ADVERTISEMENT

ತುಂಗಭದ್ರೆಯಲ್ಲಿ ಇಬ್ಬರು ನೀರುಪಾಲು: ಮರಳು ಅಕ್ರಮಕ್ಕೆ ಬಲಿಯಾದವೇ ಜೀವಗಳು?

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:56 IST
Last Updated 7 ಅಕ್ಟೋಬರ್ 2025, 5:56 IST
ಹೊನ್ನಾಳಿ ಸಮೀಪದ ತುಂಗಭದ್ರಾ ನದಿಯಲ್ಲಿ ತೆಪ್ಪ ಮಗುಚಿ ನೀರುಪಾಲಾದವರಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಹುಡುಕಾಟ ನಡೆಸಿದರು
ಹೊನ್ನಾಳಿ ಸಮೀಪದ ತುಂಗಭದ್ರಾ ನದಿಯಲ್ಲಿ ತೆಪ್ಪ ಮಗುಚಿ ನೀರುಪಾಲಾದವರಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಹುಡುಕಾಟ ನಡೆಸಿದರು   

ಹೊನ್ನಾಳಿ: ಪಟ್ಟಣ ಸಮೀಪದ ತುಂಗಭದ್ರಾ ನದಿಯಲ್ಲಿ ಸೋಮವಾರ ತೆಪ್ಪ ಮಗುಚಿ ಇಬ್ಬರು ನೀರುಪಾಲಾಗಿದ್ದು, ನದಿಯಲ್ಲಿ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆಗೆ ಜೀವಗಳೆರಡು ಬಲಿಯಾದವೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ನೀರುಪಾಲಾಗಿರುವ ತಿಪ್ಪೇಶ್ ( 23) ಮತ್ತು ಮುಕ್ತಿಯಾರ್ (28) ಸೇರಿದಂತೆ ನಾಲ್ವರು ಮರಳು ತೆಗೆದು ನದಿಯಿಂದ ಹೊರಗೆ ಸಾಗಿಸುವಾಗ ತೆಪ್ಪ ಮಗುಚಿದೆ ಎಂಬ ಆರೋಪ ಕೇಳಿಬಂದಿದೆ. ಶಾಹಿಲ್‌ ಹಾಗೂ ಸಿದ್ದು ಈಜಿ ದಡ ಸೇರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ತೆಪ್ಪದಲ್ಲಿ ನದಿಗೆ ಏಕೆ ಇಳಿದಿದ್ದರು ಎಂಬುದಕ್ಕೆ ನಿಖರ ಉತ್ತರ ಸಿಕ್ಕಿಲ್ಲ.

‘ಸೋಮವಾರ ಬೆಳಿಗ್ಗೆ ನಾಲ್ವರು ಎರಡು ತೆಪ್ಪಗಳಲ್ಲಿ ತುಂಗಭದ್ರಾ ನದಿಗೆ ಇಳಿದಿದ್ದರು. ಮರಳು ತುಂಬಿದ ಚೀಲಗಳನ್ನು ತೆಪ್ಪದಲ್ಲಿ ಇಟ್ಟುಕೊಂಡು ದಡಕ್ಕೆ ಸಾಗುತ್ತಿದ್ದರು. ಈ ವೇಳೆ ಸುಳಿಗೆ ಸಿಲುಕಿಯೋ ಅಥವಾ ಆಕಸ್ಮಿಕವಾಗಿ ನೀರು ತುಂಬಿಯೋ ತೆಪ್ಪ ನಿಯಂತ್ರಣ ಕಳೆದುಕೊಂಡಿದೆ. ಮಗುಚಿದ ತೆಪ್ಪದಿಂದ ಕೆಳಗೆ ಬಿದ್ದ ನಾಲ್ವರಲ್ಲಿ ಇಬ್ಬರು ನೀರುಪಾಲಾಗಿದ್ದಾರೆ’ ಎಂದು ಸ್ಥಳೀಯರೊಬ್ಬರು ವಿವರಿಸಿದ್ದಾರೆ.

