ADVERTISEMENT

ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 11:50 IST
Last Updated 12 ಜನವರಿ 2022, 11:50 IST
ಬಿಸಿಯೂಟ ತಯಾರಕರಿಗೆ ಈ ಬಾರಿಯ ಬಜೆಟ್‌ನಲ್ಲಿ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಬಿಸಿಯೂಟ ತಯಾರಕರು ತಹಶೀಲ್ದಾರ್ ಕಚೇರಿ ಅಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಿಸಿಯೂಟ ತಯಾರಕರಿಗೆ ಈ ಬಾರಿಯ ಬಜೆಟ್‌ನಲ್ಲಿ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಬಿಸಿಯೂಟ ತಯಾರಕರು ತಹಶೀಲ್ದಾರ್ ಕಚೇರಿ ಅಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.   

ದಾವಣಗೆರೆ: ಬಿಸಿಯೂಟ ತಯಾರಕರಿಗೆ ಈ ಬಾರಿಯ ಬಜೆಟ್‌ನಲ್ಲಿ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಬಿಸಿಯೂಟ ತಯಾರಕರು ತಹಶೀಲ್ದಾರ್ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಕರೆಯಂತೆ ತಾಲ್ಲೂಕು ಕಚೇರಿ ಬಳಿ ಬಿಸಿಯೂಟ ತಯಾರಕರು ಪ್ರತಿಭಟನೆ ನಡೆಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ‘ಬಿಸಿಯೂಟ ತಯಾರಕರು ಹತ್ತೊಂಬತ್ತು ವರ್ಷಗಳಿಂದ ಕನಿಷ್ಠ ವೇತನ ಇಲ್ಲದೆ ಗೌರವ ಸಂಭಾವನೆ ಪಡೆದು ದುಡಿಯುತ್ತಿದ್ದಾರೆ. ಜೀವನ ನಿರ್ವಹಿಸಲು ಕಷ್ಟವಾಗುತ್ತಿದೆ. ಆದ್ದರಿಂದ 2022-23ರ ಬಜೆಟ್‌ನಲ್ಲಿ ಕನಿಷ್ಠ ವೇತನ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕನಿಷ್ಠ ವೇತನ ₹ 21 ಸಾವಿರ ಜಾರಿಗೊಳಿಸಬೇಕು. ಉತ್ತರ ಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ ಆದೇಶದಂತೆ ಬಿಸಿಯೂಟ ತಯಾರಕರ ಕೆಲಸವನ್ನು ಕಾಯಂಗೊಳಿಸಿ ಎಲ್ಲ ರೀತಿಯ ಸೌಲಭ್ಯ ಒದಗಿಸಬೇಕು. ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ನಿರ್ಧಾರ ಕೈಬಿಡಬೇಕು. ಯೋಜನೆ ಎನ್ನುವುದನ್ನು ನಿರಂತರ ಕಾರ್ಯಕ್ರಮ ಎಂದು ಮಾರ್ಪಡಿಸಬೇಕು. ಗೌರವ ಕಾರ್ಯಕರ್ತೆಯರು ಎಂಬುದನ್ನು ಕೈಬಿಟ್ಟು ಕಾರ್ಮಿಕರು ಎಂದು ಪರಿಗಣಿಸಬೇಕು. ಕಾರ್ಮಿಕ ಇಲಾಖೆಯ ವ್ಯಾಪ್ತಿಯ ಅಡಿಗೆ ತರಬೇಕು. ನಿವೃತ್ತರಾದಾಗ ₹ 2 ಲಕ್ಷ ಇಡಗಂಟು ಮತ್ತು ತಿಂಗಳಿಗೆ ₹ 3 ಸಾವಿರ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಬಿಸಿಯೂಟ ತಯಾರಕರ ತಾಲ್ಲೂಕು ಸಮಿತಿ ಅಧ್ಯಕ್ಷೆ ಮಳಲಕೆರೆ ಜಯಮ್ಮ, ಕಾರ್ಯದರ್ಶಿ ಜ್ಯೋತಿಲಕ್ಷ್ಮಿ, ಖಜಾಂಚಿ ಪದ್ಮಾ, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಸರೋಜಾ, ಜಿಲ್ಲಾ ಸಂಚಾಲಕ, ಸಿ. ರಮೇಶ್, ಮುಖಂಡರಾದ ನರೇಗಾ ರಂಗನಾಥ್, ಪರಶುರಾಮ್, ವನಜಾಕ್ಷಮ್ಮ, ಶೋಭಾ, ಪಾರ್ವತಿಬಾಯಿ, ಮಂಜುಳಾ, ಸುಜಾತಾ, ಮಂಜಮ್ಮ, ಸುವರ್ಣಮ್ಮ, ಲಲಿತಮ್ಮ, ಜ್ಯೋತಿಬಾಯಿ, ವಿ.ರೂಪಾ, ವಿಜಯಲಕ್ಷ್ಮಿ, ಬಿ.ಸುಮ, ಎಂ.ಯಶೋದಮ್ಮ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.