ಬಂಧನ
(ಪ್ರಾತಿನಿಧಿಕ ಚಿತ್ರ)
ದಾವಣಗೆರೆ: ನಗರದ ರಂಗನಾಥ ಬಡಾವಣೆಯಲ್ಲಿ ₹ 2,000 ಮೌಲ್ಯದ ಟಿವಿ ಕದ್ದು 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಗ್ರಾಮಾಂತರ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದೇವರಾಜ ಅರಸು ಬಡಾವಣೆಯ ಫಕೀರ (50) ಬಂಧಿತ ಆರೋಪಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಇನ್ನೊಬ್ಬ ಆರೋಪಿ ರಾಜ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ನಗರದ ರಂಗನಾಥ ಬಡಾವಣೆಯ ರುದ್ರಯ್ಯ ಎಂಬುವರ ಮನೆಯಲ್ಲಿ 1998ರ ಸೆ.23ರಂದು ಟಿವಿ ಕಳವಾಗಿತ್ತು. ದೂರು ಆಧರಿಸಿ ಪೊಲೀಸರು ರವಿ ಮತ್ತು ಮುನಾವರ್ ಎಂಬುವರನ್ನು ಬಂಧಿಸಿ ಕಳವಾಗಿದ್ದ ಟಿವಿ ಜಪ್ತಿ ಮಾಡಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಫಕೀರ ಹಾಗೂ ರಾಜ ತಲೆಮರೆಸಿಕೊಂಡಿದ್ದರು.
ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ 2019ರವರೆಗೆ ಪೊಲೀಸರು ಪ್ರಯತ್ನಿಸಿದ್ದರು. ನಂತರ ಇದನ್ನು ಬಹುದಿನಗಳಿಂದ ಪತ್ತೆಯಾದ ಪ್ರಕರಣದ ಪಟ್ಟಿಗೆ ಸೇರಿಸಿದ್ದರು. ನೂತನ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ನಿರ್ದೇಶನದ ಮೇರೆಗೆ ಮರುಪತ್ತೆಗೆ ಮುಂದಾದ ಪೊಲೀಸರಿಗೆ ಆರೋಪಿ ಸೆರೆಸಿಕ್ಕಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.