ADVERTISEMENT

ನೀರಿನ ಕರ: ₹ 32 ಸಾವಿರ...ಪಾಲಿಕೆ ಬಿಲ್‌ಗೆ ಎಸ್‌ಒಜಿ ಕಾಲೊನಿ ನಿವಾಸಿಗಳ ಅಚ್ಚರಿ

ಜಿ.ಬಿ.ನಾಗರಾಜ್
Published 3 ಫೆಬ್ರುವರಿ 2025, 6:56 IST
Last Updated 3 ಫೆಬ್ರುವರಿ 2025, 6:56 IST
ದಾವಣಗೆರೆ ನಗರದ ಎಸ್‌ಒಜಿ ಕಾಲೊನಿ
ದಾವಣಗೆರೆ ನಗರದ ಎಸ್‌ಒಜಿ ಕಾಲೊನಿ   

ದಾವಣಗೆರೆ: ಇಲ್ಲಿನ ಎಸ್‌ಒಜಿ ಕಾಲೊನಿಯಲ್ಲಿ 14 ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ನೀರಿನ ಕರವನ್ನು ಮಹಾನಗರ ಪಾಲಿಕೆ ಕಡ್ಡಾಯವಾಗಿ ಪಾವತಿಸುವಂತೆ ಸೂಚಿಸಿದೆ. ಆಶ್ರಯ ಮನೆಗಳಿಗೆ ನೀಡಿದ ₹ 32 ಸಾವಿರ ನೀರಿನ ಕಂದಾಯದ ಬಿಲ್‌ ನೋಡಿ ನಿವಾಸಿಗಳು ಅಚ್ಚರಿಗೊಂಡಿದ್ದಾರೆ.

ಮಹಾನಗರ ಪಾಲಿಕೆಯ 31ನೇ ವಾರ್ಡ್‌ ವ್ಯಾಪ್ತಿಯ ಎಸ್‌ಒಜಿ ಕಾಲೊನಿಯಲ್ಲಿ ಅಂದಾಜು 2 ಸಾವಿರ ಆಶ್ರಯ ಮನೆಗಳಿವೆ. ಕೆ.ಶಿವರಾಂ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಹಂಚಿಕೆಯಾದ ಈ ಮನೆಗಳಲ್ಲಿ ಹೆಚ್ಚಾಗಿ ಆಟೊ ಚಾಲಕರು, ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. 2011ರಿಂದ ಮಹಾನಗರ ಪಾಲಿಕೆಗೆ ನೀರಿನ ಕರವನ್ನು ಪಾವತಿಸಿಲ್ಲ.

ಜನವರಿ ಕೊನೆಯ ವಾರದಲ್ಲಿ ಭೇಟಿ ನೀಡಿದ ಮಹಾನಗರ ಪಾಲಿಕೆಯ ಸಿಬ್ಬಂದಿ ಪ್ರತಿ ಮನೆಗೆ ₹ 32,760 ಮೊತ್ತದ ಬಿಲ್‌ ವಿತರಿಸಿದ್ದಾರೆ. 2011ರಿಂದ ಬಾಕಿ ಉಳಿಸಿಕೊಂಡಿರುವ ಕರವನ್ನು ದಂಡ ಸಹಿತ ಪಾವತಿಸುವಂತೆ ತಾಕೀತು ಮಾಡಿದ್ದಾರೆ. ಪಾಲಿಕೆಯ ಈ ನಡೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

ADVERTISEMENT

‘ಆಶ್ರಯ ಮನೆಗಳಲ್ಲಿ ವಾಸವಾಗಿರುವ ಬಹುತೇಕರು ಬಡವರು. ಕೂಲಿ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದೇವೆ. ಹಳೆ ಬಾಕಿ ಪಾವತಿಸುವಷ್ಟು ಆರ್ಥಿಕವಾಗಿ ಸಶಕ್ತರಾಗಿಲ್ಲ. ಇಷ್ಟು ವರ್ಷ ಕಂದಾಯ ಪಾವತಿಸುವಂತೆ ಮಹಾನಗರ ಪಾಲಿಕೆ ಒಮ್ಮೆಯೂ ಬಿಲ್‌ ನೀಡಿಲ್ಲ. ಏಕಾಏಕಿ ಹತ್ತಾರು ಸಾವಿರ ಮೊತ್ತದ ಬಿಲ್‌ ನೀಡಿದರೆ ಕಟ್ಟುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಎಸ್‌ಒಜಿ ಕಾಲೊನಿ ನಿವಾಸಿ ತಿಮ್ಮಣ್ಣ.

2011ರಲ್ಲಿ ನೀರಿನ ಕರ ಪಾವತಿಸುವಂತೆ ಮಹಾನಗರ ಪಾಲಿಕೆ ಮೊದಲ ಬಾರಿಗೆ ಸೂಚನೆ ನೀಡಿತ್ತು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಜನಪ್ರತಿನಿಧಿಗಳು ಕರ ಪಾವತಿ ಮಾಡದಂತೆ ಜನರಿಗೆ ಸಲಹೆ ನೀಡಿದ್ದರು. ಬಡವರಿಗೆ ನೀರಿನ ಕಂದಾಯದಲ್ಲಿ ವಿನಾಯಿತಿ ಕೊಡಿಸುವ ಆಶ್ವಾಸನೆ ಹಾಗೂ ಹಳೆಯ ಕಂದಾಯ ಮನ್ನಾ ಮಾಡಿಸುವ ಭರವಸೆ ಕೂಟ್ಟಿದ್ದರು.

