ADVERTISEMENT

ಲಯ ತಪ್ಪಿದ ಸಂಗೀತ ಶಿಕ್ಷಕರ ಬದುಕು: ದಶಕದಿಂದ ಬಗೆಹರಿಯದ ಸಮಸ್ಯೆ

ಡಿ.ಕೆ.ಬಸವರಾಜು
Published 28 ಏಪ್ರಿಲ್ 2022, 5:46 IST
Last Updated 28 ಏಪ್ರಿಲ್ 2022, 5:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಸಂಗೀತ ಶಿಕ್ಷಕರ ಹುದ್ದೆ ಭರ್ತಿ ಮಾಡಿ ದಶಕವೇ ಕಳೆದಿದ್ದರೂ ಇನ್ನೂ ನೇಮಕ ಮಾಡಿಲ್ಲದೇ ಇರುವುದರಿಂದ ಅವರ ಬದುಕು ಲಯ ತಪ್ಪಿದೆ. ಪ್ರತಿ ವರ್ಷ ಸಂಗೀತ ಶಿಕ್ಷಕರು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಅವರನ್ನು ನೇಮಕ ಮಾಡುವ ಮನಸ್ಸು ಮಾಡುತ್ತಿಲ್ಲ.

ತಿಂಗಳ ಹಿಂದೆ 15 ಸಾವಿರ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇಲ್ಲಿ ಸಂಗೀತ, ಚಿತ್ರಕಲೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಪರಿಗಣಿಸುತ್ತಿಲ್ಲ. ಸಂಗೀತ, ಚಿತ್ರಕಲೆ ಹಾಗೂ ದೈಹಿಕ ಶಿಕ್ಷಣ ಸೇರಿ 11ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಇವರನ್ನು ಪರಿಗಣಿಸಿಲ್ಲ. ಇದರಿಂದಾಗಿ ಶಿಕ್ಷಕರಾಗುವ ಕನಸು ಕಾಣುತ್ತಿದ್ದ ಸಂಗೀತಗಾರರಿಗೆ ಈ ಬಾರಿಯೂ ‘ನೌಕರಿ ಭಾಗ್ಯ’ ಮರೀಚಿಕೆಯಾಗಿದೆ.

ಸಂಗೀತದಲ್ಲಿ ಜ್ಯೂನಿಯರ್, ಸೀನಿಯರ್, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ವಿದ್ವತ್‌ಪೂರ್ವ, ವಿದ್ವತ್ ಅಂತಿಮಗಳು ಪ್ರೌಢಶಾಲಾ ಹಂತದಲ್ಲಿ ಬರುತ್ತವೆ. ಕೊರೊನಾ ಸಮಯದಲ್ಲಿ 8 ಸಾವಿರ ಮಂದಿ ಪದವಿ ಮುಗಿಸಿದ್ದಾರೆ. ಹುದ್ದೆ ಗಳನ್ನು ತುಂಬದೇ ಇರುವುದರಿಂದ ನಿರುದ್ಯೋಗಿಗಳಾಗಿದ್ದಾರೆ. 2010–11ರಲ್ಲಿ ಆದೇಶ ಹೊರಡಿಸಿದ್ದು, ಬಿಟ್ಟರೆ ಇಲ್ಲಿಯವರೆಗೂ ಕರೆದಿಲ್ಲ. ಪ್ರಾಥಮಿಕ, ಪ್ರೌಢ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಇದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲೇ 703 ಹುದ್ದೆಗಳು ಖಾಲಿ ಇವೆ.

ADVERTISEMENT

‘ಆರ್ಥಿಕ ಹೊರೆಯ ಕಾರಣ ಹೇಳಿ ನಮ್ಮನ್ನು ಪ್ರತಿ ವರ್ಷ ಕಡೆಗಣಿಸಲಾಗುತ್ತಿದೆ. ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಹಾಗೂ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಪ್ರತಿ ಪರೀಕ್ಷೆ ನಡೆಸುತ್ತದೆ. ಪ್ರತಿ ಬಾರಿಯೂ ನಾವು ಪರೀಕ್ಷೆ ಬರೆಯುತ್ತೇವೆ. 32 ಜಿಲ್ಲೆಗಳಲ್ಲೂ ಪರೀಕ್ಷಾ ಕೇಂದ್ರಗಳು ಇರುತ್ತವೆ. ಆದರೆ ಹುದ್ದೆಗಳನ್ನು ತುಂಬುತ್ತಿಲ್ಲ. ದಾವಣಗೆರೆಯಲ್ಲೇ 350 ಮಂದಿ ಇದ್ದೇವೆ’ ಎನ್ನುತ್ತಾರೆ ನವ ಕರ್ನಾಟಕ ಸಂಗೀತ ಪದವೀಧರರು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್.ಎಸ್. ಪ್ರಭುಶಂಕರ್.

‘ವಿದ್ಯಾರ್ಥಿಗಳ ಜೀವನದಲ್ಲಿ ಪಠ್ಯವಲ್ಲದೇ ಪಠ್ಯೇತರ ಚಟುವಟಿಕೆಯೂ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಮನಸ್ಸಿಗೆ ಉಲ್ಲಾಸ ನೀಡಲು ಸಂಗೀತ, ಚಿತ್ರಕಲೆ ಬೇಕೇ ಬೇಕು. ಆ ಹುದ್ದೆಗಳನ್ನೇ ತುಂಬದಿದ್ದರೆ ಹೇಗೆ’ ಎಂಬುದು ಅವರ ಪ್ರಶ್ನೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯವರು. ಅಲ್ಲಿ ಸಂಗೀತ ಬಳಗವೂ ಇದೆ. ಪುಟ್ಟರಾಜ ಗವಾಯಿಗಳ ಜೊತೆ ಸಂಬಂಧ ಇದೆ. ಇದನ್ನು ಪರಿಗಣಿಸಿಯಾದರೂ ಅವರು ಶೀಘ್ರ ಖಾಲಿ ಹುದ್ದೆ ಭರ್ತಿ ಮಾಡಬೇಕು. ಇಲ್ಲದಿದ್ದರೆ ಸಂಗೀತ ಉಪಕರಣಗಳ ಮುಂದೆ ಅವರ ನಿವಾಸದ ಎದುರು ಮುಂದೆ ಪ್ರತಿಭಟಿಸಲಾಗುವುದು. ಸಿರಿಗೆರೆ ನ್ಯಾಯಪೀಠಕ್ಕೂ ಈ ಕುರಿತು ಮನವಿ ಸಲ್ಲಿಸಲಾಗುವುದು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.