ಹರಿಹರ: ನಗರದ ಹೊರ ವಲಯದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೊಸ ಸೇತುವೆ ಸರಿಯಾದ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.
ಕೇವಲ 15 ನಿಮಿಷ ಮಳೆ ಬಂದರೂ, ಸೇತುವೆ ಮೇಲಿನ ರಸ್ತೆಯಲ್ಲಿ ಮೂರು ದಿನಗಳ ಕಾಲ ಮಳೆ ನೀರು ನಿಲ್ಲುತ್ತಿದೆ. ಮಳೆ ನೀರನ್ನು ಸೇತುವೆ ಮೂಲಕ ಕೆಳಕ್ಕೆ ಇಳಿಸುವ ಕಿಂಡಿಗಳೆಲ್ಲ ಮಣ್ಣು, ಕಸ–ಕಡ್ಡಿಯಿಂದ ಮುಚ್ಚಿ ಹೋಗಿರುವುದೇ ಇದಕ್ಕೆ ಕಾರಣ.
ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮುಖ್ಯ ರಸ್ತೆ ಸೇರಿ ರಸ್ತೆ, ಸೇತುವೆಗಳ ನಿರ್ವಹಣೆಗೆ ವರ್ಷಕ್ಕೆ ಇಂತಿಷ್ಟೆಂದು ಆಯಾ ಇಲಾಖೆಗಳು ಅನುದಾನ ತೆಗೆದಿಡುತ್ತವೆ. ಆ ಅನುದಾನ ಬಂದಾಗ ಗಿಡ– ಗಂಟಿಗಳ ತೆರವು ಕಾರ್ಯ ನಡೆಯುತ್ತದೆ. ಅನುದಾನ ಬಾರದಿದ್ದರೆ, ತಡವಾದರೆ ಸಂಚರಿಸುವ ಜನ, ವಾಹನ ಸವಾರರಿಗೆ ಸಂಕಷ್ಟವಷ್ಟೇ ಅಲ್ಲ, ಆ ರಸ್ತೆ, ಸೇತುವೆಗಳ ಆಯಸ್ಸು ಕಡಿಮೆಯಾಗುತ್ತದೆ.
3 ದಶಕಗಳ ಹೋರಾಟ:
ಬ್ರಿಟಿಷ್ ಆಡಳಿತದ ಅವಧಿಯಲ್ಲಿ, 1886ರಲ್ಲಿ ನಿರ್ಮಿಸಿದ್ದ ಹಳೆ ಸೇತುವೆ ಆಗಿನ ಮೈಸೂರು ಮತ್ತು ಬಾಂಬೆ ರಾಜ್ಯದ ಸಂಪರ್ಕ ಸೇತುವೆಯಾಗಿತ್ತು. ಶಿಥಿಲಗೊಂಡಿದೆ ಎಂದು 1990ರಲ್ಲಿ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.
ಆಗ ಹರಿಹರ– ರಾಣೇಬೆನ್ನೂರು ಮಧ್ಯದಲ್ಲಿ ವಾಹನ ಸಂಚಾರಕ್ಕೆ 9 ಕಿ.ಮೀ. ಹೆಚ್ಚುವರಿಯಾಗಿ ಸುತ್ತಬೇಕಾಯಿತು. ಈ ಎರಡೂ ನಗರಗಳ ಮಧ್ಯೆ ನಿತ್ಯವೂ ಸಾರಿಗೆ ಸಂಸ್ಥೆಯ ಅಂದಾಜು 1,000 ಬಸ್‌ಗಳು ಸಂಚರಿಸುತ್ತಿದ್ದವು. ಇನ್ನು ಉಳಿದ ಖಾಸಗಿ ಬಸ್ ಸೇರಿ ಇತರೆ ವಾಹನಗಳ ಸಂಖ್ಯೆ ಅಪಾರವಾಗಿತ್ತು.
ಅಂತೆಯೇ ಹೊಸ ಸೇತುವೆ ನಿರ್ಮಿಸುವಂತೆ ಆಗಿನ ಶಾಸಕರು ಸರ್ಕಾರಕ್ಕೆ ಪಸ್ತಾವ ಸಲ್ಲಿಸಿದರು. ಹಲವು ಸಂಘ– ಸಂಸ್ಥೆಯವರು ಪ್ರತಿಭಟನೆಗಳನ್ನೂ ನಡೆಸಿದ್ದರು. ಕೊನೆಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿದ್ದ ರಾಜ್ಯ ಸರ್ಕಾರದಿಂದ ಆಗ ಕ್ಷೇತ್ರದ ಶಾಸಕರಾಗಿದ್ದ ಬಿ.ಪಿ. ಹರೀಶ್ ₹ 24 ಕೋಟಿ ಅನುದಾನ ಬಿಡುಗಡೆಗೊಳಿಸಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಐದಾರು ವರ್ಷಗಳ ಕಾಲ ಸೇತುವೆ ಕಾಮಗಾರಿ ಕುಂಟುತ್ತ ಸಾಗಿತ್ತು. ನಾಲ್ಕೈದು ವರ್ಷಗಳ ಹಿಂದೆ ಹೊಸ ಸೇತುವೆ ಮೇಲೆ ವಾಹನ ಸಂಚಾರ ಆರಂಭವಾಯಿತು. ಆದರೆ, ಸೇತುವೆಯ ನಿರ್ವಹಣೆ ಕೊರತೆ ಇದೆ.