2011–12ರಿಂದ 2018–19ರವರೆಗೆ ಪ್ರತಿ ವರ್ಷ ₹ 2,280 ಹಾಗೂ 2019–20ರ ಬಳಿಕ ಪ್ರತಿ ವರ್ಷ ₹ 2,400 ನೀರಿನ ಕರವನ್ನು ವಿಧಿಸಲಾಗಿದೆ. ಕರ ಮತ್ತು ದಂಡದ ಮೊತ್ತ ಸೇರಿ ಪ್ರತಿ ಮನೆಗೆ ₹ 32,760 ಪಾವತಿಸುವಂತೆ ಸೂಚಿಸಿದೆ. ಇಲ್ಲವಾದರೆ ನೀರಿನ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿದೆ.

‘10 ವರ್ಷಗಳ ಹಿಂದೆ ಕಾಲೊನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಭಾಗವಹಿಸಿದ್ದರು. ನೀರಿನ ಕರ ಬಡವರಿಗೆ ಹೊರೆಯಾಗುತ್ತದೆ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಕರ ವಸೂಲಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆ ಬಳಿಕ ಯಾರೊಬ್ಬರೂ ನೀರಿನ ಕರ ಪಾವತಿಸುವಂತೆ ಬಿಲ್‌ ಕೊಟ್ಟಿರಲಿಲ್ಲ. ಪ್ರಸಕ್ತ ವರ್ಷದಿಂದ ನೀರಿನ ಕರ ಪಾವತಿಸಲು ಸಿದ್ಧರಿದ್ದೇವೆ. ಹಳೆಯ ಬಾಕಿ ನಮಗೆ ಹೊರೆಯಾಗಲಿದೆ’ ಎನ್ನುತ್ತಾರೆ ಎಸ್‌ಒಜಿ ಕಾಲೊನಿ ನಿವಾಸಿ ಕಲ್ಲೇಶಪ್ಪ.

ದಾವಣಗೆರೆಯ ಎಸ್‌ಒಜಿ ಕಾಲೊನಿಯಲ್ಲಿ ನೀರಿನ ಬಿಲ್‌ ಪ್ರದರ್ಶಿಸಿದ ಮಹಿಳೆಯರು
ಎಸ್‌ಒಜಿ ಕಾಲೊನಿಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಶ್ರಯ ಮನೆ ನಿವಾಸಿಗಳಿಗೆ ಈವರೆಗೆ ನೀರಿನ ಕರದ ಬಿಲ್‌ ನೀಡಿರಲಿಲ್ಲ. ₹ 32 ಸಾವಿರ ಹೊರೆಯಾಗಲಿದೆ
ಪಾಮೇನಹಳ್ಳಿ ನಾಗರಾಜು ಪಾಲಿಕೆ ಸದಸ್ಯ 31ನೇ ವಾರ್ಡ್‌

ಕರ ವಿನಾಯಿತಿ ಇಲ್ಲ: ಪಾಲಿಕೆ

‘ನೀರು ಆಸ್ತಿ ಸೇರಿ ಯಾವುದೇ ರೀತಿಯ ಕಂದಾಯ ವಿನಾಯಿತಿ ಯಾರೊಬ್ಬರಿಗೂ ಇಲ್ಲ. ಆಶ್ರಯ ಮನೆ ಕೊಳಚೆಪ್ರದೇಶದ ನಿವಾಸಿಗಳು ಕೂಡ ಪ್ರತಿ ವರ್ಷ ಕರ ಪಾವತಿಸುವುದು ಕಡ್ಡಾಯ’ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ. ‘ಮಹಾನಗರದ ಅಭಿವೃದ್ಧಿಗೆ ಕರ ಪಾವತಿಸುವುದು ಪ್ರತಿಯೊಬ್ಬರ ಕರ್ತವ್ಯ. ಆಯಾ ವರ್ಷದ ಕರವನ್ನು ಏಪ್ರಿಲ್‌ ಒಳಗೆ ಪಾವತಿಸಿದರೆ ಶೇ 5ರಷ್ಟು ವಿನಾಯಿತಿ ಸೌಲಭ್ಯವಿದೆ. ಬಾಕಿ ಉಳಿಸಿಕೊಂಡರೆ ಶೇ 2ರಷ್ಟು ದಂಡ ತೆರಬೇಕಾಗುತ್ತದೆ. ಅದು ಹೊರೆಯಾಗಿ ಪರಿಣಮಿಸುತ್ತದೆ. ಸರ್ಕಾರದ ನೀತಿಯ ಪ್ರಕಾರ ಎಸ್‌ಒಜಿ ಕಾಲೊನಿ ನಿವಾಸಿಗಳು ಕೂಡ ನೀರಿನ ಕರ ಪಾವತಿಸಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.