ADVERTISEMENT

ದಾವಣಗೆರೆ: ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಸರಳ ಆಚರಣೆ

ಕೊರೊನಾ ಹಿನ್ನೆಲೆ: ಸೀಮಿತ ಮಂದಿಗಷ್ಟೇ ಉಡಿತುಂಬುವ ಕಾರ್ಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 12:16 IST
Last Updated 31 ಜುಲೈ 2020, 12:16 IST
ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿ ಕುಟುಂಬದ ಸದಸ್ಯರ ಜೊತೆ  ಮಹಿಳೆಯರು ಪೂಜೆ ಸಲ್ಲಿಸಿದರು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿ ಕುಟುಂಬದ ಸದಸ್ಯರ ಜೊತೆ  ಮಹಿಳೆಯರು ಪೂಜೆ ಸಲ್ಲಿಸಿದರು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೊರೊನಾ ನಡುವೆಯೂ ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಸರಳ, ಸಂಭ್ರಮದಿಂದ ನಡೆಯಿತು. ಮನೆಮನೆಗಳಲ್ಲಿ ಹಬ್ಬದ ಸಡಗರ ನೆಲೆಸಿತ್ತು. ಮುತ್ತೈದೆಯರು ಕೊರೊನಾ ಪರಿಣಾಮ ಸರಳತೆಯ ಆಚರಣೆಗೆ ಮೊರೆಹೋಗಿದ್ದರು.

ಪ್ರತಿ ವರ್ಷವೂ ಅಕ್ಕಪಕ್ಕದ ಮನೆಯವರು, ಸ್ನೇಹಿತರು ಹಾಗೂ ಸಂಬಂಧಿಕರನ್ನು ಕರೆದು ಮಹಿಳೆಯರು ಸಡಗರ, ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮನೆಗಷ್ಟೇ ಸೀಮಿತಗೊಂಡಿತು. ನೆರೆಹೊರೆಯ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಉಡಿ ತುಂಬುವುದು ಸಂಪ್ರದಾಯ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮನೆಗೆ ಕರೆಯಲು ಹಿಂಜರಿಯುವಂತಾಯಿತು.

ಹಬ್ಬದ ಹಿಂದಿನ ದಿನವೇ ಬಾಳೆಗೊನೆ, ಮಾವಿನ ಎಲೆಗಳನ್ನು ಖರೀದಿ ಜೋರಾಗಿ ನಡೆದಿತ್ತು. ಶುಕ್ರವಾರ ಮುಂಜಾನೆಯೇ ಪೂಜೆಗೆ ಮಂಟಪವನ್ನು ಸಿದ್ಧಪಡಿಸಿ ತೋರಣಗಳಿಂದ ಶೃಂಗರಿಸಿದ್ದರು. ತಾಮ್ರ ಇಲ್ಲವೇ ಇತ್ತಾಳೆ ಬಿಂದಿಗೆಗೆ ನೀರು ಹಾಕಿ ಮಂತ್ರಾಕ್ಷತೆಗಳು, ದಕ್ಷಿಣೆ, ಅರಿಶಿನ, ಕುಂಕುಮ, ಗೋಮೂತ್ರಗಳನ್ನು ಹಾಕಿ ಕಳಸ ಪ್ರತಿಷ್ಠಾಪನೆ ಮಾಡಿದ್ದರು.

ADVERTISEMENT

ಆ ಕಳಸಕ್ಕೆ ಸೀರೆ, ಕುಪ್ಪಸ ತೊಡಿಸಿ ಲಕ್ಷ್ಮಿಯ ಮುಖವಾಡ ಹಾಕಿ ಕುಂಕುಮ ಇಟ್ಟು, ಮೂಗುತಿ, ಆಭರಣ ಹಾಗೂ ಬಳೆಯನ್ನು ಧರಿಸಿ ಶೃಂಗರಿಸಲಾಗಿತ್ತು. ಸಾಂಕೇತಿಕವಾಗಿ ಐದು ಮುತ್ತೈದೆಯರಿಗೆ ಬಾಗಿನ ನೀಡಿ ಉಡಿ ತುಂಬಿಸಲಾಯಿತು. ಕುಂಕುಮ, ಹೂವು, ಧಾನ್ಯ ಹಣ್ಣು, ಬಾದಾಮಿ, ದ್ರಾಕ್ಷಿ, ಖರ್ಜೂರಗಳನ್ನು ಇಟ್ಟು ಆರೋಗ್ಯ, ಸಂಪತ್ತು, ವೃದ್ಧಿಗಾಗಿ ಪ್ರಾರ್ಥಿಸಲಾಯಿತು.

‘ಪ್ರತಿ ವರ್ಷ ಶಾಮಿಯಾನ ಹಾಕಿಸಿ ಹೆಚ್ಚಿನ ಜನರನ್ನು ಸೇರಿಸಿ ಆಚರಿಸುತ್ತಿದ್ದೆವು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಗಳು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಪೂಜೆ ಮಾಡಿದೆವು’ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಎಚ್.ಎನ್. ಶೃತಿ ತಿಳಿಸಿದರು.

‘ಈ ವರ್ಷ ಆಡಂಬರಕ್ಕೆ ಕೊರೊನಾ ತಡೆಯೊಡ್ಡಿದೆ. ಮನೆಗಳಲ್ಲಿ ಸಂಭ್ರಮವಿದೆ. ಕೆಲವರನ್ನಷ್ಟೇ ಆಹ್ವಾನಿಸುತ್ತಾರೆ ಎನ್ನುತ್ತಾರೆ’ ಬಾಗಿನ ಸ್ವೀಕರಿಸಿದ ಗೃಹಿಣಿ ಸೌಮ್ಯ.

ನಗರ ದೇವತೆ ದುರ್ಗಾಂಬಿಕಾ, ನಿಟುವಳ್ಳಿಯ ಗ್ರಾಮ ದೇವತೆ ದುರ್ಗಾಂಬಿಕಾ, ಶಾರದಾದೇವಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.