ಹೊನ್ನಾಳಿಯಲ್ಲಿ ತುಂಗಾಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ತುಂಬಿ ಹರಿಯುತ್ತಿದೆ
ದಾವಣಗೆರೆ/ಹೊನ್ನಾಳಿ: ತುಂಗಭದ್ರಾ ನದಿಯಲ್ಲಿ 1.12 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು, ಅಪಾಯದ ಮಟ್ಟ ಮೀರುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಹೊನ್ನಾಳಿ ಪಟ್ಟಣದ 10 ಕುಟುಂಬದ 40 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಹೊನ್ನಾಳಿಯ ಬಾಲರಾಜ್ ಘಾಟ್‍ನಲ್ಲಿನ ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ನದಿ ಪಾತ್ರದಲ್ಲಿ ಅಪಾಯದಲ್ಲಿರುವ ಕುಟುಂಬಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ನದಿ ನೀರಿನ ಮಟ್ಟ ಏರಿಕೆಯಾದರೆ ಕಾಳಜಿ ಕೇಂದ್ರಕ್ಕೆ ಬರುವ ಕುಟುಂಬಗಳ ಸಂಖ್ಯೆ ಹೆಚ್ಚಾಗಲಿದೆ.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದೆ. ತುಂಗಾ ಜಲಾಶಯದಿಂದ 68,599 ಕ್ಯೂಸೆಕ್ ಮತ್ತು ಭದ್ರಾ ಜಲಾಶಯದಿಂದ 39,017 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಎರಡು ಜಲಾಶಯಗಳ ನೀರು ಸೇರಿ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೊನ್ನಾಳಿ, ನ್ಯಾಮತಿ ಹಾಗೂ ಹರಿಹರ ತಾಲ್ಲೂಕಿನ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
‘ಹರಿಹರದ ಗಂಗಾನಗರದ ಬಳಿಯ ಎಪಿಎಂಸಿ ಭವನ ಹಾಗೂ ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂತ್ರಸ್ತರಿಗೆ ಊಟ, ಅಗತ್ಯ ಮೂಲಸೌಲಭ್ಯ ಹಾಗೂ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಜನ ಹಾಗೂ ಜಾನುವಾರು ನದಿಗೆ ಇಳಿಯಬಾರದು. ನದಿಯ ಬಳಿ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳವುದನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
‘ಹೊನ್ನಾಳಿಯಲ್ಲಿ ತುಂಗಭದ್ರಾ ನದಿ ನೀರಿನ ಮಟ್ಟ 11 ಮೀಟರ್‌ಗೆ ಏರಿಕೆಯಾದರೆ ಎಚ್ಚರಿಕೆ ಅಗತ್ಯ. 12 ಮೀಟರ್‌ಗೆ ಏರಿಕೆಯಾದರೆ ಅಪಾಯದ ಮಟ್ಟವೆಂದು ಪರಿಗಣಿಸಲಾಗುತ್ತದೆ. ಭಾನುವಾರ ಮಳೆ ಸ್ವಲ್ಪ ಕಡಿಮೆಯಾದಂತೆ ಕಂಡುಬಂದರೂ ನದಿ ನೀರಿನ ಮಟ್ಟದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಹೊನ್ನಾಳಿ ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಸೂಚಿಸಿದ್ದಾರೆ.
ಸಹಾಯವಾಣಿ ಆರಂಭ
ಸಾರ್ವಜನಿಕರ ನೆರವಿಗೆ ಸಹಾಯವಾಣಿ ತೆರೆಯಲಾಗಿದೆ. ತುರ್ತು ಸಂದರ್ಭದಲ್ಲಿ ಜನರು ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಜಿಲ್ಲಾಡಳಿತ ಕೋರಿದೆ. ದಾವಣಗೆರೆ 08192-234034 ಅಥವಾ 1077 ದೇವರಬೆಳೆಕೆರೆ ಎಸ್‍ಡಿಆರ್‌ಎಫ್ ಘಟಕ– 7411308591 ಆಗ್ನಿಶಾಮಕ ಇಲಾಖೆ 08192-258101 ಅಥವಾ 112 ಮಹಾನಗರ ಪಾಲಿಕೆ 08192-234444 8277234444 ಸ್ಮಾರ್ಟ್ ಸಿಟಿ 18004256020 ಸಂಪರ್ಕಿಸಬಹುದಾಗಿದೆ. ದಾವಣಗೆರೆ ತಾಲ್ಲೂಕು ಕಚೇರಿ 9036396101 ಹರಿಹರ 08192-272959 ಹೊನ್ನಾಳಿ 08188-252108 ನ್ಯಾಮತಿ 8073951245 ಚನ್ನಗಿರಿ 08188-295518 ಸಂಪರ್ಕಿಸಬಹುದಾಗಿದೆ.
ತುಂಗ ಮತ್ತು ಭದ್ರಾ ಜಲಾಶಯಗಳಿಂದ 112170 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವ ಅಗತ್ಯವಿದೆ.-ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.