ADVERTISEMENT

ಉಕ್ಕಡಗಾತ್ರಿ: ಜಲಾವೃತವಾದ ರಸ್ತೆ, ಹೊಲ ಗದ್ದೆಗಳು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:42 IST
Last Updated 19 ಆಗಸ್ಟ್ 2025, 4:42 IST
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ– ಪತ್ತೇಪುರ ರಸ್ತೆ ಜಲಾವೃತವಾಗಿದೆ
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ– ಪತ್ತೇಪುರ ರಸ್ತೆ ಜಲಾವೃತವಾಗಿದೆ   

ಕಡರನಾಯ್ಕನಹಳ್ಳಿ: ಉಕ್ಕಡಗಾತ್ರಿ –ಪತ್ಯಾಪುರ ರಸ್ತೆ ಜಲಾವೃತವಾಗಿದೆ. ಮಳನಾಯ್ಕನಹಳ್ಳಿ ರಸ್ತೆಯೂ ಜಲಾವೃತವಾಗುವ ಸಾಧ್ಯತೆ ಇದೆ. ಹೊಲಗದ್ದೆಗಳು ಜಲಾವೃತವಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. 

ಶ್ರಾವಣ ಸೋಮವಾರ ಅಜ್ಜಯ್ಯನ ದರ್ಶನಕ್ಕೆ ಬಂದ ಭಕ್ತರ ಸಂಖ್ಯೆಯೂ ಹೆಚ್ಚಾಗಿತ್ತು. ರಾಣೇಬೆನ್ನೂರು ತಾಲ್ಲೂಕು ತುಮ್ಮಿನಕಟ್ಟಿ ಮಾರ್ಗವಾಗಿ ಮಾಳನಾಯ್ಕನಹಳ್ಳಿ ಮಾರ್ಗವಾಗಿ ಉಕ್ಕಡಗಾತ್ರಿಗೆ ತಲುಪಬೇಕಾಗಿದೆ. 

ತುಂಗಾ ಮತ್ತು ಭದ್ರಾ ಜಲಾಶಯಗಳು ಭರ್ತಿಯಾಗಿವೆ. ಒಳಹರಿವು ಹೆಚ್ಚಾಗಿರುವುದು ಮತ್ತು ನಿರಂತರ ಮಳೆ ಕಾರಣಕ್ಕೆ ಜಲಾಶಯದಿಂದ ನೀರು ಬಿಟ್ಟಿದ್ದು, ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. 

ADVERTISEMENT

ಅಜ್ಜಯ್ಯನ ದೇವಸ್ಥಾನದ ಗೋಡೆವರೆಗೆ ನೀರು ಆವರಿಸಿದೆ. ಭಕ್ತರ ತಂಗುದಾಣ, ಜವಳ ಕೇಂದ್ರ ಜಲಾವೃತವಾಗಿವೆ. 

ದೇವಸ್ಥಾನದ ಟ್ರಸ್ಟ್ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಎಸ್.ಸುರೇಶ್ ತಿಳಿಸಿದ್ದಾರೆ. 

‘ಭತ್ತದ ನಾಟಿ ಮಾಡಿದ ಗದ್ದೆಗಳು ಜಲಾವೃತವಾಗಿವೆ. ಅಡಿಕೆ, ತೆಂಗಿನ ತೋಟಗಳು ನದಿಯ ಹಿನ್ನೀರಿನಿಂದ ಜಲಾವೃತವಾಗಿವೆ. ಪ್ರತೀ ವರ್ಷ ಇದೇ ಪರಿಸ್ಥಿತಿ ಅನುಭವಿಸುತ್ತಿದ್ದೇವೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಬೇಕು. ಹಳೆಪಾಳ್ಯ ಬಳಿ ಉಕ್ಕಡಗಾತ್ರಿಗೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣ ಮಾಡಬೇಕು’ ಎಂದು ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಿಗಳೇರ ಚಂದ್ರಗೌಡ ಆಗ್ರಹಿಸಿದರು. 

‘ತರಕಾರಿ ಬೆಳೆ ನೀರುಪಾಲಾಗಿದೆ. ಇರುವ ಒಂದಷ್ಟು ಭೂಮಿಯಲ್ಲೇ ನಮ್ಮ ಸಂಸಾರ ನಡೆಯಬೇಕಿದೆ. ಸರ್ಕಾರ ಪರಿಹಾರ ನೀಡಬೇಕು’ ಎಂದು ಕೃಷಿಕರಾದ ಪದ್ಮಪ್ಪ ಪೂಜಾರ್, ಬೀರಪ್ಪ ಪೂಜಾರ್, ಕರಿಬಸಪ್ಪ, ಮಾಲತೇಶ ಮರಾಠಿ ಅಳಲು ತೋಡಿಕೊಂಡರು. 

‘ತೋಟಗಳೂ ಜಲಾವೃತವಾಗಿದ್ದು, ಇಲಾಖೆಯವರು ಪರಿಶೀಲಿಸಿ ಪರಿಹಾರ ನೀಡಬೇಕು’ ಎಂದು ಗ್ರಾಮದ ವಕೀಲ ಮಂಜುನಾಥ್ ದೊಡ್ಮನಿ, ಕೆ.ಬಸವರಾಜ್ ಒತ್ತಾಯಿಸಿದರು.

ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನದ ಭಕ್ತರ ತಂಗುದಾಣ ಮತ್ತು ಜವಳ ಕೇಂದ್ರಗಳು ಜಲಾವೃತವಾಗಿವೆ
ಅಡಿಕೆ ತೋಟಗಳಿಗೆ ತೊಂದರೆಯಾಗುವುದಿಲ್ಲ. ತೆಂಗಿನ ತೋಟಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ನದಿ ನೀರು ಕಡಿಮೆಯಾದರೆ ತೊಂದರೆ ಇಲ್ಲ. ಪರಿಶೀಲಿಸಿ ಕ್ರಮ ವಹಿಸಲಾಗುವುದು
ಸಂತೋಷ್ ಸಹಾಯಕ ಅಧಿಕಾರಿ (ತೋಟಗಾರಿಕೆ)
ಹಿನ್ನೀರಿನಿಂದ ಭತ್ತದ ಗದ್ದೆ ಮತ್ತು ತರಕಾರಿ ಬೆಳೆಗಳು ಮುಳುಗಿವೆ. ಪರಿಶೀಲನೆ ಮಾಡಿ ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು
ಎನ್.ಕೆ.ವಿಕಾಸ್ ಸಹಾಯಕ ಅಧಿಕಾರಿ (ಕೃಷಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.