ADVERTISEMENT

ಕಬ್ಬಿಗೆ ಅವೈಜ್ಞಾನಿಕ ದರ: 12ರಂದು ಪ್ರತಿಭಟನೆ

ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 3:50 IST
Last Updated 6 ಆಗಸ್ಟ್ 2022, 3:50 IST
ತೇಜಸ್ವಿ ಪಟೇಲ್
ತೇಜಸ್ವಿ ಪಟೇಲ್   

ದಾವಣಗೆರೆ:ಕೇಂದ್ರ ಸರ್ಕಾರ 10.25 ಸಕ್ಕರೆ ಇಳುವರಿ ಹೊಂದಿರುವ ಪ್ರತಿ ಟನ್ ಕಬ್ಬಿಗೆ ₹ ,3050 ನ್ಯಾಯಯುತ ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಘೋಷಿಸಿರುವುದು ಅವೈಜ್ಞಾನಿಕ ಮತ್ತು ಅನೈತಿಕ. ಇದನ್ನು ಖಂಡಿಸಿ ರಾಜ್ಯದಾದ್ಯಂತ ಆಗಸ್ಟ್‌ 12ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದುರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್‌ ಹೇಳಿದರು.

ದಾವಣಗೆರೆಯಲ್ಲೂ ಆಗಸ್ಟ್‌ 12ರಂದು ಬೆಳಿಗ್ಗೆ 11ಕ್ಕೆ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಲಾಗುವುದು. ಕಳೆದ ಸಾಲಿಗಿಂತ ಎಫ್‌ಆರ್‌ಪಿಯನ್ನು ಕೇವಲ ₹ 150 ಹೆಚ್ಚಿಸಲಾಗಿದೆ. ಆದರೆ ಇದು ಕೇಂದ್ರದ ಕಣ್ಣೊರೆಸುವ ತಂತ್ರ. ಕಟಾವು ಸೇರಿ ಕಬ್ಬಿನ ಉತ್ಪಾದನಾ ವೆಚ್ಚ ಪ್ರತಿ ಟನ್‌ಗೆ ₹ 500 ಗಿಂತಲೂ ಹೆಚ್ಚಾಗಿದೆ. ಆದರೆ ಸರ್ಕಾರ ₹ 150 ಹೆಚ್ಚಿಸಿದೆ. 9.5 ಸಕ್ಕರೆ ಇಳುವರಿ ತರುವ ಪ್ರತಿ ಟನ್ ಕಬ್ಬಿಗೆ ₹ 3,500 ಎಫ್.ಆರ್.ಪಿ. ನಿಗದಿಯಾಗಿದ್ದರೆ ಕಬ್ಬು ಬೆಳೆಗಾರರು ಒಂದಿಷ್ಟು ಲಾಭ ಕಾಣಲು ಸಾಧ್ಯವಾಗುತ್ತಿತ್ತು. ಆದರೆ ಸರ್ಕಾರ10.25 ಸಕ್ಕರೆ ಇಳುವರಿ ಹೊಂದಿರುವ ಪ್ರತಿ ಟನ್ ಕಬ್ಬಿಗೆ ₹ ,3050 ನಿಗದಿ ಮಾಡಿರುವುದರಿಂದ 9.5 ಸಕ್ಕರೆ ಇಳುವರಿಯ ಕಬ್ಬಿಗೆ ₹ 2825 ಸಿಕ್ಕಂತಾಗುತ್ತದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.

ಕಬ್ಬು ಸೇರಿ ಎಲ್ಲ ಕೃಷಿ ಉತ್ಪನ್ನಗಳಿಗೆ ಸರ್ಕಾರ ಜಿ.ಎಸ್.ಟಿ. ವಿಧಿಸುತ್ತಿದೆ. ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಿಸುತ್ತಿದೆ. ಆಹಾರ ಪದಾರ್ಥಗಳಿಗೆ ‌ಎಂಆರ್‌ಪಿ ನಿಗದಿ ಮಾಡುವಾಗ ಗ್ರಾಹಕರನ್ನು ಗಣನೆಗೆ ತೆಗೆದುಕೊಳ್ಳುವ ಸರ್ಕಾರಗಳು ಜಿಎಸ್‌ಟಿ ವಿಧಿಸುವಾಗ ಗ್ರಾಹಕರನ್ನು ಮರೆತಿವೆ. ಎಲ್ಲ ಕ್ಷೇತ್ರಗಳಿಗೂ ಜಿಎಸ್‌ಟಿ ಅನ್ವಯಿಸಿತೆರಿಗೆ ಸಂಗ್ರಹಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ADVERTISEMENT

ಜಿಲ್ಲೆಯಲ್ಲಿ ಹಲವೆಡೆ ಮಳೆಹಾನಿಯಾಗಿದೆ.ಕೇಂದ್ರದ ವಿಪತ್ತು ಪರಿಹಾರ ನಿಧಿಯಡಿ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ಇದೆ. ಆದರೆ ರಾಜ್ಯದ ವಿಪತ್ತು ಪರಿಹಾರ ನಿಧಿಯಡಿ ₹ 95,000 ನೀಡಲಾಗುತ್ತಿದೆ. ಈ ತಾರತಮ್ಯ ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಮುಖಂಡ ಪೂಜಾರ್ಅಂಜಿನಪ್ಪ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಹುಲ್ಲುಮನಿ ಠಾಕೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.