ADVERTISEMENT

ವಾಸ್ತವ ಬದುಕಿಗೆ ಹತ್ತಿರದ ಪಠ್ಯ ಅಗತ್ಯ: ಡಾ. ಶರಣಪ್ಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 4:13 IST
Last Updated 16 ಡಿಸೆಂಬರ್ 2021, 4:13 IST
ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಎನ್‌ಇಪಿ–2020 ಆಧಾರಿತ ಇತಿಹಾಸ ಪದವಿ ಪಠ್ಯಕ್ರಮ ಕಾರ್ಯಾಗಾರ ಮತ್ತು ಇತಿಹಾಸ ಪಠ್ಯಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶರಣಪ್ಪ ವಿ. ಹಲಸೆ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಎನ್‌ಇಪಿ–2020 ಆಧಾರಿತ ಇತಿಹಾಸ ಪದವಿ ಪಠ್ಯಕ್ರಮ ಕಾರ್ಯಾಗಾರ ಮತ್ತು ಇತಿಹಾಸ ಪಠ್ಯಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶರಣಪ್ಪ ವಿ. ಹಲಸೆ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.   

ದಾವಣಗೆರೆ: ವಾಸ್ತವದ ಬದುಕಿಗೆ ಹತ್ತಿರವಾದ ಪಠ್ಯ ಇರಬೇಕು ಎಂಬ ದೂರದೃಷ್ಟಿ ಇಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ–2020 ತರಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ವಿ. ಹಲಸೆ ಹೇಳಿದರು.

ಇಲ್ಲಿನ ಎ.ಆರ್‌.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ದಾವಣಗೆರೆ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಮಂಡಳಿ, ಇತಿಹಾಸ ಅಧ್ಯಾಪಕರ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ್ದ ಕಾಲೇಜಿನ
2021-21ನೇ ಸಾಲಿನ ಚಟುವಟಿಕೆ ಉದ್ಘಾಟನೆ ಹಾಗೂ ಎನ್‍ಇಪಿ-2020 ಆಧಾರಿತ ಇತಿಹಾಸ ಪದವಿ ಪಠ್ಯಕ್ರಮ ಕಾರ್ಯಾಗಾರ, ಇತಿಹಾಸ ಪಠ್ಯಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೋ ದೇಶದ ಇತಿಹಾಸ ತಿಳಿಯುವ ಮೊದಲು ಭಾರತದ ಸಂಸ್ಕೃತಿ, ಈ ನಾಡಿನ ಇತಿಹಾಸ ತಿಳಿಯಬೇಕು. ನಮ್ಮ ಸುತ್ತಮುತ್ತಲ ಸಾಧಕರು ಬೆಳೆದು ಬಂದ ರೀತಿಯನ್ನು ಅಧ್ಯಯನ ಮಾಡಬೇಕು. ಅಂಥ ಪಠ್ಯಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯು ಒತ್ತು ನೀಡಿದೆ ಎಂದು ತಿಳಿಸಿದರು.

ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ದಾವಣಗೆರೆ ವಿಶ್ವವಿದ್ಯಾಲಯ ಬದ್ಧವಾಗಿದೆ. ಈ ಅಕಾಡೆಮಿಕ್‌ ವರ್ಷದಿಂದಲೇ ಅನುಷ್ಠಾನಕ್ಕೆ ಬರುತ್ತಿದೆ. ಇನ್ನು ಮುಂದೆ ಪದವಿಯಲ್ಲಿ ಮೊದಲ ವರ್ಷ ಓದಿದವರಿಗೆ ಪ್ರಮಾಣಪತ್ರ, ಎರಡು ವರ್ಷ ಓದಿದವರಿಗೆ ಡಿಪ್ಲೊಮಾ ಪ್ರಮಾಣಪತ್ರ, ಮೂರು ವರ್ಷ ಓದಿದರೆ ಪದವಿ ಪ್ರಮಾಣಪತ್ರ, ನಾಲ್ಕು ವರ್ಷ ಪೂರ್ಣಗೊಳಿಸಿದರೆ ಆನರ್ಸ್‌ ಸರ್ಟಿಫಿಕೇಟ್‌ ನೀಡಲಾಗುತ್ತದೆ ಎಂದು ವಿವರಿಸಿದರು.

ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ.ಈಶ್ವರಪ್ಪ ಮಾತನಾಡಿ, ‘ಅಧ್ಯಯನ, ಅಧ್ಯಾಪನ, ಸಂಶೋಧನೆ ಈ ಮೂರು ಪ್ರಮುಖ ಗುಣಗಳು ಉಪನ್ಯಾಸಕರಿಗೆ ಇರಬೇಕು. ನಿತ್ಯ ಕಲಿಯುತ್ತಿರಬೇಕು. ಕಲಿತಿದ್ದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಅದಕ್ಕೆ ಪೂರಕವಾದ ಆಕರ ಗ್ರಂಥಗಳನ್ನು ರಚಿಸಬೇಕು. ಆಗ ವಿದ್ಯಾರ್ಥಿಗಳೂ ಅಧ್ಯಾಪಕರನ್ನು ಅನುಸರಿಸುತ್ತಾರೆ. ಅಧ್ಯಾಪಕರು ಹೇಗಿದ್ದಾರೆ ಎನ್ನುವುದು ಗ್ರಂಥಾಲಯದಲ್ಲಿ ಇರುವ ಪುಸ್ತಕಗಳು ಮತ್ತು ಕಲಿತ ವಿದ್ಯಾರ್ಥಿಗಳಿಂದ ಗೊತ್ತಾಗುತ್ತದೆ’ ಎಂದು ಹೇಳಿದರು.

ಹೊಸತು ಬರುತ್ತಿರಬೇಕು. ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತಿರಬೇಕು. ಹಾಗೆಂದು ಹೊಸತರಲ್ಲಿ ಎಲ್ಲವೂ ಒಳ್ಳೆಯದಿದೆ ಎಂದು ಅಂದುಕೊಳ್ಳಬೇಕಿಲ್ಲ. ಅನುಭವ ಆಗುತ್ತಲೇ ಒಳ್ಳೆಯದು ಯಾವುದು, ಒಳ್ಳೆಯದಲ್ಲದ್ದು ಯಾವುದು ಎಂಬುದು ಗೊತ್ತಾಗುತ್ತದೆ. ಹೊಸ ಶಿಕ್ಷಣ ನೀತಿಯ ಬಹುಪ್ರವೇಶ ಮತ್ತು ಬಹು‌ನಿರ್ಗಮನದ ಬಗ್ಗೆ ಅನುಮಾನಗಳಿವೆ. ವಿದ್ಯಾರ್ಥಿಗಳು ಬರಬೇಕು. ಆದರೆ ಯಾವಾಗ ಬೇಕಾದರೂ ಹೋಗುವುದು ಸರಿಯಾದ ಪದ್ಧತಿ ಅಲ್ಲ. ಕಲಿತೇ ಹೋಗಬೇಕು ಎಂದು ವಿಶ್ಲೇಷಿಸಿದರು.

ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜೆ.ಕೆ.ಮಲ್ಲಿಕಾರ್ಜುನಪ್ಪ ರಚಿಸಿರುವ ‘ಭಾರತದ ಸಾಂಸ್ಕೃತಿಕ ಪರಂಪರೆ’, ‘ಕರ್ನಾಟಕ ರಾಜಕೀಯ ಇತಿಹಾಸ ಭಾಗ-1’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ‘ಪ್ರಜಾವಾಣಿ’ ದಾವಣಗೆರೆ ಬ್ಯೂರೋ ಮುಖ್ಯಸ್ಥ ವಿಶಾಖ ಎನ್‌. ಕಾಲೇಜಿನ ವಿವಿಧ ಚಟುವಟಿಕೆಗೆ ಚಾಲನೆ ನೀಡಿದರು. ದಾವಣಗೆರೆ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಮಂಡಳಿ ಅಧ್ಯಕ್ಷ ಡಾ.ವೆಂಕಟರಾವ್ ಎಂ. ಪಾಲಾಟೆ, ಇತಿಹಾಸ ಅಧ್ಯಾಪಕರ ವೇದಿಕೆ ಅಧ್ಯಕ್ಷ ಡಾ.ಬಿ.ಪಿ.ಕುಮಾರ, ಕೃತಿಕಾರ ಡಾ.ಜೆ.ಕೆ. ಮಲ್ಲಿಕಾರ್ಜುನಪ್ಪ, ಸಹಾಯಕ ಪ್ರಾಧ್ಯಾಪಕಿ ಪ್ರೊ. ಜೆ. ಅನಿತಾಕುಮಾರಿ ಇದ್ದರು.

ಉಮೇಶ ಪ್ರಾರ್ಥಿಸಿದರು. ರಾಜ್ಯಶಾಸ್ತ್ರ ಸಹಪ್ರಾಧ್ಯಾಪಕ ಪ್ರೊ.ಮಲ್ಲಿಕಾರ್ಜುನ ಆರ್. ಹಲಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಉಪನ್ಯಾಸಕಿ ರಶ್ಮಿ ಪಿ. ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇಸ್ವಾಮಿ ಎಚ್‌.ಆರ್‌. ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.