ದಾವಣಗೆರೆ: ‘ದಿನವಿಡೀ ದುಡಿದರೆ ₹400 ಇಲ್ಲವೇ ₹600 ಉಳಿಯುವುದೇ ಹೆಚ್ಚು. ಆಹಾರ ಪದಾರ್ಥಗಳಿಗೆ ವಿಷಕಾರಿ ಬಣ್ಣ ಬಳಸಬಾರದೆಂದು ಸರ್ಕಾರ ಆದೇಶ ಹೊರಡಿಸಿದ ಸುದ್ದಿ ಗೊತ್ತಾದ ದಿನದಿಂದಲೇ ನಾವು ಬಣ್ಣ ಬಳಕೆ ನಿಲ್ಲಿಸಿದ್ದೇವೆ. ಹಾನಿಕಾರಕ ಬಣ್ಣ ಬಳಸಿ ಆಹಾರ ಸುರಕ್ಷತಾಧಿಕಾರಿಗಳ ಕೈಗೆ ಸಿಕ್ಕಿ ಬಿದ್ದರೆ ದಂಡದ ರೂಪದಲ್ಲಿ ದುಡಿದ ದುಡ್ಡನ್ನೆಲ್ಲಾ ಅವರಿಗೇ ಕೊಟ್ಟು ಬರಿಗೈಲಿ ಮನೆಗೆ ಹೋಗಬೇಕು. ₹ 100ರ ಆಸೆಗೆ ಬಿದ್ದು ₹ 1,000 ಕಳೆದುಕೊಳ್ಳುವುದೇಕೆ? ಆ ಕಾರಣಕ್ಕೆ ಬಣ್ಣದ ಬಳಕೆಯ ಗೊಡವೆಗೇ ಹೋಗುತ್ತಿಲ್ಲ...’
ದಾವಣಗೆರೆಯ ಎಂಸಿಸಿ ‘ಎ’ ಬ್ಲಾಕ್‌ನ ತಳ್ಳು ಗಾಡಿ ಮೂಲಕ ಗೋಬಿ, ಪಾನಿ ಪೂರಿ ವ್ಯಾಪಾರ ಮಾಡುವ ಪ್ರವೀಣ್ ಮಾತಿದು.
ಮಾತು ಮುಂದುವರಿಸಿದ ಅವರು, ‘ಸರ್ಕಾರವು ಕೃತಕ ಬಣ್ಣದ ಬಳಕೆಗಷ್ಟೇ ನಿರ್ಬಂಧ ಹೇರಿತ್ತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಗೋಬಿ ಮಂಚೂರಿ, ಪಾನಿ ಪೂರಿ, ನೂಡಲ್ಸ್ ಮಾರಾಟವನ್ನೇ ನಿಷೇಧಿಸಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಇದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಅದೆಷ್ಟೋ ಮಂದಿ ನಷ್ಟ ಅನುಭವಿಸಿದರು. ಕೆಲವೊಬ್ಬರು ಈ ವ್ಯಾಪಾರವನ್ನೇ ತ್ಯಜಿಸಿಬಿಟ್ಟರು. ಆರಂಭದ ದಿನಗಳಲ್ಲಿ ಗ್ರಾಹಕರು ಅಂಗಡಿಗಳತ್ತ ಸುಳಿಯುತ್ತಲೇ ಇರಲಿಲ್ಲ. ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಮೊದಲೆಲ್ಲಾ ದಿನಕ್ಕೆ ₹ 3,000ದವರೆಗೂ ವ್ಯಾಪಾರ ಮಾಡುತ್ತಿದ್ದೆವು. ಈಗ ₹ 1,500 ವ್ಯಾಪಾರ ಆದರೇ ಹೆಚ್ಚು’ ಎಂದು ಬೇಸರಿಸಿದರು.
