ADVERTISEMENT

ಶೇ 50ಕ್ಕಿಂತ ಹೆಚ್ಚು ನೋಟಾ ಇದ್ದರೆ ಅವಕಾಶ ಬೇಡ: ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 16:10 IST
Last Updated 19 ಜುಲೈ 2022, 16:10 IST
ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.
ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು.   

ದಾವಣಗೆರೆ: ‘ಮತದಾನದಲ್ಲಿ ‘ನೋಟಾ’ ಪ್ರಮಾಣ ಶೇ 50ಕ್ಕಿಂತ ಹೆಚ್ಚಾದರೆ, ಆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ರೂಪಿಸಬೇಕು...’

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಮಂಗಳವಾರ ಇಲ್ಲಿ ನಡೆದ ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯ’ ಕುರಿತ ಸಂವಾದದಲ್ಲಿ ಇಲ್ಲಿನ ಸೀತಮ್ಮ ಕಾಲೇಜಿನ ಉಪನ್ಯಾಸಕ ತೋರಣ ನಾಯ್ಕ್ ನೀಡಿದ ಸಲಹೆಯಿದು.

‘ಮತದಾನ ಕಡ್ಡಾಯಗೊಳಿಸುವುದು ಸಂವಿಧಾನದ ಆಶಯದ ವಿರುದ್ಧ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ‘ನೋಟಾ’ ಇರುವುದರಿಂದ ಸಂವಿಧಾನದ ಆಶಯಕ್ಕೆ ವಿರುದ್ಧ ಎನಿಸುವುದಿಲ್ಲ. ಅಭ್ಯರ್ಥಿಗಳು ಇಷ್ಟವಿಲ್ಲದಿದ್ದರೆ ‘ನೋಟಾ’ಕ್ಕೆ ಮತ ಹಾಕಿ. ಅದನ್ನು ಬಿಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಕಿವಿಮಾತು ಹೇಳಿದರು.

ADVERTISEMENT

‘ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಯಾವ ಪಕ್ಷವೂ ಟಿಕೆಟ್ ನೀಡಬಾರದು. ಪಕ್ಷಾಂತರಿಗಳಿಗೆ 5 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಸಲಹೆ ನೀಡಿದರು.

‘ಅಪರಾಧ ಹಿನ್ನೆಲೆಯವರು ಜಾಮೀನು ಪಡೆದು, ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬರುತ್ತಾರೆ. ಈ ವಿಷಯದ ಕುರಿತು ಗಂಭೀರವಾಗಿ ಚರ್ಚೆ ನಡೆಸಬೇಕು’ ಎಂದು ಕಾನೂನು ವಿದ್ಯಾರ್ಥಿ ಬಸವರಾಜ್ ಸಲಹೆ ನೀಡಿದರು.

‘ನಮ್ಮಲ್ಲಿ ವಂಶಾಡಳಿತ ರಾಜಕಾರಣದಿಂದಾಗಿ ಸಾಮಾನ್ಯರು ಚುನಾವಣೆಗೆ ಸ್ಪರ್ಧಿಸುವುದೇ ಕಷ್ಟವಾಗಿದೆ. ಒಳ್ಳೆಯದನ್ನು ಮಾಡಬೇಕು ಎನ್ನುವವರಿಗೆ ಅವಕಾಶವೇ ಇಲ್ಲವಾಗಿದೆ’ ಎಂದು ವಿದ್ಯಾರ್ಥಿನಿ ಸಲ್ಮಾ ಬೇಸರ ವ್ಯಕ್ತಪಡಿಸಿದರು.

‘ನ್ಯಾಯಾಂಗ ಅಪ್ಪಟ ಚಿನ್ನವಾಗಿ ಉಳಿದಿದೆಯೇ?’
‘ನ್ಯಾಯಾಂಗ ವ್ಯವಸ್ಥೆ ಇಂದು ಅಪ್ಪಟ ಚಿನ್ನ, ಪವಿತ್ರವಾದ ಕ್ಷೇತ್ರವಾಗಿ ಉಳಿದಿದೆಯಾ? ಅದರಲ್ಲಿರುವ ದೋಷ, ದೌರ್ಬಲ್ಯಗಳನ್ನು ನೋಡಿದರೆ ಭಯವಾಗುತ್ತದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆಕಾಗೇರಿ ಕಳವಳ ವ್ಯಕ್ತಪಡಿಸಿದರು.

‘ಇಂದು ತೀರ್ಪು ಬರುತ್ತಿದೆಯೇ ಹೊರತು ನ್ಯಾಯ ಸಿಗುತ್ತಿಲ್ಲ. ನ್ಯಾಯಾಂಗ ವ್ಯವಸ್ಥೆಯೂ ಹೀಗಾದರೆ ಈ ದೇಶದ ರಕ್ಷಣೆಗೆ ನಿಲ್ಲುವವರು ಯಾರು? ನ್ಯಾಯಾಂಗ ವ್ಯವಸ್ಥೆ ನಿರೀಕ್ಷೆಗೂ ಮೀರಿ ತನ್ನ ಮೌಲ್ಯಾದರ್ಶಗಳನ್ನು ಕಳೆದುಕೊಂಡಿದೆ. ಕಾರ್ಯಾಂಗ, ಶಾಸಕಾಂಗ, ಪತ್ರಿಕಾರಂಗದ ಜೊತೆಗೆ ನ್ಯಾಯಾಂಗದಲ್ಲೂ ಭ್ರಷ್ಟಾಚಾರ ಕಾಣಿಸಿಕೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾರ್ಯಾಂಗದಲ್ಲಿ ಇಂದಿಗೂ ಬ್ರಿಟಿಷ್‌ ವ್ಯವಸ್ಥೆಯಂತೆ ಫೈಲ್‌ಗಳಿಗೆ ಕೊಕ್ಕೆ ಹಾಕುವ ಕೆಲಸ ನಡೆಯುತ್ತಿದೆ. ಕಾರ್ಯಾಂಗದ ವ್ಯವಸ್ಥೆ ಜಟಿಲಗೊಂಡಿದ್ದು, ಮಾನವೀಯತೆಯನ್ನು ಕಳೆದುಕೊಂಡಿದೆ. ನಾವು ಎಷ್ಟೇ ಕಾನೂನು ರೂಪಿಸಿದ್ದರೂ ಅದರೊಳಗೆ ಮಾನವೀಯತೆಯ ಹೃದಯಭಾಗ ಇಲ್ಲದಿರುವುದರಿಂದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ’ ಎಂದರು.

*

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಬಗ್ಗೆ ದೆಹಲಿಯಲ್ಲಿ ಈಚೆಗೆ ನಡೆದ ವಿಧಾನಸಭಾ ಅಧ್ಯಕ್ಷರ ಸಮ್ಮೇಳನದಲ್ಲಿ ಚರ್ಚೆ ನಡೆದಿದೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ಸ್ಪೀಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.