ಗುಂಡಿಮಯ:
ಅಂದಾಜು 300 ಮೀ. ಉದ್ದದ ಈ ಸೇತುವೆಯಲ್ಲಿ ಎಣಿಸುತ್ತ ಹೋದರೆ 300ಕ್ಕೂ ಹೆಚ್ಚು ಗುಂಡಿಗಳು ಕಾಣಸಿಗುತ್ತವೆ. ಇತ್ತೀಚಿನವರೆಗೂ ಸುಸಜ್ಜಿತ ಎನಿಸುತ್ತಿದ್ದ ಸೇತುವೆ ಮೇಲೆ ಈಗ ಆತಂಕದಿಂದಲೇ ಸಾರ್ವಜನಿಕರು ಸಾಗಬೇಕಿದೆ. ಬೈಕ್ ಸವಾರರು ಒಂದು ಗುಂಡಿ ತಪ್ಪಿಸಲು ಇನ್ನೊಂದು ಬದಿಗೆ ಸರಿದಾಗ ಹಿಂದಿನಿಂದ ಬರುವ ವಾಹನದ ಚಕ್ರಕ್ಕೆ ಆಹುತಿಯಾಗುವ ಅಪಾಯ ಇದೆ.
ವಾರ್ಷಿಕ ನಿರ್ವಹಣಾ ಅನುದಾನ ಬಂದಾಗ ಸೇತುವೆಗೆ ಸುಣ್ಣ, ಬಣ್ಣ ಹೊಡೆಸುವುದು, ಇಕ್ಕೆಲಗಳಲ್ಲಿ ಬೆಳೆದ ಗಿಡ– ಗಂಟಿಗಳ ತೆರವು ಕಾರ್ಯ, ಕಿಂಡಿಗಳಲ್ಲಿನ ಮಣ್ಣು, ಕಸ ತೆಗೆಸುವ ಕಾರ್ಯ ನಡೆಯುತ್ತದೆ. ಈಗ ಮಳೆಗಾಲವಾದ್ದರಿಂದ ಮಳೆ ನೀರು ಸೇತುವೆ ಮೇಲೆ ನಿಲ್ಲದಂತೆ ಕನಿಷ್ಠ ಕಿಂಡಿಗಳಲ್ಲಿ ಸಿಲುಕಿದ ಮಣ್ಣನ್ನು ತೆರವುಗೊಳಿಸಿದರೂ ಸೇತುವೆಯ ಆಯಸ್ಸು ಹೆಚ್ಚಾಗುತ್ತದೆ ಎಂಬುದು ಸ್ಥಳೀಯರ ಅನಿಸಿಕೆ.
ಸೇತುವೆಗೆ ವಾರ್ಷಿಕ ನಿರ್ವಹಣಾ ಅನುದಾನ ಬಿಡುಗಡೆ ಮಾಡಲು ಇಲಾಖೆಗೆ ಕೋರಿದ್ದು ಅನುದಾನ ಬಂದ ನಂತರ ಕಿಂಡಿಗಳನ್ನು ಸ್ವಚ್ಛಗೊಳಿಸುತ್ತೇವೆಮರಿಸ್ವಾಮಿ ಎಚ್.ವಿ ಎಇಇ ಲೋಕೋಪಯೋಗಿ ಇಲಾಖೆ ಹರಿಹರ
‘ಭಿಕ್ಷಾಂದೇಹಿ ಅಭಿಯಾನ ಶೀಘ್ರ’:
ಸೇತುವೆ ಮೇಲಿನ ಕಿಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಅನುದಾನಕ್ಕಾಗಿ ಕಾಯುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನಮ್ಮ ಸಂಘಟನೆಯಿಂದ ‘ಭಿಕ್ಷಾಂದೇಹಿ ಅಭಿಯಾನ’ದ ಮೂಲಕ ದೇಣಿಗೆ ಸಂಗ್ರಹಿಸಿ ನೀಡುವ ಕಾರ್ಯವನ್ನು ಶೀಘ್ರವೇ ಹಮ್ಮಿಕೊಳ್ಳುತ್ತೇವೆ. ನಮ್ಮೂರಿನ ಸೇತುವೆ ಉಳಿಸಲು ಜನರು ಉದಾರವಾಗಿ ಭಿಕ್ಷೆ ನೀಡಲು ಕೋರುತ್ತೇವೆ. ನಾಗರಾಜ ಭಂಡಾರಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷ ಹರಿಹರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.