ADVERTISEMENT

ವೀರಶೈವ, ಲಿಂಗಾಯತ ಬೇರೆಯಲ್ಲ : ಶಾಮನೂರು ಶಿವಶಂಕರಪ್ಪ

ಪ್ರತಿಭಾ ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 14:44 IST
Last Updated 16 ಆಗಸ್ಟ್ 2019, 14:44 IST
ದಾವಣಗೆರೆಯ ರೇಣುಕ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಶಾಮನೂರು ಶಿವಶಂಕರಪ್ಪ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು
ದಾವಣಗೆರೆಯ ರೇಣುಕ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಶಾಮನೂರು ಶಿವಶಂಕರಪ್ಪ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು   

ದಾವಣಗೆರೆ: ವೀರಶೈವ ಲಿಂಗಾಯತರನ್ನು ಇಬ್ಭಾಗ ಮಾಡುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅದಕ್ಕೆ ಸಮಾಜದವರು ಕಿವಿಗೊಡಬಾರದು. ವೀರಶೈವ ಲಿಂಗಾಯತ ಬೇರೆಯಲ್ಲ, ಒಂದೇ ಎಂದು ಆಖಿಲ ಭಾರತ ವೀರೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಅಭಿನವ ರೇಣುಕ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ದ್ವಿತೀಯ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

‘ವೀರಶೈವ ಲಿಂಗಾಯತರು ಒಳಪಂಗಡಗಳ ನಡುವೆ ವೈವಾಹಿಕ ಸಂಬಂಧ ಏರ್ಪಡಿಸುವ ಮೂಲಕ ನಾವೆಲ್ಲ ಒಂದೇ ಎಂದು ಒಗ್ಗಟ್ಟು ಪ್ರದರ್ಶಿಸೋಣ’ ಎಂದು ಸಲಹೆ ನೀಡಿದರು.

ADVERTISEMENT

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಮಹಾಸಭಾದಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ವಿದ್ಯಾವಂತರಾಗಬೇಕು ಎಂದರು.

ಸ್ವಯಂಪ್ರೇರಿತರಾಗಿ ಮಹಾಸಭಾದ ಸದಸ್ಯತ್ವ ಪಡೆಯಲು ಸಮುದಾಯದವರು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಆದಾಯವೂ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದ ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಸಂಪೂರ್ಣವಾಗಿ ಭರಿಸುವ ಮೂಲಕ ಅವರ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹಿಸುವ ಚಿಂತನೆ ಇದೆ ಎಂದು ಹೇಳಿದರು.

ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್‌. ತಿಪ್ಪಣ್ಣ, ‘ಒಂದು ಕಾಲದಲ್ಲಿ 2 ಕೋಟಿ ಜನಸಂಖ್ಯೆ ಇದ್ದ ಸಮಾಜದ ಜನಸಂಖ್ಯೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ಗಣತಿಯಲ್ಲಿ 65 ಲಕ್ಷಕ್ಕೆ ಬಂದಿದೆ. ಇದಕ್ಕೆ ನಾವೇ ಕಾರಣ. ವೀರಶೈವ ಲಿಂಗಾಯತ ಎಂದು ಇಭ್ಬಾಗವಾಗಿದ್ದು ಸರಿಯಲ್ಲ. ಒಳಪಂಗಡಗಳಲ್ಲಿ ಗುರುತಿಸಿಕೊಳ್ಳುತ್ತಿರುವುದೂ ಕಾರಣ. ಶಾಸಕರ ಸಂಖ್ಯೆಯೂ ಕಡಿಮೆಯಾಗಿದೆ. ಇದು ಸರಿಯಲ್ಲ. ಎಲ್ಲರೂ ವೀರಶೈವ ಲಿಂಗಾಯತ ಎಂದು ಒಗ್ಗಟ್ಟಾಗಬೇಕು’ ಎಂದು ಸಲಹೆ ನೀಡಿದರು.

‘ಎಲ್ಲ ಧರ್ಮದವರಿಗೂ ನಮ್ಮ ಕೈಲಾದ ಸಹಾಯ ಮಾಡೋಣ ಇಲ್ಲದಿದ್ದರೆ ಸುಮ್ಮನಿರೋಣ. ನಮ್ಮ ಸಿಟ್ಟು, ಅಸೂಯೆ ಬಿಟ್ಟು ಒಂದಾಗೋಣ. ದ್ರೋಹ, ಅನ್ಯಾಯ ಮಾಡುವವರು ವೀರಶೈವರು ಆಗಲು ಸಾಧ್ಯವಿಲ್ಲ’ ಎಂದರು.

ನಿವೃತ್ತ ಪ್ರಾಧ್ಯಾಪಕ ಎಂ.ಜಿ. ಈಶ್ವರಪ್ಪ, ‘ಸಮಾಜದ, ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಸ್ತು, ಶ್ರದ್ಧೆ, ಶ್ರಮ ಇದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಅರ್ಥಶಾಸ್ತ್ರ, ಇತಿಹಾಸ, ವಿಜ್ಞಾನ ಹೀಗೆ ಎಲ್ಲ ರೀತಿಯ ಶಿಕ್ಷಣ ಪಡೆಯುವುದು ಎಲ್ಲ ಪೀಳಿಗೆಗೆ ಅತ್ಯಗತ್ಯ. ಗುರು ಹಿರಿಯರು, ತಂದೆ, ತಾಯಿಗಳಿಂದಲೂ ಬದುಕಿಗೆ ಬೇಕಾದ ಶಿಕ್ಷಣ ಕಲಿಯಬೇಕು’ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಮಹಾಸಭಾದ ಬೆಂಗಳೂರು ಘಟಕದ ರೇಣುಕ ಪ್ರಸನ್ನ ಮಾತನಾಡಿದರು.

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ಜಿಲ್ಲಾ ಪದಾಧಿಕಾರಿಗಳು ಇದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.