ADVERTISEMENT

ಅರಳುವ ಮುನ್ನವೇ ಕಮರಿತು ಬದುಕು

ಆಟೊ ಅಪಘಾತ: 4ಕ್ಕೇರಿದ ಸಾವಿನ ಸಂಖ್ಯೆ; ಬೆಳ್ಳೂಡಿಯಲ್ಲಿ ನೀರವಮೌನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 5:05 IST
Last Updated 28 ಫೆಬ್ರುವರಿ 2022, 5:05 IST
ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮವು ಅಪಘಾತದಿಂದ ಮೂವರನ್ನು ಕಳೆದುಕೊಂಡು ಭಾನುವಾರ ನಿರ್ಜನವಾಗಿತ್ತು.
ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮವು ಅಪಘಾತದಿಂದ ಮೂವರನ್ನು ಕಳೆದುಕೊಂಡು ಭಾನುವಾರ ನಿರ್ಜನವಾಗಿತ್ತು.   

ಹರಿಹರ: ಹೊರವಲಯದ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯ ಪಂಚಮಸಾಲಿ ಮಠದ ಸಮೀಪ ಶನಿವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಮರಣ ಹೊಂದಿದವರ ಸಂಖ್ಯೆ ನಾಲ್ಕಕ್ಕೇರಿದೆ.

ಗಂಭೀರವಾಗಿ ಗಾಯಗೊಂಡಿದ್ದ ಬೆಳ್ಳೂಡಿ ಗ್ರಾಮದ ಪ್ರಭು ಅವರ ಪುತ್ರಿ ಸೌಮ್ಯ (19) ಭಾನುವಾರ ಬೆಳಗ್ಗೆ ಎಸ್.ಎಸ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು.

ಆಟೊದಲ್ಲಿದ್ದ ಪ್ರಯಾಣಿಕರ ಪೈಕಿ ನಾಗೇನಹಳ್ಳಿ ವಾಸಿ ಹನುಮಂತಪ್ಪರ ಪತ್ನಿ ಚಂದ್ರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದ 9 ಗಾಯಾಳುಗಳನ್ನು ಹರಿಹರ, ದಾವಣಗೆರೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಎಸ್.ಎಸ್.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳ್ಳೂಡಿ ಗ್ರಾಮದರಾದ ಅನಿಲ್ ಕುಮಾರ್ ಹಾಗೂ ಬಸವರಾಜು ಎಸ್. (15) ಶನಿವಾರ ರಾತ್ರಿ ಮೃತಪಟ್ಟಿದ್ದರು. ಕಕ್ಕರಗೊಳ್ಳ ಹಾಸ್ಟೆಲ್‌ನಲ್ಲಿದ್ದು, ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿದ್ದ ಸೌಮ್ಯ ಭಾನುವಾರ ಬೆಳಿಗ್ಗೆ ಅಸು ನೀಗಿದರು.

ADVERTISEMENT

ಮನೆ ತಲುಪಲಿಲ್ಲ:

ಓದಿ ಜೀವನದಲ್ಲಿ ಮುಂದೆ ಬರಬೇಕೆಂದು ಪರ ಊರಿನ ಹಾಸ್ಟೆಲ್‍ಗ ಳಲ್ಲಿದ್ದು, ಅಭ್ಯಾಸ ಮಾಡುತ್ತಿದ್ದ ಮೂವರು ಮಕ್ಕಳನ್ನು ಕಳೆದುಕೊಂಡ ಬೆಳ್ಳೂಡಿ ಗ್ರಾಮವು ತಬ್ಬಲಿಯಾದ ದುಃಖದಲ್ಲಿದೆ. ಭಾನುವಾರ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಗ್ರಾಮಸ್ಥರ ಮುಖ ಕಳಾಹೀನವಾಗಿತ್ತು. ಮಕ್ಕಳನ್ನು ಕಳೆದುಕೊಂಡ ಎ.ಕೆ.ಕಾಲೊನಿಯ ಅಡಿವೆಪ್ಪ, ನೇಕಾರರ ಪ್ರಭು ಮತ್ತು ಶಿವಾನಂದಪ್ಪ ಮನೆ ಮುಂದೆ ಬಂಧು, ಬಳಗ, ಗ್ರಾಮಸ್ಥರು ಸೇರಿದ್ದರು. ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದ ದೃಶ್ಯ ಮನ ಕಲುಕುವಂತಿತ್ತು.

ಭಾನುವಾರ ಮಧ್ಯಾಹ್ನ 2ರಿಂದ 5 ಗಂಟೆಯೊಳಗೆ ಒಂದರ ಹಿಂದೆ ಒಂದು ಎಂಬಂತೆ ಮೂವರೂ ವಿದ್ಯಾರ್ಥಿಗಳ ಶರೀರವನ್ನು ಗ್ರಾಮಕ್ಕೆ ತಂದಾಗ ಗ್ರಾಮಸ್ಥರ ದುಃಖದ ಕಟ್ಟೆ ಒಡೆಯಿತು. ಜಾತಿ, ಧರ್ಮ, ಜನಾಂಗದ ಹಂಗಿಲ್ಲದೆ ಗ್ರಾಮದ ಪ್ರತಿಯೊಬ್ಬರ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಸಹಿಸಿಕೊಳ್ಳಲಾಗುವುದಿಲ್ಲವೆಂದು ಹಲವರು ಮೃತರ ಮನೆ ಬಳಿ ಬರಲಿಲ್ಲ. ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದ ದೃಶ್ಯ ಕಂಡು ಬಂತು. ಭಾನುವಾರ ಎಲ್ಲಾ ಮೂವರ ಅಂತ್ಯ ಸಂಸ್ಕಾರ ನಡೆಸಲಾಯಿತು.

ಆಟೊ ಸಂಚಾರಕ್ಕೆ ನಿಷೇಧ: ಅಪಘಾತದಿಂದ ನೊಂದ ಗ್ರಾಮಸ್ಥರು ಆಟೊ ಸಂಚಾರಕ್ಕೆ ನಿಷೇಧ ಹಾಕಿದರು. ಇದರಿಂದಾಗಿ ಭಾನುವಾರ ಬೆಳ್ಳೂಡಿಯಿಂದ ಹರಿಹರಕ್ಕೆ ಆಟೊ ಸಂಚಾರ ಇರಲಿಲ್ಲ. ಸೋಮವಾರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾಮದ ಮುಖಂಡರು ಆಟೊ ಚಾಲಕ ರೊಂದಿಗೆ ಚರ್ಚಿಸಲು ಸಭೆ ಕರೆದಿದ್ದು, ಅಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಕೆಲವು ಚಾಲಕರು ಮದ್ಯ ಕುಡಿದು ಆಟೊ ಚಾಲನೆ ಮಾಡುತ್ತಾರೆ, ವಿಮೆ, ಡಿಎಲ್ ಹೊಂದಿಲ್ಲ. ಆಟೊವನ್ನು ಆಗಾಗ್ಗೆ ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿ ಇಡುವುದಿಲ್ಲ. ಡ್ರೈವಿಂಗ್ ಬಾರದವರು ಚಾಲನೆ ಮಾಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗಾಯಾಳುಗಳ ಆರೋಗ್ಯ ವಿಚಾರಿಸಲು ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಕಾಂಗ್ರೆಸ್ ಮುಖಂಡ ಎಚ್.ಎಚ್. ಬಸವರಾಜ್ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.