ADVERTISEMENT

ವಾರಕ್ಕೊಮ್ಮೆ ಒಂದೇ ಗಂಟೆ ನೀರು!

ಭದ್ರಾ ಜಲಾಶಯದಿಂದ ನೀರು ಬಿಡುವಂತೆ ಪ್ರಾದೇಶಿಕ ಆಯುಕ್ತರಿಗೆ ಡಿಸಿ ಮನವಿ

ಡಿ.ಕೆ.ಬಸವರಾಜು
Published 11 ಜೂನ್ 2019, 19:45 IST
Last Updated 11 ಜೂನ್ 2019, 19:45 IST
ದಾವಣಗೆರೆಯ ಟಿ.ವಿ. ಸ್ಟೇಷನ್ ಕೆರೆಯ ಒಂದು ನೋಟ
ದಾವಣಗೆರೆಯ ಟಿ.ವಿ. ಸ್ಟೇಷನ್ ಕೆರೆಯ ಒಂದು ನೋಟ   

ದಾವಣಗೆರೆ: ನಗರಕ್ಕೆ ಇನ್ನು ಮುಂದೆ ವಾರಕ್ಕೊಮ್ಮೆ ಒಂದೇ ಗಂಟೆ ಕುಡಿಯುವ ನೀರು ಬಿಡಲಾಗುವುದು. ಈ ನೀರನ್ನು ಕುಡಿಯುವುದಕ್ಕೆ ಮಾತ್ರ ಬಳಸಬೇಕು. ಇತರೆ ಕಾರ್ಯಗಳಿಗೆ ಕೊಳವೆಬಾವಿ ನೀರು ಬಳಸಬೇಕು...

ಇದು ಮಹಾನಗರ ಪಾಲಿಕೆ ಸೂಚನೆ. ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜನಹಳ್ಳಿ ಜಾಕ್‍ವೆಲ್ ಪಂಪ್ ಹೌಸ್ ಬಳಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ನಿಂತಿದೆ. ಪಂಪ್‍ಗಳಿಗೆ ನೀರು ಸಿಗದಿರುವುದರಿಂದ ಒಂದು ಸಾವಿರ ಎಚ್.ಪಿ. ಮೋಟರ್‍ ಪಂಟ್‌ಗಳ ಸ್ತಬ್ಧಗೊಂಡಿದೆ.

ರಾಜನಹಳ್ಳಿ ಜಾಕ್‌ವೆಲ್‌ನಿಂದ ನಗರದ ಶೇ 60ರಷ್ಟು ಭಾಗಕ್ಕೆ ನೀರು ಪೂರೈಕೆಯಾಗುತ್ತಿತ್ತು. ನದಿಯಲ್ಲಿ ನೀರು ಇಲ್ಲದೇ ಇರುವುದರಿಂದ ಸುಮಾರು 20 ವಾರ್ಡ್‍ಗಳಿಗೆ ನೀರು ಸ್ಥಗಿತಗೊಳ್ಳಲಿದೆ. ಕುಂದವಾಡ ಕೆರೆಯಿಂದ ಕೆಲವು ವಾರ್ಡ್‍ಗಳಿಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಕೊರತೆಯಾಗಿರುವ 20 ವಾರ್ಡ್‍ಗಳಿಗೆ ಟಿ.ವಿ ಸ್ಟೇಷನ್ ಪಂಪ್‍ಹೌಸ್‌ನಿಂದಲೇ ನೀರು ಪೂರೈಸಲು ಉದ್ದೇಶಿಸಲಾಗಿದೆ.

ADVERTISEMENT

‘ರಾಜನಹಳ್ಳಿ ಜಾಕ್‍ವೆಲ್ ಪಂಪ್‌ ಹೌಸ್ ಬಳಿ ತುಂಗಭದ್ರಾ ನದಿಯ ನೀರಿನ ಹರಿವು ಸಂಪೂರ್ಣ ನಿಂತಿದೆ. ಜನರ ಹಿತದೃಷ್ಟಿಯಿಂದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 3 ಟಿಎಂಸಿ ನೀರು ಹರಿಸಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಅವರು ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಜಲಾಶಯದಿಂದ ನೀರು ಹರಿಸಿದರೆ ತಲುಪಲು 4ರಿಂದ 5 ದಿನ ಬೇಕಾಗುತ್ತದೆ’ ಎನ್ನುತ್ತಾರೆ ಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ.

‘ಒಂದೇ ಮೂಲದಿಂದ ದಾವಣಗೆರೆ ಉತ್ತರ ಹಾಗೂ ದಕ್ಷಿಣ ಭಾಗಗಳೆರಡನ್ನೂ ನಿರ್ವಹಣೆ ಮಾಡಬೇಕಾಗಿರುವುದರಿಂದ 2ರಿಂದ 3ಗಂಟೆ ನೀರನ್ನು ಬಿಡಲು ಸಾಧ್ಯವಿಲ್ಲ. ಒಂದು ಗಂಟೆ ಮಾತ್ರ ನೀಡಲು ಬಿಡಲು ಸಾಧ್ಯವಿದೆ. ನಾಗರಿಕರು ಕುಡಿಯಲು ಮಾತ್ರ ಈ ನೀರನ್ನು ಬಳಸಬೇಕು. ಇತರೆ ಕಾರ್ಯಗಳಿಗೆ ಕೊಳವೆಬಾವಿ ನೀರನ್ನು ಬಳಸಬೇಕು’ ಎಂದು ಮನವಿ ಮಾಡಿದರು.

‘ರಾಜನಹಳ್ಳಿ ಜಾಕ್‍ವೆಲ್ ಪಂಪ್ ಹೌಸ್ ಬರಿದಾಗಿರುವುದರಿಂದ ಟಿ.ವಿ. ಸ್ಟೇಷನ್ ಕೆರೆಯಿಂದ ಪ್ರತಿ ದಿನ 20 ಎಂಎಲ್‌ಡಿ ನೀರು ಹೊರ ತೆಗೆಯಲಾಗುತ್ತಿದೆ. ದಾವಣಗೆರೆ ಉತ್ತರದ ವಾರ್ಡ್‌ಗಳಿಗೆ ವಾರಕ್ಕೆ ಎರಡು ದಿವಸ ನೀರು ಸರಬರಾಜು ಮಾಡುತ್ತಿದ್ದೆವು. ಈಗ ಅಲ್ಲಿ ವಾರಕ್ಕೆ ಒಂದು ದಿವಸ ನೀರು ಸರಬರಾಜು ಮಾಡಿ, ಉಳಿದ ನೀರನ್ನು ದಕ್ಷಿಣ ಭಾಗದ ವಾರ್ಡ್‌ಗಳಿಗೆ ವಾರಕ್ಕೆ ಒಂದು ಬಾರಿ ಸರಬರಾಜು ಮಾಡಲಾಗುವುದು’ ಎನ್ನುತ್ತಾರೆ ಕಾರ್ಯಪಾಲಕ ಎಂಜಿನಿಯರ್‌ ಆರ್.ಪಿ. ಜಾಧವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.