‘ಗೋಬಿ, ನೂಡಲ್ಸ್ ತಯಾರಿಕೆಗೆ ಬಳಸುತ್ತಿದ್ದ ಬಣ್ಣದಲ್ಲಿ ಉಪ್ಪಿನಾಂಶ ಇರುತ್ತಿತ್ತು. ಅದು ತಿನಿಸಿನ ರುಚಿಯನ್ನೂ ಹೆಚ್ಚಿಸುತ್ತಿತ್ತು. ಬಣ್ಣ ಇಲ್ಲದೆ ತಯಾರಿಸಿದ ತಿನಿಸುಗಳು ಆರಂಭದಲ್ಲಿ ಗ್ರಾಹಕರಿಗೆ ರುಚಿಸುತ್ತಿರಲಿಲ್ಲ. ಈಗ ಅವರೂ ಇದಕ್ಕೆ ಒಗ್ಗಿಕೊಂಡಿದ್ದಾರೆ. ಮೊದಲೆಲ್ಲಾ ನಾವು ಎಗ್ ಫ್ರೈಡ್ ರೈಸ್‌ಗೆ ಸೋಯಾ ಸಾಸ್ ಮತ್ತು ವಿನೇಗರ್ ಬಳಸುತ್ತಿದ್ದೆವು. ದಂಡದ ಭಯದಿಂದ ಈಗ ಅದನ್ನೂ ಬಿಟ್ಟಿದ್ದೇವೆ’ ಎಂದರು.
ಲಾಭದ ಆಸೆಗೆ ಬಿದ್ದು, ಕಡಿಮೆ ಬೆಲೆಗೆ ಸಿಗುತ್ತಿದ್ದ ಕೃತಕ ಬಣ್ಣಗಳನ್ನು ಬಳಸಿ ಆಹಾರ ಪದಾರ್ಥ ತಯಾರಿಸುತ್ತಿದ್ದ ವ್ಯಾಪಾರಿಗಳ ಪೈಕಿ ಬಹುತೇಕರು ಸರ್ಕಾರದ ದಂಡಾಸ್ತ್ರಕ್ಕೆ ಬೆದರಿ ಅವುಗಳ ಬಳಕೆಯನ್ನು ನಿಧಾನವಾಗಿ ನಿಲ್ಲಿಸುತ್ತಿರುವುದಕ್ಕೆ ಪ್ರವೀಣ್ ಅವರ ಮಾತುಗಳು ನಿದರ್ಶನದಂತಿವೆ. ಸಂಜೆಯಾಗುತ್ತಲೇ ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊಡ್ಡ ಬಾಣಲೆಗಳಲ್ಲಿ ಹುರಿಯಲಾಗುತ್ತಿದ್ದ ಕೆಂಪು ಗೋಬಿಗಳು, ಗಾಢ ಬಣ್ಣದಿಂದಾಗಿ ಆಹಾರ ಪ್ರಿಯರ ಕಣ್ಮನ ಸೆಳೆಯುತ್ತಿದ್ದ ಮೀನು ಹಾಗೂ ಚಿಕನ್ ಕಬಾಬ್‌ಗಳು ನಿಧಾನವಾಗಿ ಮರೆಯಾಗುತ್ತಿವೆ. ಗ್ರಾಹಕರ ಹಸಿವು ಹಾಗೂ ನಾಲಿಗೆಯ ರುಚಿ ತಣಿಸಲು ವ್ಯಾಪಾರಿಗಳು ಬಣ್ಣಮುಕ್ತ ತಿನಿಸುಗಳ ತಯಾರಿಕೆಯತ್ತ ಮುಖಮಾಡುತ್ತಿದ್ದಾರೆ.
ರಾಜ್ಯದಾದ್ಯಂತ ಬೀದಿ ಬದಿ ಹಾಗೂ ಹೋಟೆಲ್‌ಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ, ನೂಡಲ್ಸ್, ಪಾನಿ ಪೂರಿ, ಚಿಕನ್ ಕಬಾಬ್, ಮೀನಿನ ಖಾದ್ಯ ಹಾಗೂ ಇತರೆ ತಿನಿಸುಗಳಲ್ಲಿ ಕೃತಕ ಬಣ್ಣ ಬಳಸುತ್ತಿದ್ದುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿತ್ತು. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದನ್ನು ಮನಗಂಡ ರಾಜ್ಯ ಸರ್ಕಾರ ಈ ವರ್ಷದ ಮಾರ್ಚ್‌ನಲ್ಲಿ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ) ಮತ್ತು ಗೋಬಿ ಮಂಚೂರಿ, ಜೂನ್‌ನಲ್ಲಿ ಕಬಾಬ್ ತಯಾರಿಕೆಯಲ್ಲಿ ಇವುಗಳ ಬಳಕೆಗೆ ನಿರ್ಬಂಧ ಹೇರಿತ್ತು.
