ADVERTISEMENT

ಸಂವಿಧಾನ ಪೂರ್ವದಲ್ಲಿ ಸಮಾನತೆ ಇರಲಿಲ್ಲ: ಎ.ಬಿ. ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:37 IST
Last Updated 27 ನವೆಂಬರ್ 2022, 2:37 IST
ದಾವಣಗೆರೆಯಲ್ಲಿ ಶನಿವಾರ ನಡೆದ ಪ್ರಗತಿಪರ ಗೀತೆಗಳ ಗಾಯನ, ಬೀದಿ ನಾಟಕ ಅಭಿನಯ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಶನಿವಾರ ನಡೆದ ಪ್ರಗತಿಪರ ಗೀತೆಗಳ ಗಾಯನ, ಬೀದಿ ನಾಟಕ ಅಭಿನಯ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿದರು   

ದಾವಣಗೆರೆ: ವೇದಗಳ ಕಾಲದಿಂದಲೇ ಪ್ರಜಾಪ್ರಭುತ್ವ ಮೌಲ್ಯಗಳು ಇದ್ದವು. ಸಮಾನತೆ ಇತ್ತು ಎಂದು ಸುಳ್ಳು ಹೇಳುತ್ತಿದ್ದಾರೆ. ಸಂವಿಧಾನ ಜಾರಿಗೆ ಬರುವ ಪೂರ್ವದಲ್ಲಿ ಇವು ಇರಲಿಲ್ಲ. ಶ್ರೇಣಿಕೃತ ವ್ಯವಸ್ಥೆ ಇತ್ತು. ಸಂವಿಧಾನ ಬಂದ ಮೇಲೆಯೇ ಎಲ್ಲರೂ ಸಮಾನರು ಎಂಬ ಮನೋಭಾವ ಬಂತು ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಹೇಳಿದರು.

ಭಾರತೀಯ ಜನಕಲಾ ಸಮಿತಿ, ಕರ್ನಾಟಕ ಜಾನಪದ ಪರಿಷದ್‌ ಜಿಲ್ಲಾ ಘಟಕ, ದೀಪ ಕಮಲ ಸಂಗೀತ ಸಂಸ್ಥೆಗಳ ಆಶ್ರಯದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ರೋಟರಿ ಬಾಲಭವನದಲ್ಲಿ ಶನಿವಾರ ನಡೆದ ಪ್ರಗತಿಪರ ಗೀತೆಗಳ ಗಾಯನ, ಬೀದಿ ನಾಟಕ ಅಭಿನಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ಈ ದಿನವನ್ನು ಭಾರತ ಲೋಕತಂತ್ರದ ಜನನಿ ಎಂದು ಆಚರಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರಜಾಪ್ರಭುತ್ವ ಎಂಬುದು ಸಂವಿಧಾನದ ಮೂಲಕ ಬಂದಿದ್ದಲ್ಲ. ವೇದಗಳ ಕಾಲದಿಂದಲೇ ಇತ್ತು. ಎಲ್ಲರನ್ನೂ ಭಗವದ್ಗೀತೆ ಸಮಾನವಾಗಿ ಕಂಡಿದೆ ಎಂದು ಈ ಆದೇಶದಲ್ಲಿ ಹೇಳಲಾಗಿದೆ. ಆದರೆ ಎಲ್ಲಿಯೂ ಡಾ.ಬಿ.ಆರ್‌. ಅಂಬೇಡ್ಕರ್‌ ಹೆಸರಿನ ಪ್ರಸ್ತಾಪ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಇದು ಸುಳ್ಳಿನ ಸಂಭ್ರಮದ ಕಾಲ. ಸುಳ್ಳಿನ ಸರ್ಕಾರ, ಸುಳ್ಳಿನ ಪ್ರಧಾನಿ, ಸುಳ್ಳಿನ ಮಂತ್ರಿಗಳು ಇರುವ ಕಾಲ ಇವರೆಲ್ಲ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಗ್ಗೊಲೆ ಮಾಡುತ್ತಿದ್ದಾರೆ. ಸಂವಿಧಾನ ಬರುವ ಮೊದಲು ಶ್ರೇಣಿಕೃತ ವ್ಯವಸ್ಥೆ ಇತ್ತು. ಶಿಕ್ಷಣ, ಸಂಪತ್ತು, ಅಧಿಕಾರವನ್ನು ಬ್ರಾಹ್ಮಣ, ವೈಶ್ಯ, ಕ್ಷತ್ರಿಯರಷ್ಟೇ ಹೊಂದಬಹುದಿತ್ತು. ಬಹುಸಂಖ್ಯಾತ ಶೂದ್ರರು ಈ ಅಧಿಕಾರವನ್ನು ಹೊಂದುವಂತಿರಲಿಲ್ಲ’ ಎಂದು ವಿವರಿಸಿದರು.

‘ಆಹಾರದ ಹಕ್ಕು, ಅಭಿವೃದ್ಧಿಯ ಹಕ್ಕು, ಮತದಾನದ ಹಕ್ಕು, ವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಸಂವಿಧಾನ ನೀಡಿದೆ. ಆಹಾರದ ಬಗ್ಗೆ, ಲಿಂಗದ ಬಗ್ಗೆ, ಭಾಷೆಯ ಬಗ್ಗೆ ಹೀಗೆ ಎಲ್ಲದ ಬಗ್ಗೆ ಕೀಳರಿಮೆ ಉಂಟು ಮಾಡಿ ವೈದಿಕ ಧರ್ಮವನ್ನೇ ಹಿಂದೂ ಧರ್ಮ ಎಂದು ಪ್ರತಿಪಾದಿಸಿ ವೈದಿಕ ಬೇರುಗಳನ್ನು ನಮ್ಮ ಮನಸ್ಸಿನ ಒಳಗೆ ಇಳಿಸುತ್ತಿವೆ’ ಎಂದು ಆರೋಪಿಸಿದರು.

ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್‌. ವಿಶ್ವನಾಥ್‌ ಅಧ್ಯಕ್ಷತೆ ವಹಿಸಿದ್ದರು. ದೀಪ ಕಮಲ ಸಂಗೀತ ಸಂಸ್ಥೆಯ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಪ್ರಗತಿಪರ ಚಿಂತಕ ತೇಜಸ್ವಿ ವಿ. ಪಟೇಲ್‌, ಸಿಪಿಐ ಕಾರ್ಯದರ್ಶಿ ಆವರಗೆರೆ ಚಂದ್ರು, ಪತ್ರಕರ್ತ ಷಣ್ಮುಖಸ್ವಾಮಿ, ಸಂಪನ್ಮೂಲ ವ್ಯಕ್ತಿ ಅಂಜಿನಪ್ಪ ಲೋಕಿಕೆರೆ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ನೂರ್‌ಫಾತಿಮಾ, ಲಾಯರ್ಸ್‌ ಗಿಲ್ಡ್‌ನ ಅನೀಸ್ ಪಾಷ, ಪ್ರೊ. ಕೃಷ್ಣಪ್ಪ ಟ್ರಸ್ಟ್‌ನ ಹನಗವಾಡಿ ರುದ್ರಪ್ಪ ಮುಂತಾದವರು ಇದ್ದರು. ಇಪ್ಟಾ ಕಲಾವಿದ ಐರಣಿ ಚಂದ್ರು ಸ್ವಾಗತಿಸಿದರು. ಎನ್‌.ಎಸ್‌. ರೇವಣ್ಣ ನಾಯ್ಕ ವಂದಿಸಿದರು. ಕೆ. ಬಾನಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.