ADVERTISEMENT

ವಿನೋಬನಗರದ ವೀರ ವರಸಿದ್ಧಿ ವಿನಾಯಕಸ್ವಾಮಿ ಭವ್ಯ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 19:45 IST
Last Updated 10 ಸೆಪ್ಟೆಂಬರ್ 2019, 19:45 IST
ದಾವಣಗೆರೆ ವಿನೋಬನಗರದ ಗಣೇಶನ ಮೂರ್ತಿ ವಿಸರ್ಜನೆಯ ಪ್ರಯುಕ್ತ ಮಂಗಳವಾರ ನಡೆದ ಶೋಭಾಯಾತ್ರೆ ಸಂದರ್ಭ ವಿನೋಬನಗರ ಮಸೀದಿ ಮುಂದೆ ಮಾನವಗೋಪುರ ನಿರ್ಮಿಸಿದ ಯುವಕರು ಕೇಸರಿ ಬಾವುಟ ತಿರುಗಿಸಿದರು.
ದಾವಣಗೆರೆ ವಿನೋಬನಗರದ ಗಣೇಶನ ಮೂರ್ತಿ ವಿಸರ್ಜನೆಯ ಪ್ರಯುಕ್ತ ಮಂಗಳವಾರ ನಡೆದ ಶೋಭಾಯಾತ್ರೆ ಸಂದರ್ಭ ವಿನೋಬನಗರ ಮಸೀದಿ ಮುಂದೆ ಮಾನವಗೋಪುರ ನಿರ್ಮಿಸಿದ ಯುವಕರು ಕೇಸರಿ ಬಾವುಟ ತಿರುಗಿಸಿದರು.   

ದಾವಣಗೆರೆ: ಡೊಳ್ಳು, ನಾಸಿಕ್‌ ಬ್ಯಾಂಡ್‌, ತಮಟೆಗಳ ಸದ್ದು, ಡಿಜೆ ಹಾಡಿಗೆ ಕುಣಿತ, ವೀರಗಾಸೆಯ ಅಬ್ಬರ, ಆನೆಯ ಗಾಂಭೀರ್ಯ ನಡಿಗೆ, ಪೊಲೀಸರ ಬಿಗಿ ಬಂದೋಬಸ್ತು ನಡುವೆ ವಿನೋಬನಗರದ ವೀರ ವರಸಿದ್ಧಿ ವಿನಾಯಕ ಸ್ವಾಮಿಯ ಭವ್ಯ ಶೋಭಾಯಾತ್ರೆ ಮಂಗಳವಾರ ಅದ್ದೂರಿಯಾಗಿ ನಡೆಯಿತು.

ಮಾಜಿ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಎ.ನಾಗರಾಜ್, ಶಿವನಳ್ಳಿ ರಮೇಶ್‌, ಗುರುನಾಥ ಬಾಬು ಅವರೂ ಸಾಥ್‌ ನೀಡಿದರು.

ಇಲ್ಲಿನ 2ನೇ ಮುಖ್ಯರಸ್ತೆಯ ತುಂಬೆಲ್ಲ ಜನಸಂದಣಿ ನೆರೆದಿತ್ತು. ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಂತು ಜನ ಮೆರವಣಿಗೆ ವೀಕ್ಷಿಸಿದರು. ಯುವಕರ ನೃತ್ಯವನ್ನು ಇನ್ನಷ್ಟು ರಂಗೇರಿಸಲು ಮೇಲಿಂದ ಪುಷ್ಪವೃಷ್ಟಿ ಸುರಿಸಿದರು. ಗಣೇಶನ ವಿಗ್ರಹಕ್ಕೂ ಪುಷ್ಪಗಳನ್ನು ಸುರಿದು ಭಕ್ತಿಯಿಂದ ನಮಿಸಿದರು.

ADVERTISEMENT

ವಿನೋಬನಗರ ಮಸೀದಿ ಮುಂದೆ ಹಾದುಹೋಗುವಾಗ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಸೀದಿಯ ಬಾಗಿಲಲ್ಲೇ ನಿಂತು ಕಹಿ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದರು.

ಜೈ ಶ್ರೀರಾಂ ಎಂದು ಕೂಗುತ್ತಾ ಯುವಕರು ಕುಣಿಯತೊಡಗಿದರು. ಅಲ್ಲೇ ಮಾನವ ಗೋಪುರ ನಿರ್ಮಿಸಿ ಕೇಸರು ಧ್ವಜ ತಿರುಗಿಸಿದರು. ರಸ್ತೆಯ ಎರಡೂ ಕಡೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಹೆಜ್ಜೆಹೆಜ್ಜೆಗೂ ಪೊಲೀಸರು ನಿಂತು ಯುವಕರನ್ನು ಮುಂದಕ್ಕೆ ಸಾಗ ಹಾಕಿದರು. ಮೆರವಣಿಗೆ ಸರಾಗವಾಗಿ ನಡೆಯುವಂತೆ ನೋಡಿಕೊಂಡರು.

ಎಲ್ಲ ಕಡೆ ವಿಡಿಯೊ ಚಿತ್ರೀಕರಣ ಸಹಿತ ಪೊಲೀಸರು ಕಣ್ಗಾವಲು ಇಟ್ಟಿದ್ದರು.

ಮಸೀದಿ ಬಳಿ ಗಣೇಶನ ವಿಗ್ರಹ ಬರುತ್ತಿದ್ದಂತೆ ಮುಸ್ಲಿಂ ಸಮುದಾಯದ ನಾಯಕರು ವಿಗ್ರಹಕ್ಕೆ ಮಾಲಾರ್ಪಣೆ ಮಾಡಿ ಸೌಹಾರ್ದತೆ ಮೆರೆದೆರು.

ವಿನೋಬನಗರದ 2ನೇ ಮುಖ್ಯ ರಸ್ತೆಯಿಂದ ಪಿ.ಬಿ. ರಸ್ತೆ, ಅರುಣ ಸರ್ಕಲ್‌, ರಾಮ್‌ ಆ್ಯಂಡ್‌ ಕೊ ಸರ್ಕಲ್‌ ಮೂಲಕ ವಿನೋಬನಗರ 1ನೇ ರಸ್ತೆಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಮೂಲಕ ಮತ್ತೆ ಪಿ.ಬಿ. ರಸ್ತೆಗೆ ಬಂದು ಬಾತಿ ಕೆರೆಗೆ ಮೆರವಣಿಗೆ ಸಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.