ಆಹಾರ ಇಲಾಖೆಯ ಅಧಿಕಾರಿಗಳು ರಸ್ತೆ ಬದಿಯ ತಳ್ಳು ಗಾಡಿಗಳು ಹಾಗೂ ಹೋಟೆಲ್‌ಗಳಲ್ಲಿ ತಯಾರಾಗುತ್ತಿದ್ದ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಕೆಲವು ಮಾದರಿಗಳಲ್ಲಿ ರೋಡಮೈನ್ ಬಿ, ಸನ್‌ಸೆಟ್ ಯೆಲ್ಲೋ, ಟೆಟ್ರಾಜಿನ್ ಹಾಗೂ ಕಾರ್ಮೋಸಿನ್ ಎಂಬ ರಾಸಾಯನಿಕಗಳು ಪತ್ತೆಯಾಗಿದ್ದವು. ಪ್ಲಾಸ್ಟಿಕ್ ಉದ್ಯಮ ಹಾಗೂ ಸಿಂಥೆಟಿಕ್ ಬಣ್ಣಗಳಲ್ಲಿ ಬಳಕೆಯಾಗುವ ಇವು ಸದ್ದಿಲ್ಲದೆ ಮನುಷ್ಯರ ದೇಹ ಪ್ರವೇಶಿಸುತ್ತಿದ್ದವು. ಹೀಗೆ ಜನರಿಗರಿವಿಲ್ಲದಂತೆ ಅವರ ದೇಹ ಹೊಕ್ಕು ಚರ್ಮದಲ್ಲಿ ತುರಿಕೆ, ಕಣ್ಣಿನ ಸಮಸ್ಯೆ, ಶ್ವಾಸಕೋಶದ ಸೋಂಕಿನಂತಹ ಆರೋಗ್ಯ ಸಮಸ್ಯೆ ತಂದೊಡ್ಡುತ್ತಿದ್ದವು. ಇವುಗಳ ದೀರ್ಘಕಾಲದ ಬಳಕೆಯಿಂದ ಮಕ್ಕಳಲ್ಲಿ ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳುವ ಅಪಾಯ ಎದುರಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಆರೋಗ್ಯ ಇಲಾಖೆ ಇವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು. ಈ ಕುರಿತು ವ್ಯಾಪಾರಿಗಳಲ್ಲಿ ಅರಿವು ಮೂಡಿಸುವ ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿತ್ತು. ಆರಂಭದಲ್ಲಿ ಅಧಿಕಾರಿಗಳಿಗೆ ಇದು ದೊಡ್ಡ ಸವಾಲಾಗಿಯೂ ಪರಿಣಮಿಸಿತ್ತು.
‘ಸರ್ಕಾರದ ಆದೇಶದನ್ವಯ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಗೂ ತೆರಳಿ ಜಾಗೃತಿ ಮೂಡಿಸುತ್ತಿದ್ದೇವೆ. ಕೃತಕ ಬಣ್ಣಗಳ ಬಳಕೆಯಿಂದ ಗರ್ಭಿಣಿಯರು ಹಾಗೂ ಮಕ್ಕಳ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ವ್ಯಾಪಾರಿಗಳಿಗೆ ತಿಳಿ ಹೇಳುತ್ತಿದ್ದೇವೆ. ದಾಳಿ ಮಾಡಿ ದಂಡ ಹಾಕುವುದು ಸುಲಭ. ದಂಡಕ್ಕೆ ಹೆದರಿ ಕೆಲ ದಿನ ಅವರು ಬಣ್ಣ ಬಳಸದೆ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಬಳಿಕ ಮತ್ತೆ ಲಾಭದ ಆಸೆಗೆ ಬಿದ್ದು ಹಳೆಯ ಚಾಳಿ ಮುಂದುವರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜಾಗೃತಿಗೆ ಹೆಚ್ಚು ಒತ್ತು ನೀಡಿದ್ದೇವೆ. ಈಗ ಆಹಾರ ಪದಾರ್ಥಗಳಿಗೆ ರಾಸಾಯನಿಕ ಬೆರೆಸುವ ಪ್ರಕರಣಗಳು ಸಾಕಷ್ಟು ತಗ್ಗಿವೆ’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜಾಗೃತಿ ಹಾಗೂ ದಂಡದ ನಡುವೆಯೂ ಕೆಲವರು ಇನ್ನೂ ಕೃತಕ ಬಣ್ಣ ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುವುದು ಮುಂದುವರಿದಿದೆ. ಗ್ರಾಮೀಣ ಭಾಗಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿದೆ. ಜುಲೈನಲ್ಲಿ ಜಿಲ್ಲೆಯಲ್ಲಿ ಕಬಾಬ್‌ನ 7 ಹಾಗೂ ಗೋಬಿ ಮಂಚೂರಿಯ 9 ಮಾದರಿಗಳನ್ನು ಸಂಗ್ರಹಿಸಿ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ ಗೋಬಿ ಮಂಚೂರಿಯ ಒಂದು ಮಾದರಿಯಲ್ಲಿ ಕೃತಕ ಬಣ್ಣ ಪತ್ತೆಯಾಗಿರುವುದು ಇದಕ್ಕೆ ಸಾಕ್ಷಿಯಂತಿದೆ.
