ಸಾವು
(ಪ್ರಾತಿನಿಧಿಕ ಚಿತ್ರ)
ಜಗಳೂರು (ದಾವಣಗೆರೆ ವರದಿ): ತಾಲ್ಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ಸೋಮವಾರ ಜಮೀನಿನಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕಿಯನ್ನು ರಕ್ಷಿಸಲಾಗಿದೆ.
ಗ್ರಾಮದ ಕೂಲಿ ಕಾರ್ಮಿಕರಾದ ತಿಮ್ಮಪ್ಪ ಅವರ ಪುತ್ರಿ ತನುಜಾ (11), ರಾಮಚಂದ್ರಪ್ಪ ಅವರ ಪುತ್ರಿ ಗಂಗೋತ್ರಿ (11) ಮೃತಪಟ್ಟವರು. ಮತ್ತೊಬ್ಬ ಬಾಲಕಿ ಖುಷಿ ನೀರಲ್ಲಿ ಮುಳುಗುತ್ತಿದ್ದಾಗ ಗ್ರಾಮಸ್ಥರು ರಕ್ಷಿಸಿದ್ದಾರೆ.
ಶಾಲೆಯಿಂದ ಮನೆಗೆ ಮರಳಿದ್ದ ಈ ಬಾಲಕಿಯರು ಸಮೀಪದಲ್ಲೇ ಇದ್ದ ಜಮೀನೊಂದರಲ್ಲಿನ ಕೃಷಿ ಹೊಂಡದಲ್ಲಿ ಆಟವಾಡಲು ತೆರಳಿದ್ದರು. ಕೃಷಿ ಹೊಂಡ ಭರ್ತಿಯಾಗಿತ್ತು. ಕೃಷಿ ಹೊಂಡದ ಮೇಲೆ ಕುಳಿತು ಆಟ ಆಡುತ್ತಿದ್ದಾಗ ಕಾಲು ಜಾರಿ ಮೂವರೂ ನೀರಲ್ಲಿ ಬಿದ್ದಿದ್ದಾರೆ.
ಮಕ್ಕಳು ಕಿರುಚಿದಾಗ ಕೆರೆಯತ್ತ ಧಾವಿಸಿದ ಗ್ರಾಮಸ್ಥರು ಒಬ್ಬಳನ್ನು ಮಾತ್ರ ರಕ್ಷಿಸಿದ್ದಾರೆ. ಅಷ್ಟು ಹೊತ್ತಿಗಾಗಲೇ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿದ್ದರು. ಪಾಲಕರು ಹೊಟ್ಟೆಪಾಡಿಗಾಗಿ ಗುಳೆ ಹೋಗಿದ್ದರಿಂದ ಈ ಬಾಲಕಿಯರು ಸಂಬಂಧಿಕರ ಮನೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.