ADVERTISEMENT

ಟಿಕೆಟ್ ಸಿಗದಿದ್ದಲ್ಲಿ ವಿನಯ್ ಕುಮಾರ್ ಬಂಡಾಯ ಅಭ್ಯರ್ಥಿಯಾಗುವ ಸಾಧ್ಯತೆ

ಬಿ.ಬಿ. ವಿನಯ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 15:14 IST
Last Updated 20 ಮಾರ್ಚ್ 2024, 15:14 IST

ದಾವಣಗೆರೆ: ‘ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಆಕಾಂಕ್ಷಿ ಜಿ.ಬಿ. ವಿನಯ್‌ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷ ‌ಟಿಕೆಟ್ ನೀಡದೇ ಇದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ’ ಎಂದು ಬಿ.ಬಿ. ವಿನಯ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ರಘು ದೊಡ್ಡಮನಿ ಹೇಳಿದರು.

‘ನಮ್ಮ ಹೋರಾಟ ಯಾವುದೇ ವ್ಯಕ್ತಿ, ಕುಟುಂಬ ಹಾಗೂ ಸಮುದಾಯದ ವಿರುದ್ಧವೂ ಅಲ್ಲ. ಇದೊಂದು ಜನಪ್ರತಿನಿಧಿ ಹೋರಾಟ. ವಿನಯ್‌ಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂಬುದಷ್ಟೇ ನಮ್ಮ ಪ್ರಮುಖ ಬೇಡಿಕೆ. ವಿನಯ್‌ಕುಮಾರ್ ಅವರು ಗುರುವಾರ ಸಭೆ ನಡೆಸಿ ತಮ್ಮ ನಿಲುವು ಪ್ರಕಟಿಸಲಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿ.ಬಿ. ವಿನಯ್ ಕುಮಾರ್ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದರೆ. ಪ್ರಜಾಪ್ರಭುತ್ವದ ವ್ಯವಸ್ಥೆಗೆ ಬಹಳ ದೊಡ್ಡ ಹಿನ್ನಡೆಯಾಗಲಿದೆ. ದಾವಣಗೆರೆ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ. ಅವರಿಗೆ ಟಿಕೆಟ್ ನೀಡಿದರೆ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಆದ್ದರಿಂದ ಪಕ್ಷದ ವರಿಷ್ಠರು ವಿನಯ್‌ಕುಮಾರ್ ಅವರಿಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ವಿನಯ್ ಕುಮಾರ್ ದೊಡ್ಡ ಸಮುದಾಯ ಹೊಂದಿರುವಂತಹ ಯುವನಾಯಕ. ಅವರನ್ನು ಕಡೆಗಣಿಸಿದರೆ ಸಮುದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಅವರಿಗೆ ಟಿಕೆಟ್ ನೀಡಿದರೆ ಗೆಲ್ಲುವ ವ್ಯಕ್ತಿಗೆ ನ್ಯಾಯ ದೊರಕಿಸಿದಂತಾಗಿದೆ. ಒಂದು ವೇಳೆ ಟಿಕೆಟ್ ಕೈತಪ್ಪಿದರೆ ಕಾಂಗ್ರೆಸ್ ತತ್ವ ಸಿದ್ಧಾಂತದ ವಿರುದ್ಧ ತೀರ್ಮಾನ ತೆಗೆದುಕೊಂಡಂತಾಗುತ್ತದೆ’ ಎಂದರು.

‘ವಿನಯ್‌ಕುಮಾರ್ ವಿದ್ಯಾರ್ಥಿಗಳ, ಅಧಿಕಾರಿಗಳ ಸಮುದಾಯವನ್ನು ಹೊಂದಿದ್ದು, ಅವರಿಗೆ ಟಿಕೆಟ್ ನೀಡದೇ ಹೋದರೆ ಆ ಸಮುದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಕ್ಷೇತ್ರ ಸ್ವಾಭಿಮಾನಿ ಹೋರಾಟದ ಪ್ರತಿಷ್ಠೆಯ ಕಣವಾಗಲಿದೆ’ ಎಂದರು.

ಉಮೇಶ್ ಕೆ. ಮಹಮ್ಮದ್, ಬಸವನಗೌಡ, ಹೇಮಂತ್ ಕುಮಾರ್, ರಂಗಸ್ವಾಮಿ, ಪರಶುರಾಮಪ್ಪ, ವಿಜಯ್ ಕುಮಾರ್, ಶಿವಕುಮಾರ ಸಾಂಬಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.