ADVERTISEMENT

ದಾವಣಗೆರೆ: ಜೆಜೆಎಂ ವಿದ್ಯಾರ್ಥಿಗಳಿಗೆ ವಿನಯ್‌ಕುಮಾರ್, ರಘು ದೀಕ್ಷಿತ್ ಬೆಂಬಲ

15ನೇ ದಿನಕ್ಕೆ ಕಾಲಿಟ್ಟ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 17:39 IST
Last Updated 13 ಜುಲೈ 2020, 17:39 IST
ಶಿಷ್ಯವೇತನಕ್ಕೆ ಆಗ್ರಹಿಸಿ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ 15ನೇ ದಿನಕ್ಕೆ ಕಾಲಿಟ್ಟಿದ್ದು, ದಾವಣಗೆರೆಯ ಜಯದೇವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಶಿಷ್ಯವೇತನಕ್ಕೆ ಆಗ್ರಹಿಸಿ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ 15ನೇ ದಿನಕ್ಕೆ ಕಾಲಿಟ್ಟಿದ್ದು, ದಾವಣಗೆರೆಯ ಜಯದೇವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ದಾವಣಗೆರೆ: ಶಿಷ್ಯವೇತನಕ್ಕಾಗಿ 15 ದಿವಸಗಳಿಂದ ಪ್ರತಿಭಟನೆ ನಡೆಸುತ್ತಿರುವ ಇಲ್ಲಿನ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಕರ್ನಾಟಕ ತಂಡದ ಮಾಜಿ ನಾಯಕ ದಾವಣಗೆರೆಯ ವಿನಯ್‌ಕುಮಾರ್ ಹಾಗೂ ಗಾಯಕ ರಘು ದೀಕ್ಷಿತ್ ಬೆಂಬಲ ಸೂಚಿಸಿದ್ದಾರೆ.

‘ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ 16 ತಿಂಗಳಿನಿಂದ ಶಿಷ್ಯವೇತನ ದೊರೆಕಿಲ್ಲ ಎಂಬ ಮಾಹಿತಿಯನ್ನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ನಾನು ಒಬ್ಬ ಭಾರತೀಯ ಪ್ರಜೆಯಾಗಿ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಳ್ಳುತ್ತೇನೆ. ವೈದ್ಯರು, ಪೊಲೀಸರು ಹಾಗೂ ನರ್ಸ್‌ಗಳೂ ಸೇರಿ ಅನೇಕರು ಕೋವಿಡ್ ಸಂದರ್ಭಗಳಲ್ಲಿ ಮುಂಚೂಣಿಯಲ್ಲಿ ಸೈನಿಕರಂತೆ ಹೋರಾಟ ಮಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿ, ಆಡಳಿತ ಮಂಡಳಿ ಅವರ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಇನ್‌ಸ್ಟಾಗ್ರಾಂನಲ್ಲಿ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿರುವ ಗಾಯಕ ರಘು ದೀಕ್ಷಿತ್ ‘ಸರ್ಕಾರ ಮತ್ತು ಆಡಳಿತ ಮಂಡಳಿಯ ನಡುವಿನ ಟೆನಿಸ್ ಪಂದ್ಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ. 15 ದಿನಗಳಿಂದ ಹೋರಾಟ ಮಾಡುತ್ತಿರುವ ವಿದ್ಯಾರ್ಥಿಗಳು ಶಿಷ್ಯವೇತನ ನೀಡದೇ ಇದ್ದರೂ ಮುಂಚೂಣಿಯಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಹೃದಯವಂತಿಕೆ ಇರಲಿ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ.

ADVERTISEMENT

‘ಎವೈಎಫ್‌ಐ ಸಂಘಟನೆ ಸೋಮವಾರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿತು.

‘ಒಪಿಡಿ ಹಾಗೂ ತುರ್ತುಸೇವೆ ಬಹಿಷ್ಕರಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಅವು ಸ್ಥಗಿತಗೊಂಡಿಲ್ಲ. ಆಡಳಿತ ಮಂಡಳಿಯಿಂದ ಆಯ್ಕೆಯಾದ ವಿದ್ಯಾರ್ಥಿಗಳು ಅವುಗಳನ್ನು ನಡೆಸಿದ್ದಾರೆ. ಪ್ರತಿಭಟನೆ ನಡೆಸಿದ್ದರೂ ಕೋವಿಡ್‌ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇವೆ’ ಎಂದು ಡಾ. ಹರೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.