ADVERTISEMENT

ದಾವಣಗೆರೆ | ಟಿ.ವಿ. ಸ್ಟೇಷನ್‌ ಕೆರೆಗೆ ಅಭಿವೃದ್ಧಿ ಭಾಗ್ಯ

ಚಂದ್ರಶೇಖರ ಆರ್‌.
Published 11 ನವೆಂಬರ್ 2023, 6:35 IST
Last Updated 11 ನವೆಂಬರ್ 2023, 6:35 IST
ದಾವಣಗೆರೆಯ ಟಿ.ವಿ. ಸ್ಟೇಷನ್‌ ಕೆರೆ
ದಾವಣಗೆರೆಯ ಟಿ.ವಿ. ಸ್ಟೇಷನ್‌ ಕೆರೆ   

ದಾವಣಗೆರೆ: ನಗರದ ಟಿ.ವಿ. ಸ್ಟೇಷನ್‌ ಕೆರೆ‌ ಸಮಗ್ರ ಅಭಿವೃದ್ಧಿಯಾಗಲಿದೆ. ಕೆರೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗೆ ‌ರೂಪುರೇಷೆ ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಕೆರೆಯ ಸುತ್ತಲಿನ ಜಾಗದಲ್ಲಿ ಕಲ್ಲುಗಳನ್ನು ಅಳವಡಿಸುವುದು, ಬಂಡ್‌ ದುರಸ್ತಿಗೊಳಿಸುವುದು. ಕೆರೆಯ ಸುತ್ತಲಿನ ಪ್ರದೇಶ ಸೌಂದರ್ಯೀಕರಣಗೊಳ್ಳಲಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಅಮೃತ್‌– 2.0 ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಮಹಾನಗರ ಪಾಲಿಕೆಯಿಂದ ಪ್ರಸ್ತಾವ ಕಳುಹಿಸಲಾಗಿದೆ.

ಕಾಮಗಾರಿ ಸಂಬಂಧ ಮಹಾನಗರ ಪಾಲಿಕೆಯ ಅಧಿಕಾರಿಗಳು ಅಮೃತ್‌– 2.0 ಯೋಜನೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದು, ಅನುದಾನ ಬಿಡುಗಡೆಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ADVERTISEMENT

ಅಭಿವೃದ್ಧಿ ಕಾಮಗಾರಿ

ಈ ಹಿಂದೆ ಕೆರೆಯನ್ನು ಧೂಡಾದಿಂದ ಅಭಿವೃದ್ಧಿಪಡಿಸಲಾಗಿದ್ದರೂ ಅನುದಾನದ ಕೊರತೆ, ಕೆಲ ತಾಂತ್ರಿಕ ಕಾರಣದಿಂದ ಕೆರೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಅಂತೆಯೇ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಕೂಗು ಕೇಳಿಬಂದಿತ್ತು.

ಮಹಾನಗರ ಪಾಲಿಕೆ ಕೆರೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದು, ₹ 5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವ ಕಳುಹಿಸಲಾಗಿದೆ.

ಕೆರೆಯ ಸುತ್ತಲಿನ ಜಾಗದಲ್ಲಿ ಕಲ್ಲು ಅಳವಡಿಸಿ, ನೀರಿನ ಸಂಗ್ರಹ ಹೆಚ್ಚಿಸುವುದು, ಬಂಡ್‌ ದುರಸ್ತಿಗೊಳಿಸುವುದು, ಕೆರೆಯ ಇನ್ನೊಂದು ಬದಿಯ ಬಂಡ್‌ ಬಳಿ ಇರುವ ಗುಂಡಿಯ ದುರಸ್ತಿ, ಕೆರೆಯ ವಾಯುವಿಹಾರ ಮಾರ್ಗದ ಸುತ್ತ ಗಿಡ ನೆಡುವುದು, ಕೆರೆಯ ಮಧ್ಯದಲ್ಲಿರುವ ಕಟ್ಟೆಯನ್ನು ತೆರವುಗೊಳಿಸಿ ಸೌಂದರ್ಯೀಕರಣಕ್ಕೆ ಒತ್ತು ನೀಡುವುದು ಕಾಮಗಾರಿಯಲ್ಲಿದೆ. ಇದರಿಂದ ಕೆರೆಯ ಸಮಗ್ರ ಚಿತ್ರಣ ಬದಲಾಗಲಿದೆ.

ದುರಸ್ತಿಗೂ ಒತ್ತು

ಈಚೆಗೆ ಸುರಿದ ಮಳೆಯಿಂದ ಕೆರೆಯ ಬಂಡ್ ಕೊಂಚ ಕುಸಿದಿದೆ. ಪಾಲಿಕೆ ಸದಸ್ಯರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸದ್ಯ 20 ಲೋಡ್ ಮಣ್ಣು ಹಾಕಿ. ಸುತ್ತ ಮರಳಿನ ಚೀಲ ಇಟ್ಟು ದುರಸ್ತಿ ಮಾಡುವಂತೆ ಸೂಚಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಜಿ. ರೇಣುಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ಮುಂದುವರಿಯುವ ನಿರೀಕ್ಷೆ ಇದ್ದು, ದುರಸ್ತಿ ಕಾಮಗಾರಿಗೆ ಟ್ರ್ಯಾಕ್ಟರ್‌ ಬಳಸಿದರೆ ಮತ್ತೆ ಕುಸಿಯುವ ಆತಂಕ ಇದೆ. ತೇವಾಂಶ ಕಡಿಮೆ ಆದ ನಂತರವೇ ಸೋಮವಾರದ ಹೊತ್ತಿಗೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

1,400 ಮಿಲಿಯನ್‌ ಲೀಟರ್‌ ನೀರಿನ ಸಂಗ್ರಹ ಸಾಮರ್ಥ್ಯದ ಟಿ.ವಿ. ಸ್ಟೇಷನ್‌ ಕೆರೆಯ ನೀರನ್ನು ಸದ್ಯ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತಿದೆ.

ನಗರಕ್ಕೆ ಕುಡಿಯುವ ನೀರು ಪೂರೈಸುವ ಟಿ.ವಿ. ಸ್ಟೇಷನ್‌ ಕೆರೆ ಸಂಪೂರ್ಣ ಅಭಿವೃದ್ಧಿಯಾಗಲಿದೆ. ಸೌಂದರ್ಯೀಕರಣಕ್ಕೂ ಒತ್ತು ನೀಡಲಾಗಿದೆ.
ರೇಣುಕಾ, ಮಹಾನಗರ ‍ಪಾಲಿಕೆ ಆಯುಕ್ತೆ
ದಾವಣಗೆರೆಯ ಟಿ.ವಿ. ಸ್ಟೇಷನ್‌ ಕೆರೆಯ ಬಂಡ್‌ ಕುಸಿದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.