ದಾವಣಗೆರೆ: ಐತಿಹಾಸಿಕ ಹಿನ್ನೆಲೆ ಹೊಂದಿರುವ ವೀರಶೈವ ಲಿಂಗಾಯತ ಧರ್ಮದ ಗುರು ಮತ್ತು ವಿರಕ್ತ ಪರಂಪರೆಗಳು ಒಗ್ಗೂಡಬೇಕು. ಸಮುದಾಯದಲ್ಲಿರುವ ಒಳಪಂಗಡಗಳ ಬೇಧ ನಿವಾರಣೆ ಮಾಡುವ ಕಾರ್ಯಕ್ಕೆ ಪಂಚಪೀಠಾಧೀಶ್ವರರು ನೇತೃತ್ವ ವಹಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.
ಇಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ವೀರಶೈವ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗದ ಎರಡನೇ ದಿನವಾದ ಮಂಗಳವಾರದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಲ್ಲಿ ರಾಜ್ಯ ಸರ್ಕಾರ ಎಡವಟ್ಟು ಮಾಡದೇ ಇದ್ದಿದ್ದರೆ ಪಂಚಪೀಠಾಧೀಶ್ವರರು ಒಂದೆಡೆ ಸೇರುತ್ತಿರಲಿಲ್ಲ. ಗುರು–ವಿರಕ್ತರನ್ನು ಒಂದೆಡೆ ತರುವ ನಿಟ್ಟಿನ ಪ್ರಯತ್ನ ಆರಂಭವಾಗುತ್ತಿರಲಿಲ್ಲ. ರಾಜ್ಯದಲ್ಲಿ 2,500ಕ್ಕೂ ಅಧಿಕ ವೀರಶೈವ ಲಿಂಗಾಯತರ ಮಠಗಳಿದ್ದು, ಇವುಗಳು ಒಗ್ಗೂಡಬೇಕು. ವೀರಶೈವ ಲಿಂಗಾಯತರಿಗೆ ದೊಡ್ಡ ಭವಿಷ್ಯವಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ 2 ಕೋಟಿಗೂ ಮೇಲ್ಪಟ್ಟು ವೀರಶೈವ ಲಿಂಗಾಯತರಿದ್ದೇವೆ. ಸಮುದಾಯದಲ್ಲಿ ಬಡತನವಿದೆ, ಕೂಲಿ ಮಾಡಿ ಜೀವನ ನಡೆಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇವರನ್ನು ಬಡತನ ರೇಖೆಗಿಂತ ಮೇಲೆ ತರುವ ಅಗತ್ಯವಿದೆ. ಉಪಪಂಗಡಗಳಿಂದ ಆಗುತ್ತಿರುವ ಅನಾನುಕೂಲ ಸರಿಪಡಿಸಬೇಕಿದೆ. ಒಳಪಂಗಡಗಳ ಬೇಧ ನಿವಾರಣೆ ಮಾಡದೇ ಇದ್ದರೆ ಮುಂಬರುವ ದಿನಗಳಲ್ಲಿ ದೊಡ್ಡ ಸಂಕಷ್ಟ ಎದುರಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ವೀರಶೈವ ಲಿಂಗಾಯತ ಸಮುದಾಯದ ಬೇರುಗಳು ಗಟ್ಟಿಯಾಗಬೇಕು. ಇದು ರಾಜಕಾರಣಿಗಳಿಂದ ಸಾಧ್ಯವಿಲ್ಲ. ಭಿನ್ನ ಪಕ್ಷದಲ್ಲಿ ನಿಂತು ಹಿತಾಸಕ್ತಿ ಸಂಘರ್ಷ ಮಾಡುತ್ತೇವೆ. ಮಠಾಧೀಶರು ಇದರ ನೇತೃತ್ವ ವಹಿಸಬೇಕು. ಸಮಾಜದಲ್ಲಿರುವ ಅಂಕುಡೊಂಕು ಸರಿಪಡಿಸಿ, ಗುರು–ವಿರಕ್ತರನ್ನು ಒಂದುಗೂಡಿಸಬೇಕು. ರಂಭಾಪುರಿ ಸ್ವಾಮೀಜಿ ಸಾರಥ್ಯದಲ್ಲಿ ಇದು ಸಾಕಾರಗೊಳ್ಳಬೇಕು’ ಎಂದರು.
