ADVERTISEMENT

ಸಾಹಿತ್ಯವನ್ನು ಅರಮನೆಯಿಂದ ಜನಮನಕ್ಕೆ ತಲುಪಿಸಿದ ವಚನಕಾರರು: ಡಾ. ಎಚ್. ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 4:41 IST
Last Updated 28 ನವೆಂಬರ್ 2021, 4:41 IST
ದಾವಣಗೆರೆ ಎಂಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯನ್ನು ಜಿ.ಆರ್. ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ನಿರ್ದೇಶಕ ಡಾ. ಎಚ್. ವಿಶ್ವನಾಥ್ ಉದ್ಘಾಟಸಿದರು
ದಾವಣಗೆರೆ ಎಂಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯನ್ನು ಜಿ.ಆರ್. ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ನಿರ್ದೇಶಕ ಡಾ. ಎಚ್. ವಿಶ್ವನಾಥ್ ಉದ್ಘಾಟಸಿದರು   

ದಾವಣಗೆರೆ: ರಾಜಾಶ್ರಯದಲ್ಲಿ ಬಂಧಿಯಾಗಿದ್ದ ಕನ್ನಡ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಜಿ.ಆರ್. ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ನಿರ್ದೇಶಕ ಡಾ. ಎಚ್. ವಿಶ್ವನಾಥ್ ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಜಿಲ್ಲಾ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ,
ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಆಯೋಜಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯನ್ನು ಉದ್ಘಾಟಸಿ ಅವರು ಮಾತನಾಡಿದರು.

ಜನಮಾನಸದ ತಲ್ಲಣಗಳು, ಅಸ್ಮಿತೆಗಳನ್ನು ಅರಿಯಬೇಕಾದರೆ ವ್ಯಕ್ತಿಯ ಹೃದಯದ ಭಾಷೆಯಿಂದ ಮಾತ್ರ ಸಾಧ್ಯ. 12ನೇ ಶತಮಾನದ ವಚನಕಾರರು ಕನ್ನಡ ಭಾಷೆಯನ್ನು ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ, ಹತ್ತಿರವಾಗುವಂತೆ ವಚನಗಳ ಮೂಲಕ ತಿಳಿಸಿದರು. ಇದರಿಂದ ಜನರು ಮೌಢ್ಯಗಳ ಬಂಧನದಿಂದ ಆಗ ಹೊರಬರುವಂತಾಗಿತ್ತು. ಇದೀಗ ಕನ್ನಡದಲ್ಲಿ ವಿಜ್ಞಾನ ಉಪನ್ಯಾಸ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ವಿಜ್ಞಾನ ಪರಿಷತ್ತು ವಚನಕಾರರ ತಳಹದಿಯನ್ನು ಮುಂದುವರಿಸಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

ವಿಜ್ಞಾನ ಪರಿಷತ್ತಿನ ಗೌರವಾಧ್ಯಕ್ಷ ಡಾ. ಜೆ.ಬಿ. ರಾಜ್‌ ಮಾತನಾಡಿ, ‘ವಿಜ್ಞಾನ ನಾಲ್ಕು ಗೋಡೆಗಳ ನಡುವೆ ಮಾಡುವ ಪಾಠಕ್ಕೆ ಸೀಮಿತವಾಗಬಾರದು. ತರಗತಿಯ ಹೊರಗೆ ಪರಿಸರದಲ್ಲಿ ವಿನ್ಯಾಸಗಳನ್ನು ಸೃಷ್ಟಿಸಿಕೊಂಡು ಅಧ್ಯಯನ ಮಾಡುವ ಅಗತ್ಯ ಇದೆ. ಅದಕ್ಕೆ ಬೇಕಾದ ಕೌಶಲಗಳನ್ನು ಬೋಧಕರು ಹೊಂದಬೇಕು’ ಎಂದು ತಿಳಿಸಿದರು.

ಜಿಲ್ಲಾ ಸಮಿತಿ ಉಪಾಧ್ಯಕ್ಷ ಎನ್‌.ಎಂ. ಲೋಕೇಶ್‌, ‘ಆಂಗ್ಲ ಮಾಧ್ಯಮದಲ್ಲಿ ಮಾತ್ರ ವಿಜ್ಞಾನ ಬೋಧಿಸಲು ಸಾಧ್ಯ ಎಂಬ ತಪ್ಪು ಕಲ್ಪನೆ ಹೋಗಬೇಕು. ಅದಕ್ಕಾಗಿ ವಿಜ್ಞಾನ ಪರಿಷತ್ತು ಇಂಥ ಸ್ಪರ್ಧೆಗಳನ್ನು ಆಯೋಜಿಸಿದೆ’ ಎಂದು ಹೇಳಿದರು.

ಎಂಇಎಸ್‌ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಪ್ರದೀಪ್‌, ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ, ಉಪನ್ಯಾಸ ಸ್ಪರ್ಧೆಯ ಸಂಚಾಲಕ ಅಂಗಡಿ ಸಂಗಪ್ಪ ಉಪಸ್ಥಿತರಿದ್ದರು. ಎಂಇಎಸ್‌ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಆರ್‌.ಎಸ್‌. ಸುರೇಶ್‌ ಅಧ್ಯಕ್ಷತೆ ವಹಿಸಿದ್ದರು. ಸುಷ್ಮಾ ಸಂಗಡಿಗಳು ಪ್ರಾರ್ಥನೆ ಹಾಡಿದರು. ಮೇಘನಾ, ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು. ಕೆ. ಸಿದ್ದೇಶ್‌ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.