ADVERTISEMENT

VIDEO| ಹೆಲ್ಮೆಟ್ ಇಲ್ಲದ ಸವಾರರಿಗೆ ಯಮನ ಕುಣಿಕೆ: ಪೊಲೀಸರಿಂದ ಸಂಚಾರ ಜಾಗೃತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 9:51 IST
Last Updated 17 ಜನವರಿ 2020, 9:51 IST
   

ದಾವಣಗೆರೆ: ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರಿಗೆ ಇಲ್ಲಿನ ದಕ್ಷಿಣ ಸಂಚಾರ ಠಾಣೆ ಪೊಲೀಸರು ಯಮ ಕಿಂಕರರ ವೇಷ ಧರಿಸಿ ವಿಶಿಷ್ಟ ರೀತಿಯಲ್ಲಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸಿದರು.

ಇಲ್ಲಿನ ಜಯದೇವ ವೃತ್ತದಲ್ಲಿ ಹೆಲ್ಮೆಟ್ ಧರಿಸದೇ ಬಂದ ಸವಾರರ ಕುತ್ತಿಗೆಗೆ ಹಗ್ಗ ಹಾಕುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಯಮ ನಿಮ್ಮ ಹಿಂದೆಯೇ ಬರುತ್ತಾನೆ ಎಂಬ ಎಚ್ಚರಿಕೆಯನ್ನೂ ಕೊಟ್ಟರು.

ಯಮ ವೇಷಧಾರಿ ಕುತ್ತಿಗೆಗೆ ಹಗ್ಗ ಹಾಕಿ ‘ಎಲವೋ ಮಾನವ ನಿನ್ನನ್ನು ನಂಬಿಕೊಂಡು ಹೆಂಡತಿ, ಮಕ್ಕಳು ಜೀವನ ಸಾಗಿಸುತ್ತಿದ್ದಾರೆ. ನೀನು ಸತ್ತರೆ ಅವರು ಜೀವನ ಹೇಗೆ ಮಾಡಬೇಕು ಎಂಬುದನ್ನು ಯೋಚಿಸು’ ಎಂದು ತಿಳಿವಳಿಕೆ ನೀಡಿದರು. ಅಲ್ಲದೇ ದಂಡವನ್ನು ವಿಧಿಸಿದರು.

ADVERTISEMENT

ವೃತ್ತದಲ್ಲಿ ಬರುತ್ತಿದ್ದ ಬಸ್ ಹತ್ತಿದ ವೇಷಧಾರಿಗಳು ಚಾಲಕನ ಕುತ್ತಿಗೆಗೆ ಹಗ್ಗ ಹಾಕಿ ‘ನಿನ್ನ ಲೈಸೆನ್ಸ್ ಎಲ್ಲಿ, ಇಲ್ಲಿರುವ ಪ್ರಮಾಣಿಕರು ನಿನ್ನನ್ನು ನಂಬಿ ಬರುತ್ತಿದ್ದು, ಮದ್ಯಪಾನ ಮಾಡಿ ಚಾಲನೆ ಮಾಡಬೇಡ, ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಬಸ್‌ನಲ್ಲಿ ಕೂರಿಸಿಕೊಳ್ಳಬೇಡ’ ಎಂದು ಕಿವಿಮಾತು ಹೇಳಿದರು.

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ದಾವಣಗೆರೆ ದಕ್ಷಿಣ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಮಂಜುನಾಥ ಅರ್ಜುನ್‌ ಲಿಂಗಾರೆಡ್ಡಿ ಹಾಗೂ ಜಯಶೀಲಾ ಅವರ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಯಮನ ವೇಷಧಾರಿಯಾಗಿ ಕಾನ್‌ಸ್ಟೆಬಲ್‌ಗಳಾದ ರಾಮಾಂಜನೇಯ, ಕಿಂಕರನಾಗಿ ಹರೀಶನಾಯ್ಕ, ಚಿತ್ರಗುಪ್ತನಾಗಿ ಮಂಜುನಾಥ್ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.