ADVERTISEMENT

ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ನಿತ್ಯ 30ಕ್ಕೂ ಹೆಚ್ಚು ತೆಪ್ಪಗಳು ನದಿಗೆ ಇಳಿದು ಚೀಲಗಳಲ್ಲಿ ಮರಳು ತುಂಬಿ ನದಿಯಿಂದ ಹೊರಗೆ ತರುತ್ತವೆ. ಈ ಮರಳನ್ನು ಎತ್ತಿನ ಬಂಡಿಗಳಲ್ಲಿ ಸಾಗಣೆ ಮಾಡಲಾಗುತ್ತದೆ ಎಂಬ ದೂರುಗಳಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸರು ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯವೂ ಕೇಳಿಬಂದಿತ್ತು.

ನದಿಯಲ್ಲಿ ಹುಡುಕಾಟ: ಇಬ್ಬರು ನೀರುಪಾಲಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ನದಿಯ ಬಳಿಗೆ ಜಮಾಯಿಸಿದರು. ಮರಳು ತುಂಬಲು ತೆಪ್ಪದಲ್ಲಿ ಬರುತ್ತಿದ್ದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಗ್ನಿಶಾಮಕ ಹಾಗೂ ತುರ್ತುಸೇವಾ ಠಾಣೆಯ ಸಿಬ್ಬಂದಿ ಧಾವಿಸಿ ನೀರುಪಾಲಾದವರಿಗೆ ಹುಡುಕಾಟ ನಡೆಸಿದರು. ಸಂಜೆಯವರೆಗೆ ನದಿಯಲ್ಲಿ ಯಾವುದೇ ವ್ಯಕ್ತಿ, ಮೃತದೇಹ ಪತ್ತೆಯಾಗಲಿಲ್ಲ. ಸಂಜೆ 6 ಗಂಟೆಯ ಬಳಿಕ ಶೋಧಕಾರ್ಯವನ್ನು ಸ್ಥಗಿತಗೊಳಿಸಲಾಯಿತು.

ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರೂ ಅಲ್ಲಲ್ಲಿ ಆಳದ ಕಂದಕಗಳಿವೆ. 20–30 ಅಡಿ ಆಳದ ನದಿಯ ನೀರಿನಲ್ಲಿ ಸುಳಿಯ ಅಲೆಗಳಿವೆ. ಹರಿಹರದ ಮುಳುಗು ತಜ್ಞ ಸಾದಾತ್ ಖಾನ್ ನೇತೃತ್ವದ 7 ಸದಸ್ಯರ ತಂಡ ಸ್ಥಳಕ್ಕೆ ಆಗಮಿಸಿದ್ದು, ನದಿಯಲ್ಲಿ ಹುಟುಕಾಟ ನಡೆಸಿದೆ. ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಸಂಬಂಧಿಕರ ಆಕ್ರಂದನ: ನದಿಯಲ್ಲಿ ತೆಪ್ಪ ಮಗುಚಿ ನೀರುಪಾಲಾದ ವಿಷಯ ತಿಳಿಯುತ್ತಿದ್ದಂತೆ ತಿಪ್ಪೇಶ್ ಹಾಗೂ ಮುಕ್ತಿಯಾರ್ ಸಂಬಂಧಿಕರು ಧಾವಿಸಿದರು. ನದಿಯಲ್ಲಿ ನಡೆಯುತ್ತಿದ್ದ ಶೋಧಕಾರ್ಯವನ್ನು ಆತಂಕದಿಂದಲೇ ವೀಕ್ಷಿಸಿದರು. ಸುಳಿವು ಲಭ್ಯವಾಗದಿರುವುದನ್ನು ಕಂಡು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ತಂದೆ–ತಾಯಿ ಕಳೆದುಕೊಂಡಿರುವ ತಿಪ್ಪೇಶ್, ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ದರು. ಮೂಲತಃ ಕಮಲಾಪುರದ ಯುವಕ ಈಚೆಗೆ ಹೊನ್ನಾಳಿ ಪಟ್ಟಣದ ಸುಣಗಾರ ಬೀದಿಯಲ್ಲಿನ ಚಿಕ್ಕಮ್ಮನ ಮನೆಯಲ್ಲಿ ನೆಲೆ ಕಂಡುಕೊಂಡಿದ್ದರು.

ತೆಪ್ಪದಲ್ಲಿ ಜೊತೆಗೆ ತೆರಳಿದ್ದ ಇಬ್ಬರು ಸ್ನೇಹಿತರು ನೀರುಪಾಲಾಗಿದ್ದನ್ನು ಕಂಡ ಶಾಹಿಲ್ ಆಘಾತಕ್ಕೊಳಗಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡಿದ್ದ ಸಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.