ADVERTISEMENT

ಬ್ಯಾಂಕ್ ಶಾಖೆ ಆರಂಭಿಸಲು ಗ್ರಾಮಸ್ಥರ ಒತ್ತಾಯ

ಕಣಿವೆಬಿಳಚಿ ಸುತ್ತಲಿನ ಏಳು ಗ್ರಾಮಗಳ ಜನರಿಗೆ ವ್ಯವಹಾರಕ್ಕಿಲ್ಲ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:14 IST
Last Updated 11 ಜುಲೈ 2025, 4:14 IST
ಬಸವಾಪಟ್ಟಣ ಸಮೀಪದ ಕಣಿವೆಬಿಳಚಿಯಲ್ಲಿ ಬ್ಯಾಂಕ್ ಅಥವಾ ಎ.ಟಿ.ಎಂ. ಸ್ಥಾಪಿಸಲು ಗ್ರಾಮಸ್ಥರು ಗುರುವಾರ ಸರ್ಕಾರವನ್ನು ಒತ್ತಾಯಿಸಿದರು
ಬಸವಾಪಟ್ಟಣ ಸಮೀಪದ ಕಣಿವೆಬಿಳಚಿಯಲ್ಲಿ ಬ್ಯಾಂಕ್ ಅಥವಾ ಎ.ಟಿ.ಎಂ. ಸ್ಥಾಪಿಸಲು ಗ್ರಾಮಸ್ಥರು ಗುರುವಾರ ಸರ್ಕಾರವನ್ನು ಒತ್ತಾಯಿಸಿದರು   

ಬಸವಾಪಟ್ಟಣ: ಕಣಿವೆಬಿಳಚಿ ಗ್ರಾಮದಲ್ಲಿ ಹಣಕಾಸು ವ್ಯವಹಾರಕ್ಕೆ ಅಗತ್ಯವಾದ ಬ್ಯಾಂಕ್‌ ಅಥವಾ ಎ.ಟಿ.ಎಂ.ಗಳು ಇಲ್ಲದ್ದರಿಂದ ಎಲ್ಲಾ ವರ್ಗದ ಜನತೆಗೆ ತೊಂದರೆಯಾಗಿದ್ದು, ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್‌ ಮತ್ತು ಎ.ಟಿ.ಎಂ.ಸ್ಥಾಪಿಸಲು ಕಣಿವೆಬಿಳಚಿ ಗ್ರಾಮಸ್ಥರು ಗುರುವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

ಹೋಬಳಿಯ ಕಣಿವೆಬಿಳಚಿ, ಕೆಂಗಾಪುರ, ಕಂಸಾಗರ, ಹೊಸಳ್ಳಿ, ಹೊಸನಗರ, ಪುಣ್ಯಸ್ಥಳ, ಭೈರನಹಳ್ಳಿ ಈ ಗ್ರಾಮಗಳಲ್ಲಿ ಯಾವುದೇ ಬ್ಯಾಂಕ್‌ ಅಥವಾ ಎ.ಟಿ.ಎಂ.ಗಳು ಇಲ್ಲ. ಹೀಗಾಗಿ ಜನತೆಗೆ ಹಣಕಾಸಿನ ವ್ಯವಹಾರಕ್ಕೆ ತೊಂದರೆಯಾಗಿದೆ. ಒಂದು ನೂರು ರೂಪಾಯಿ ಬೇಕಿದ್ದರೂ ಐದು ಕಿ.ಮೀ. ದೂರದ ಸಾಗರಪೇಟೆ ಅಥವಾ ಆರು ಕಿ.ಮೀ ದೂರದ ಬಸವಾಪಟ್ಟಣಕ್ಕೆ ಹೋಗಬೇಕಾದ ಕಷ್ಟದ ಪರಿಸ್ಥಿತಿ ಇದೆ.