‘ಜನಗಣತಿಯ ಜೊತೆಗೆ ಜಾತಿ ಗಣತಿ ಇನ್ನಷ್ಟೇ ಆರಂಭವಾಗಲಿದೆ. ಇದು ವ್ಯವಸ್ಥಿತವಾಗಿ ನಡೆಯಲಿದೆ. ವೀರಶೈವ ಲಿಂಗಾಯತ ಒಂದೇ ಹೆಸರಿನಿಂದ ಗುರುತಿಸಿಕೊಳ್ಳಬೇಕಿದೆ. ಸಮುದಾಯದ ಕೂಗನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಟ್ಟಿಸೋಣ. ರಂಭಾಪುರಿ ಪೀಠದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೇಣುಕಾಚಾರ್ಯರ ಪ್ರತಿಮೆಗೆ 6 ತಿಂಗಳ ವೇತನವನ್ನು ನೀಡಲಿದ್ದೇನೆ’ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ‘ಕರ್ನಾಟಕಕ್ಕೆ ಮಠಾಧೀಶರ ಕೊಡುಗೆ ಅಪಾರವಾಗಿದೆ. ಶಾಂತಿ, ಸಮೃದ್ಧಿ ಇಲ್ಲಿದೆ. ನಾಡಿನ ಅಸಂಖ್ಯಾತ ಮಠಗಳು ಆಧ್ಯಾತ್ಮದ ಜೊತೆಗೆ ಶಿಕ್ಷಣ ನೀಡಿವೆ. ಅನ್ನ ದಾಸೋಹದ ಮೂಲಕ ಜನರನ್ನು ಮೇಲೆತ್ತುವ ಕೆಲಸವನ್ನು ಮಠಗಳು ಮಾಡಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ವೀರಶೈವ ಲಿಂಗಾಯತ ಧರ್ಮವು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಆಚಾರ, ವಿಚಾರ, ನಡವಳಿಕೆ ಹಾಗೂ ಹೃದಯವಂತಿಕೆಯ ಕಾರಣಕ್ಕೆ ಇಡೀ ಸಮಾಜ ವೀರಶೈವರನ್ನು ನಂಬುತ್ತದೆ. ಇಂತಹ ಧರ್ಮದ ಪರಿಚಯವನ್ನು ಯುವಪೀಳಿಗೆಗೆ ಹೇಳಿಕೊಡಬೇಕಿದೆ’ ಎಂದು ಹೇಳಿದರು.
ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ‘ವೀರಶೈವ ಧರ್ಮ ಸಮಾಜವನ್ನು ಎಂದಿಗೂ ಒಡೆದಿಲ್ಲ. ಸಮಾಜವನ್ನು ಕಟ್ಟಿದ ಕೀರ್ತಿ ಈ ಧರ್ಮಕ್ಕೆ ಸಲ್ಲುತ್ತದೆ. ಸಂಸ್ಕಾರವನ್ನು ಒಪ್ಪಿ ಈ ಧರ್ಮಕ್ಕೆ ಬಂದವರು ಹೆಚ್ಚು ಜನ. ಜಾತಿ, ವರ್ಣ, ಲಿಂಗ ಬೇಧ ಮೆಟ್ಟಿ ನಿಂತ ಧರ್ಮ ಇದು’ ಎಂದರು.
ಆಧ್ಯಾತ್ಮ ಚಿಂತಕ ಎ.ಸಿ.ವಾಲಿ, ‘ಸಾವಿರಾರು ವರ್ಷಗಳ ವೀರಶೈವ ಪರಂಪರೆಗೆ ಘನತೆ ಇದೆ. ಪಂಚಪೀಠ ಗುಡುಗು ಹಾಕಿದರೆ ಧರ್ಮಕ್ಕೆ ಅಂಟಿದ ಕಳಂಕ ಕಳೆದುಹೋಗುತ್ತದೆ. ಹರಿದ ಧರ್ಮದ ಬಟ್ಟೆಯನ್ನು ಹೊಲಿದು ಧ್ವಜವಾಗಿಸಿ ಎತ್ತರಕ್ಕೆ ಏರಿಸುವ ಕಾರ್ಯ ಶೃಂಗದ ಮೂಲಕ ಆರಂಭವಾಗಿದೆ’ ಎಂದು ಹೇಳಿದರು.
ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಉಜ್ಜಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕರಾದ ಸಿ.ಸಿ.ಪಾಟೀಲ, ಬಿ.ಪಿ.ಹರೀಶ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್, ಮಾಜಿ ಶಾಸಕರಾದ ಮಹಿಮ ಪಟೇಲ್, ಎಚ್.ಎಸ್.ಶಿವಶಂಕರ್, ಎಚ್.ಎಸ್.ಶಿವಯೋಗಿಸ್ವಾಮಿ ಹಾಜರಿದ್ದರು.
