ಶಿವಮೊಗ್ಗ: ತುಂಗಾ ಜಲಾಶಯದಿಂದ ತುಂಗಾ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರುಹರಿಸಲು ಕರ್ನಾಟಕ ನೀರಾವರಿ ನಿಗಮ ನಿರ್ಧರಿಸಿದೆ.
ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ನೀರು ಹರಿಸಲಾಗುತ್ತಿದೆ. ತೋಟಗಾರಿಕೆ ಮತ್ತು ಇತರೆ ಬೆಳೆದ ನಿಂತ ಪೈರಿಗೆ ಮಾತ್ರ ನೀರನ್ನು ಹರಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಬೇಸಿಗೆ ಬೆಳೆ ಭತ್ತಕ್ಕೆ ನೀರಿನ ಪೂರೈಕೆ ಅಸಾಧ್ಯವಾಗಿದ್ದು, ಈ ಭಾಗದ ರೈತರು ಬೇಸಿಗೆ ಭತ್ತವನ್ನು ಬೆಳೆಯದಂತೆ ಸೂಚನೆ ನೀಡಲಾಗಿದೆ. ಜ. 5ರಿಂದ 13ರ ವರೆಗೆ, ಜ.28ರಿಂದ ಫೆಬ್ರುವರಿ 5ರ ವರೆಗೆ, ಫೆ.21ರಿಂದ ಮಾರ್ಚ್ 1ರ ವರೆಗೆ, ಮಾ.16ರಿಂದ 24ರ ವರೆಗೆ, ಏಪ್ರಿಲ್ 9ರಿಂದ 17ರ ವರೆಗೆ ಹಾಗೂ ಮೇ 2ರಿಂದ 10ರ ವರೆಗೆ ನೀರನ್ನು ಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಧ್ಯರಾತ್ರಿಯಿಂದಲೇ ಭದ್ರಾ ಬಲದಂಡೆ ನಾಲೆಗೆ ನೀರು:
ಭದ್ರಾ ಜಲಾನಯನ ಪ್ರದೇಶದಲ್ಲಿ ಬೇಸಿಗೆ ಬೆಳೆಗಳಿಗೆ ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಈಗಾಗಲೇ ನೀರು ಹರಿಸಲಾಗುತ್ತಿದೆ. ಬಲದಂಡೆ ನಾಲೆ ಹಾಗೂ ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಿಗೆ ಬುಧವಾರ ರಾತ್ರಿಯಿಂದ ನೀರು ಹರಿಸಲಾಗಿದೆ.
ಈ ಕಾಲುವೆಯ ಪಾತ್ರಗಳ ವ್ಯಾಪ್ತಿಯ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ಜಾನುವಾರು ಮೈ ತೊಳೆಯುವುದು ಹಾಗೂ ಇತರೆ ಚಟುವಟಿಕೆಯನ್ನು ನಿಷೇಧಿಸಲಾಗಿದೆ ಎಂದು ಎಂಜಿನಿಯರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.