ಸಂತೇಬೆನ್ನೂರು: ‘ವಿದ್ಯಾರ್ಥಿಗಳು ಬಾಹ್ಯ ಆಡಂಬರ ತೊರೆದು ಮೌಲ್ಯಗಳನ್ನು ನೆಲೆಗೊಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸಬೇಕು’ ಎಂದು ಶಿಕ್ಷಕ ಎಂ.ಬಿ.ಪ್ರಭಾಕರ್ ಹೇಳಿದರು.
ಇಲ್ಲಿನ ಎಸ್ಎಸ್‌ಜೆವಿಪಿ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ವಿಭಾಗದಲ್ಲಿ ಕಲಾ ಸಂಸ್ಕೃತಿ ಪರಿಷತ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
‘ಶಿಕ್ಷಣದ ಮೂಲಕ ವಿಶಾಲ ಮನೋಭಾವ, ಪ್ರಬುದ್ಧತೆ, ಸಾಮಾಜಿಕ ಕಳಕಳಿ, ಸೇವಾ ಮನೋಭಾವ ವೃದ್ಧಿಸುತ್ತವೆ. ಉತ್ತಮ ಭವಿಷ್ಯದ ಕನಸು ಕಾಣಬೇಕು. ನನಸಾಗಿಸಲು ಸತತ ಪ್ರಯತ್ನ ಇರಬೇಕು. ಚಂಚಲತೆ ಸೃಷ್ಟಿಸುವ ಆಧುನಿಕ ಬದುಕಿನ ಸಂಕೀರ್ಣತೆಯಿಂದ ವಿಚಲಿತರಾಗದೇ ಗುರಿಯತ್ತ ಹೆಜ್ಜೆ ಇಡಬೇಕು. ಕುಟುಂಬದ ಜವಾಬ್ದಾರಿಗಳ ಬಗ್ಗೆ ಪೋಷಕರು ಮಕ್ಕಳಿಗೆ ಪರೋಕ್ಷವಾಗಿ ಅರಿವು ಮೂಡಿಸಬೇಕು’ ಎಂದು ಹೇಳಿದರು.
‘ಯುವ ಸಮೂಹ ತಮ್ಮಲಿರುವ ಪ್ರತಿಭೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಅನಾವರಣಗೊಳ್ಳಲು ವೇದಿಕೆ ಸೃಷ್ಟಿಸಿಕೊಳ್ಳಬೇಕು. ಕಾಲಹರಣ ಮಾಡದೇ ಸಮಯದ ಮಹತ್ವ ತಿಳಿಯಬೇಕು. ಬದುಕಿನ ಯಶಸ್ಸಿಗೆ ಸಹಕರಿಸಿದವರ ಸ್ಮರಣೆ ಇರಲಿ’ ಎಂದು ಕಲಾ, ಸಂಸ್ಕೃತಿ ಪರಿಷತ್ ಅಧ್ಯಕ್ಷ ಚಿರತೆ ನಾಗರಾಜ್ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಕೃಷ್ಣಮೂರ್ತಿ, ಸಿಡಿಸಿ ಉಪಾಧ್ಯಕ್ಷ ಸ್ವಾಮಿ ಗೌಡ, ಪ್ರಾಂಶುಪಾಲರಾದ ಶಾರದಾ, ಉಪನ್ಯಾಸಕ ರಂಗಪ್ಪ, ಮಧು, ಹಾಲಪ್ಪ, ರೇವಣಸಿದ್ಧಪ್ಪ, ಸ್ವಾಮಿ, ತಾಜುದ್ದೀನ್, ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.