ಸರ್ಕಾರದ ಆದೇಶವು ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಣ ಮಾಡಲು ರಹದಾರಿ ಮಾಡಿಕೊಟ್ಟಿದೆ. ದಾಳಿಯ ನೆಪದಲ್ಲಿ ಅಧಿಕಾರಿಗಳು ವಸೂಲಿಗೆ ಇಳಿದಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ. ಇದನ್ನು ಅಲ್ಲಗಳೆದ ಡಾ.ನಾಗರಾಜ್ ದೂರು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದರು.
–ಪೂರಕ ಮಾಹಿತಿ: ಇನಾಯತ್ ಉಲ್ಲಾ ಟಿ. (ಹರಿಹರ), ಎನ್.ಕೆ.ಆಂಜನೇಯ (ಹೊನ್ನಾಳಿ), ಎಚ್.ವಿ.ನಟರಾಜ್ (ಚನ್ನಗಿರಿ). ಸರ್ಕಾರದ ಆದೇಶವಿದ್ದರೂ ಕೆಲವೆಡೆ ಅದರ ಕಟ್ಟುನಿಟ್ಟಿನ ಪಾಲನೆಯಾಗುತ್ತಿಲ್ಲ. ಇದರಿಂದ ಆಹಾರ ಪ್ರಿಯರು ಆರೋಗ್ಯ ಸಮಸ್ಯೆಗೆ ಗುರಿಯಾಗುವಂತಾಗಿದೆ. ಆಂಜನೇಯ ಹರಿಹರ ನಿವಾಸಿ
ಸರ್ಕಾರದ ಆದೇಶವಿದ್ದರೂ ಕೆಲವೆಡೆ ಅದರ ಕಟ್ಟುನಿಟ್ಟಿನ ಪಾಲನೆಯಾಗುತ್ತಿಲ್ಲ. ಇದರಿಂದ ಆಹಾರ ಪ್ರಿಯರು ಆರೋಗ್ಯ ಸಮಸ್ಯೆಗೆ ಗುರಿಯಾಗುವಂತಾಗಿದೆ.ಆಂಜನೇಯ ಹರಿಹರ ನಿವಾಸಿ
ಸರ್ಕಾರದ ಆದೇಶ ಹೊರಬಿದ್ದ ದಿನದಿಂದಲೇ ಕೃತಕ ಬಣ್ಣ ಬಳಸುವುದನ್ನು ನಿಲ್ಲಿಸಿದ್ದೇವೆ.ರಮೇಶ್ ಗೋಬಿ ಮಂಚೂರಿ ವ್ಯಾಪಾರಿ ಹರಿಹರ
ಈಗ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. 16 ತಳ್ಳುಗಾಡಿಗಳ ಮೇಲೆ ದಾಳಿ ಮಾಡಿದ್ದೇವೆ. ಈ ಪೈಕಿ ಕಾನೂನು ಉಲ್ಲಂಘನೆಯ ಒಂದೂ ಪ್ರಕರಣ ಪತ್ತೆಯಾಗಿಲ್ಲ.ಪರಮೇಶ್ ನಾಯ್ಕ ಆರೋಗ್ಯ ನಿರೀಕ್ಷಕ ಹೊನ್ನಾಳಿ
ಜಾಗೃತಿಯ ಫಲವಾಗಿ ಪಟ್ಟಣದ ವ್ಯಾಪಾರಿಗಳ ಮನೋಧೋರಣೆ ಬದಲಾಗಿದೆ. ನಾವು ನಿರಂತರವಾಗಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದೇವೆ.ಶಿವರುದ್ರಪ್ಪ ಚನ್ನಗಿರಿ ಪುರಸಭೆ ಆರೋಗ್ಯ ನಿರೀಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.