ADVERTISEMENT

ದಾವಣಗೆರೆ | ಕಂತು ಕಟ್ಟಲಾಗದೆ ದುಃಸ್ಥಿತಿ; ಶೂಲವಾದ ಫೈನಾನ್ಸ್‌ ಕಂಪನಿ ಸಾಲ

ಸಿಬ್ಬಂದಿ ಕಿರುಕುಳಕ್ಕೆ ತತ್ತರಿಸಿದ ಗ್ರಾಮೀಣ ಭಾಗದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 5:55 IST
Last Updated 24 ಜನವರಿ 2025, 5:55 IST
ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮೈಕ್ರೊ ಫೈನಾನ್ಸ್‌ಗಳ ಹಾವಳಿಯಿಂದ ತತ್ತರಿಸಿರುವ ಮಹಿಳೆಯರು, ತಾಲ್ಲೂಕು ಆಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಲು ಆಗ್ರಹಿಸಿದ್ದಾರೆ
ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮೈಕ್ರೊ ಫೈನಾನ್ಸ್‌ಗಳ ಹಾವಳಿಯಿಂದ ತತ್ತರಿಸಿರುವ ಮಹಿಳೆಯರು, ತಾಲ್ಲೂಕು ಆಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಲು ಆಗ್ರಹಿಸಿದ್ದಾರೆ   

ಜಗಳೂರು: ಕೆಲ ತಿಂಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಜಗಳೂರು ಗೊಲ್ಲರಹಟ್ಟಿ ಗ್ರಾಮದ ಫಾತಿಮಾ ಅವರ ಮಕ್ಕಳೀಗ ಅನಾಥರಾಗಿದ್ದಾರೆ. ತೀವ್ರ ಹೊಟ್ಟೆನೋವು ತಾಳದೇ ಅವರು ನೇಣು ಹಾಕಿಕೊಂಡಿದ್ದರು ಎಂದು ಆಗ ಬಿಂಬಿಸಲಾಗಿತ್ತು.

ಆದರೆ, ಫೈನಾನ್ಸ್‌ ಕಂಪನಿಯವರ ಕಿರುಕುಳದಿಂದ ಬೇಸತ್ತು ಅವರು ಸಾವಿಗೀಡಾದರು ಎಂದು ಗ್ರಾಮಸ್ಥರು ತಮ್ಮೊಳಗೇ ಮಾತನಾಡಿಕೊಳ್ಳುತ್ತಿದ್ದಾರೆ.

ಮನೆಯ ನಿರ್ವಹಣೆಗಾಗಿ ಫೈನಾನ್ಸ್‌ ಕಂಪನಿಯಲ್ಲಿ ಸಣ್ಣ ಮೊತ್ತದ ಸಾಲ ಮಾಡಿದ್ದ ಫಾತಿಮಾ ಕುಟುಂಬ ಸಾಲದ ಕಂತು ಕಟ್ಟಲು ಮತ್ತೊಂದು ಫೈನಾನ್ಸ್‌ ಕಂಪನಿಯಲ್ಲಿ ಸಾಲ ಪಡೆದಿತ್ತು. ಹೀಗೆ ಹಲವು ಫೈನಾನ್ಸ್‌ಗಳಲ್ಲಿ ಸಾಲ ತೆಗೆದು, ಅದು ಕೊನೆಗೆ ಬೆಟ್ಟದಂತೆ ಬೆಳೆದು ನಿಂತು, ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗದೆ ಅವರು ಬೇಸತ್ತು ಅವಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡರು ಎಂದೂ ಅವರು ಹೇಳುತ್ತಿದ್ದಾರೆ.

ADVERTISEMENT

ಪಕ್ಕದ ಮರೇನಹಳ್ಳಿ ಗ್ರಾಮದ ಟೀಪೂ ಸಾಬ್ ಕುಟುಂಬದ ಗೋಳು ಮತ್ತೊಂದು ರೀತಿಯದ್ದು. ಹಲವು ಅಗತ್ಯಗಳಿಗೆ ಐದಾರು ಫೈನಾನ್ಸ್‌ಗಳಲ್ಲಿ ತೆಗೆದುಕೊಂಡಿದ್ದ ಸಾಲವನ್ನು ಕುಟುಂಬವು  ತೀರಿಸಿರಲಿಲ್ಲ. ಸಿಬ್ಬಂದಿಯ ಕಿರುಕುಳಕ್ಕೆ ಹೆದರಿ 2 ತಿಂಗಳ ಹಿಂದೆ ಮನೆಗೆ ಬೀಗ ಜಡಿದು ಇಬ್ಬರು ಪುಟ್ಟ ಮಕ್ಕಳೊಂದಿಗೆ ಊರು ತೊರೆದು ಹೋಗಿದೆ.

ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಇಂತಹ ಕಥೆಗಳು ಸಾಮಾನ್ಯವಾಗಿವೆ. ಸ್ಥಳೀಯ ಫೈನಾನ್ಸ್‌ ಕಂಪನಿಗಳಿಂದ ಅಂತರರಾಜ್ಯ ಮಟ್ಟದವರೆಗೆ ಹತ್ತಾರು ಫೈನಾನ್ಸ್‌ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲವೂ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಗುರಿಯಾಗಿಸಿಕೊಂಡಿವೆ. ಸಿಬ್ಬಂದಿಯಿಂದ ಮಹಿಳೆಯರು ವಿವಿಧ ರೀತಿಯ ಕಿರುಕುಳ ಎದುರಿಸುತ್ತಿದ್ದಾರೆ. 

ಸಣ್ಣ ಪುಟ್ಟ ಹಳ್ಳಿಗಳಲ್ಲೂ 9ರಿಂದ 10 ಫೈನಾನ್ಸ್‌ ಕಂಪನಿಗಳು ಪೈಪೋಟಿ ಮೇಲೆ ಮಹಿಳೆಯರಿಗೆ ಸಾಲ ನೀಡುತ್ತಿದ್ದು, ಬಹುತೇಕ ಕುಟುಂಬಗಳ ಮಹಿಳೆಯರು ಸಾಲ ಪಡೆದಿದ್ದಾರೆ.

‘ಬೆಳೆ ಬಂದಾಗ ಸಾಲ ಕಟ್ಟುವುದಾಗಿ ಮನವಿ ಮಾಡಿದರೂ ಫೈನಾನ್ಸ್ ಕಂಪನಿ ಏಜೆಂಟರು ಮನೆ ಮುಂದೆ ಕೂತು ಕಂತು ಕಟ್ಟಲು ಪೀಡಿಸುತ್ತಾರೆ. ನೆರೆಹೊರೆಯವರ ಎದುರು, ಸರಿಕರೆದುರು ಅವಮಾನ ಮಾಡುತ್ತಾರೆ’ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಸಾಲ ಪಡೆದ ರಾಧಮ್ಮ, ಶಾರದಮ್ಮ, ಮುಂತಾದವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡರು.

‘ಚಿಕ್ಕ ಗ್ರಾಮವಾಗಿರುವ ನಮ್ಮ ಊರಿನಲ್ಲಿ 10ಕ್ಕೂ ಹೆಚ್ಚು  ಫೈನಾನ್ಸ್‌ ಕಂಪನಿಗಳು ಬಡ್ಡಿ ವ್ಯವಹಾರ ಮಾಡುತ್ತಿವೆ. ನಮ್ಮ ಅಣ್ಣನ ಮಗಳು ಫೈನಾನ್ಸ್ ಕಂಪನಿಯೊಂದರ ಸಿಬ್ಬಂದಿಯ ಕಿರುಕುಳಕ್ಕೆ ಹೆದರಿ 8 ತಿಂಗಳ ಹಿಂದೆ ಮನೆ ತೊರೆದು ಹೋದವಳು ಇಂದಿಗೂ ಮರಳಿಲ್ಲ. ನಮ್ಮ ಕುಟುಂಬ ಆತಂಕದಿಂದಲೇ ಕಾಲ ತಳ್ಳುತ್ತಿದೆ’ ಎಂದು ಈ ಗ್ರಾಮದ ಆರ್.ವಿ. ವೆಂಕಟೇಶ್ ನೊಂದು ನುಡಿದರು.

ಸಾಲ ಮರುಪಾವತಿಗೆ ಕಾಲಾವಕಾಶ ಕೇಳಿದರೂ ಸ್ಪಂದಿಸುತ್ತಿಲ್ಲ. ಹೋದ ವರ್ಷ ಅನಾವೃಷ್ಟಿಯಿಂದ ಈ ವರ್ಷ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿದೆ. ಜೀವನ ನಿರ್ವಹಿಸುವುದೇ ಕಷ್ಟವಾಗಿದೆ. ಸಾಲ ಕಟ್ಟವುದು ಅಸಾಧ್ಯವಾಗಿದೆ ಎಂದು ಗ್ರಾಮದ ಜನರು ಭಯದಿಂದಲೇ ಹೇಳುತ್ತಾರೆ.

ಶೀಘ್ರವೇ ಸಂತ್ರಸ್ತರೆಲ್ಲ ಒಟ್ಟಾಗಿ ತಹಶೀಲ್ದಾರ್‌ ಕಚೇರಿಗೆ ತೆರಳಿ ಈ ಕುರಿತ ಮನವಿ ಸಲ್ಲಿಸಲೂ ನಿರ್ಧರಿಸಲಾಗಿದೆ ಎಂದು ಕಿರುಕುಳಕ್ಕೆ ಒಳಗಾದವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.