾರೆ’ ಎಂದರು.

‘ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಆಗ ಮೀಟರ್‌ ಅಳವಡಿಕೆ ಸಮಸ್ಯೆಗೆ ಮುಕ್ತಿ ಸಿಗಲಿದೆ. ನಾಗರಿಕರೂ ನೆಮ್ಮದಿಯಿಂದ ಪ್ರಯಾಣ ಮಾಡಬಹುದು’ ಎಂದು ತಿಳಿಸಿದರು.

ಈವರೆಗೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಮಾಹಿತಿ ಪಡೆದು ಶೀಘ್ರವೇ ಮತ್ತೊಂದು ಸಭೆ ನಡೆಸುತ್ತೇವೆ. ಚಾಲಕರು ಹಾಗೂ ಮಾಲೀಕರಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇವೆ
- ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ 
ಜಿಲ್ಲೆಗೆ ಆ್ಯಪ್‌ ಆಧಾರಿತ ಆಟೊ ಮತ್ತು ಟ್ಯಾಕ್ಸಿ ಸೇವೆ ಕಾಲಿಡುತ್ತಿದೆ. ಮೀಟರ್‌ ಅಳವಡಿಸಿಕೊಂಡು ಸೇವೆ ನೀಡದೆ ಹೋದರೆ ಆಟೊ ಚಾಲಕರು ಮತ್ತು ಮಾಲೀಕರಿಗೇ ನಷ್ಟವಾಗಲಿದೆ.
- ಪ್ರಮುಥೇಶ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ
ಜನಸ್ನೇಹಿ ಸೇವೆ ಒದಗಿಸುವುದು ಆಟೊ ಚಾಲಕರು ಮತ್ತು ಮಾಲೀಕರ ಕರ್ತವ್ಯ. ನಮ್ಮ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ಅನಿವಾರ್ಯ
- ಉಮಾ ಪ್ರಶಾಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ 
ಆಟೊ ಚಾಲಕರು ಹೆಚ್ಚುವರಿ ಹಣ ಕೇಳಿದರೆ ಅಥವಾ ಪ್ರಯಾಣಿಕರನ್ನು ಕರೆದೊಯ್ಯಲು ನಿರಾಕರಿಸಿದರೆ ಅವರ ಪರವಾನಗಿ ಅಮಾನತುಗೊಳಿಸುವಂತಹ ಕಠಿಣ ನಿಯಮ ನಗರದಲ್ಲಿ ಜಾರಿಯಾಗಬೇಕು
- ಚಿರಂಜೀವಿ ಕೆ.ಪಿ., ದಾವಣಗೆರೆಯ ವಿನೋಬನಗರ ನಿವಾಸಿ
ಆಟೊದವರು ಹಗಲು ದರೋಡೆಗೆ ಇಳಿದಿದ್ದಾರೆ. ಅಧಿಕಾರಿಗಳು ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿ ನಾಗರಿಕರ ಸುಲಿಗೆಗೆ ಕಡಿವಾಣ ಹಾಕಬೇಕು
- ಬಿ. ನಾಗರಾಜ್, ಚನ್ನಗಿರಿ ನಿವಾಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.