‘ವೀರಶೈವ ಲಿಂಗಾಯತ ಸಮುದಾಯಕ್ಕೆ ದೊಡ್ಡ ಇತಿಹಾಸವಿದೆ. ಅಷ್ಟೇ ಗಟ್ಟಿಯದ ಭವಿಷ್ಯ ಇದೆ ಎಂದು ಹೇಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ನಾವಿದ್ದೇವೆ. ಸಮುದಾಯ ಸಂಕಷ್ಟದ ಕಾಲದಲ್ಲಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.
‘ವೀರಶೈವ ಲಿಂಗಾಯತರಿಗೆ ಸಂಸ್ಕಾರ, ಸಂಸ್ಕೃತಿ ಇದೆ. ಧರ್ಮ, ನ್ಯಾಯ, ನೀತಿಯ ಚೌಕಟ್ಟಿನಲ್ಲಿ ಚಿಂತನೆ ಮಾಡುವ ಪರಂಪರೆ ಹೊಂದಿದ್ದೇವೆ. ಆದರೆ, ಈ ಚೌಕಟ್ಟು ಮೀರಿ ಆಲೋಚಿಸುವ ಸಮಾಜ ನಿರ್ಮಾಣವಾಗಿದೆ. ಈ ಚೌಕಟ್ಟು ಮೀರಿ ಚಿಂತನೆ ಬದಲಾಯಿಸಬೇಕಾ ಅಥವಾ ಚಿಂತನೆಯ ಚೌಕಟ್ಟಿಗೆ ಹೊರಗಿನವರನ್ನೂ ಒಳಗೊಳ್ಳಬೇಕಾ ಎಂಬ ಜಿಜ್ಞಾಸೆ ಇದೆ’ ಎಂದು ಅಭಿಪ್ರಾಯಪಟ್ಟರು.
‘ಮಾನವೀಯ ತಳಹದಿಯ ಮೇಲೆ ನಿರ್ಮಾಣವಾದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಮಾಜವನ್ನು ಮುನ್ನಡೆಸುವ ಶಕ್ತಿ ಇದೆ. ಮಾನವೀಯ ತಳಹದಿಯ ಮೇಲಿನ ಚಿಂತನೆಯೇ ಇದಕ್ಕೆ ಪ್ರೇರಣೆ. ಗುರು–ವಿರಕ್ತರು ಬೇರೆ ಎಂಬುದಕ್ಕೆ ಪೂರ್ಣವಿರಾಮ ಹಾಕುವ ಕಾಲ ಬಂದಿದೆ. ಆಧುನಿಕ ಕಾಲದಲ್ಲಿ ಧರ್ಮದ ಚಿಂತನೆ ಪಸರಿಸಿ ಮಾನವ ಕುಲಕ್ಕೆ ನೇತೃತ್ವ ವಹಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.
ಹಿರೇಮಠಗಳ ಸಂಪ್ರದಾಯ ಮರೆಯಾಗುತ್ತಿದೆ. ಈ ಶಾಖಾ ಮಠಗಳಿಗೆ ಶಕ್ತಿ ತುಂಬುವ ಕೆಲಸವನ್ನು ಪಂಚಪೀಠಾಧೀಶ್ವರರು ಮುಂದಾಗಬೇಕು. ಗುರು–ವಿರಕ್ತರು ಒಗ್ಗೂಡಿದರೆ ರಾಜ್ಯದಲ್ಲಿ ದೊಡ್ಡ ಶಕ್ತಿಯಾಗಿ ರೂಪುಗೊಳ್ಳಲು ಸಾಧ್ಯಸಿ.ಸಿ. ಪಾಟೀಲ, ಶಾಸಕ
ಶಾಮನೂರು ಶಿವಶಂಕರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ವೀರಶೈವ ಲಿಂಗಾಯತರ ಎರಡು ಕಣ್ಣು. ಧರ್ಮ ಒಡೆಯುವ ಪ್ರಯತ್ನವನ್ನು ವಿಫಲಗೊಳಿಸಿ, ಸಮುದಾಯ ಒಗ್ಗೂಡಿಸುವ ಪ್ರಯತ್ನಕ್ಕೆ ಸಾವಿರ ಪ್ರಣಾಮಜಿ.ಎಂ.ಸಿದ್ದೇಶ್ವರ, ಕೇಂದ್ರದ ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.