
ಹಿರೇಮಳಲಿ (ಚನ್ನಗಿರಿ): ‘ತಾಲ್ಲೂಕಿನ ಹಿರೇಮಳಲಿ ಗ್ರಾಮದ ಬಳಿ ರಸ್ತೆ ಬದಿಯಲ್ಲಿರುವ ಮದ್ಯದ ಅಂಗಡಿಯನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಶುಕ್ರವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಾಲ್ಕು ವರ್ಷದ ಹಿಂದೆ ಗ್ರಾಮದ ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಮದ್ಯದ ಅಂಗಡಿ ತೆರೆಯಲಾಗಿದೆ. ಆದರೆ ಇದರ ಮುಂದೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ 9 ಜನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಅಬಕಾರಿ ಇಲಾಖೆಯ ನಿಯಮದ ಪ್ರಕಾರ ರಸ್ತೆ ಬದಿಯಿಂದ 100 ಮೀಟರ್ ದೂರದಲ್ಲಿ ಮದ್ಯದ ಅಂಗಡಿ ಇರಬೇಕು. ಆದರೆ ಈ ಗ್ರಾಮದಲ್ಲಿ ನಿಯಮವನ್ನು ಮೀರಿ ರಸ್ತೆ ಬದಿಗೆ ಹೊಂದಿಕೊಂಡಂತೆ ಮದ್ಯದ ಅಂಗಡಿ ತೆರೆಯಲಾಗಿದೆ. ನಿಯಮ ಉಲ್ಲಂಘನೆಯಾಗಿದ್ದರೂ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎನ್.ಜೆ. ನಾಗರಾಜ್, ‘ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುವುದು. ಮದ್ಯದಂಗಡಿ ಸ್ಥಳಾಂತರಕ್ಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು’ ಎಂದು ಭರವಸೆ ನೀಡಿದರು.
ರೈತ ಸಂಘದ ಮುಖಂಡರಾದ ಚನ್ನಬಸಪ್ಪ, ದಾಗಿನಕಟ್ಟೆ ಬಸವರಾಜ್, ಕಲೀಂಮುಲ್ಲಾ, ಹನುಮಂತಪ್ಪ, ಓಂಕಾರಪ್ಪ, ತಿಪ್ಪೇಸ್ವಾಮಿ, ನೇತ್ರಮ್ಮ, ಆಶಾ, ನಾಗರಾಜ್, ಸಂತೋಷ್ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.