‘ಸರ್ಕಾರ ಗ್ರಾಮಸ್ಥರಿಗೆ ನೀಡುವ ಆರ್ಥಿಕ ಸೌಲಭ್ಯಗಳು ನೇರವಾಗಿ ಅವರವರ ಬ್ಯಾಂಕಿನ ಖಾತೆಗೆ ಜಮಾ ಆಗುವುದರಿಂದ, ತಮ್ಮ ಪಾಲಿನ ಹಣ ತರಲು ಐದಾರು ಕಿ.ಮೀ. ದೂರದ ಬ್ಯಾಂಕುಗಳಿಗೆ ಓಡಾಡಬೇಕಿದೆ. ಈ ಏಳು ಗ್ರಾಮಗಳಲ್ಲಿ ಕಣಿವೆಬಿಳಚಿ ದೊಡ್ಡ ಗ್ರಾಮವಾಗಿದ್ದು, ಇವುಗಳ ಮಧ್ಯ ಭಾಗದಲ್ಲಿದೆ. ಇಲ್ಲಿ ಒಂದು ಬ್ಯಾಂಕ್‌ ಸ್ಥಾಪಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಅಣ್ಣೋಜಿರಾವ್‌ ಹೇಳಿದರು.

ADVERTISEMENT

‘ನಮ್ಮ ಗ್ರಾಮಗಳಲ್ಲಿ ಎ.ಟಿ.ಎಂ. ಅಥವಾ ಬ್ಯಾಂಕ್‌ಗಳು ಇಲ್ಲದೇ ಇರುವುದರಿಂದ ತಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಹಣ ಪಡೆಯಲು ಕೆಲವು ಖಾಸಗಿ ವ್ಯಕ್ತಿಗಳಿಂದ ಅಥವಾ ಅಂಗಡಿ ಮಾಲೀಕರಿಂದ ಶೇ 10ರ ಕಮೀಷನ್‌ ನೀಡಿ ಹಣ ಪಡೆಯಬೇಕಿದೆ. ಬಡ ವರ್ಗದವರಿಗೆ ಈ ಅವ್ಯವಸ್ಥೆ ತೀವ್ರ ಮುಜುಗರ ಉಂಟು ಮಾಡಿದೆ. ಗ್ರಾಮಗಳಲ್ಲಿರುವ ಅಂಗಡಿಗಳಲ್ಲಿ ಫೋನ್‌ ಪೇ ಅಥವಾ ಗೂಗಲ್‌ ಪೇ ಮೂಲಕ ವ್ಯವಹಾರ ನಡೆಯುವುದಿಲ್ಲ. ಅವರಿಗೆ ನಗದು ಹಣವನ್ನೇ ನೀಡಬೇಕಿದೆ. ಇಲ್ಲಿ ಬ್ಯಾಂಕ್‌ ಸ್ಥಾಪನೆ ಆಗುವವರೆಗೂ ಈ ಸಮಸ್ಯೆ ಬಗೆ ಹರಿಯುವುದಿಲ್ಲ’ ಎಂದರು ಗ್ರಾಮದ ನಿವಾಸಿ ಭವಾನಿರಾವ್‌ ಬಲ್ಲಾಳ್‌.

‘ಏಳೂ ಗ್ರಾಮಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮನೆಗಳು, ಐದು ಸಾವಿರದಷ್ಟು ಜನಸಂಖ್ಯೆ ಇದೆ. ಕೃಷಿಯೇ ಇಲ್ಲಿಯ ಮುಖ್ಯ ಉದ್ಯೋಗವಾಗಿದ್ದು, ಅಡಿಕೆ, ತೆಂಗು, ಭತ್ತ ಬೆಳೆಯಲಾಗುತ್ತದೆ. ದೈನಂದಿನ ಕೃಷಿ ಕೆಲಸಗಳಿಗಾಗಿ ಕೂಲಿಕಾರರಿಗೆ ರೈತರು ಕೂಲಿ ಹಣ ನೀಡುವುದು ಕಷ್ಟವಾಗಿದ್ದು, ಬ್ಯಾಂಕ್‌ ಶಾಖೆ ಆರಂಭವೊಂದೇ ಇದಕ್ಕೆ ಪರಿಹಾರ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನಮ್ಮ ಗ್ರಾಮಗಳಿಗೆ ಭೇಟಿ ನೀಡಿ ಬ್ಯಾಂಕ್‌ ಶಾಖೆಯನ್ನು ತೆರೆಯಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಂಜನಪ್ಪ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.