ADVERTISEMENT

ದಾವಣಗೆರೆ: ವರ್ಷಗಳೇ ಕಳೆದರೂ ನೀರಿಗೆ ತತ್ವಾರ

ಕೊರೊನಾ ಸಂಕಷ್ಟದಲ್ಲಿ ಹೆಚ್ಚಿದ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 8:29 IST
Last Updated 31 ಆಗಸ್ಟ್ 2020, 8:29 IST
ಉಚ್ಚಂಗಿದುರ್ಗ ಸಮೀಪದ ಚಿಕ್ಕ ಕಬ್ಬಳ್ಳಿ ಗ್ರಾಮದಲ್ಲಿ ನೀರಿಗಾಗಿ ಕೊಳವೆಬಾವಿ ಎದುರು ಕೊಡಗಳೊಂದಿಗೆ ನಿಂತಿರುವ ಬಾಲಕ
ಉಚ್ಚಂಗಿದುರ್ಗ ಸಮೀಪದ ಚಿಕ್ಕ ಕಬ್ಬಳ್ಳಿ ಗ್ರಾಮದಲ್ಲಿ ನೀರಿಗಾಗಿ ಕೊಳವೆಬಾವಿ ಎದುರು ಕೊಡಗಳೊಂದಿಗೆ ನಿಂತಿರುವ ಬಾಲಕ   

ಉಚ್ಚಂಗಿದುರ್ಗ: ಅರಸೀಕೆರೆ ಹೋಬಳಿಯ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಕಬ್ಬಳ್ಳಿ ಗ್ರಾಮದಲ್ಲಿ ಐದಾರು ವರ್ಷಗಳಿಂದ ಕುಡಿಯುವ ನೀರಿಗೆ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ವ್ಯವಸ್ಥೆಗಳಿದ್ದರೂ ಪರದಾಟ ತಪ್ಪಿಲ್ಲ. ಕೊಳವೆಬಾವಿಯ ಅಂತರ್ಜಲ ಮಟ್ಟ ಸಮೃದ್ಧವಾಗಿ ಕೂಡಿದೆ. ಎರಡು ದೊಡ್ಡ ಟ್ಯಾಂಕ್‌ಗಳೂ ಇವೆ. ಆದರೆ ಪೈಪ್‌ಲೈನ್ ಅಳವಡಿಸಿರುವ ನಲ್ಲಿಗಳಲ್ಲಿ ನೀರಿಲ್ಲದಿರುವುದರಿಂದ ಗ್ರಾಮಸ್ಥರು ತೊಂದರೆ ಎದುರಿಸುವಂತಾಗಿದೆ.

400ಕ್ಕೂ ಅಧಿಕ ಮನೆಗಳಿರುವ ಗ್ರಾಮದಲ್ಲಿ ಎರಡು ಸಾವಿರದಷ್ಟು ಜನಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ನಾಲ್ಕು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಹೀಗಿದ್ದರೂ ಗ್ರಾಮದಲ್ಲಿ ನೀರಿಗಾಗಿ ಗ್ರಾಮಸ್ಥರ ಬವಣೆ ತಪ್ಪಿಲ್ಲ.

ADVERTISEMENT

ಗ್ರಾಮದ ಎರಡು ಭಾಗಗಳಲ್ಲಿ ಪ್ರತ್ಯೇಕ ಕೊಳವೆಬಾವಿಗಳಿವೆ. ಇಡೀ ಗ್ರಾಮದ ಜನರು ಸರತಿ ಸಾಲಿನಲ್ಲಿ ನಿಂತು ನೀರು ಹಿಡಿಯುವ ಅನಿವಾರ್ಯ ಎದುರಾಗಿದೆ. ವಿದ್ಯುತ್ ಅಭಾವ ಉಂಟಾದರೆ ಸಾರ್ವಜನಿಕರು ಕೊಡ ಹಿಡಿದು ನೀರಿಗಾಗಿ ಕಾದು ಕುಳಿತುಕೊಳ್ಳಬೇಕು. ಇಲ್ಲವೇ ಹೊಲ, ನೆರೆ ಗ್ರಾಮಗಳಿಗೆ ಅಲೆಯುವ ಪರಿಸ್ಥಿತಿ ಇದೆ.

‘ಕೋವಿಡ್ ಕಾರಣ ಗ್ರಾಮದಲ್ಲಿನ ನೀರಿನ ಬವಣೆಯ ಕೇಳುವವರೇ ಇಲ್ಲದಂತಾಗಿದೆ. ಲಾಕ್‌ಡೌನ್‌ ಮಾಡಿದ್ದರಿಂದ ಗುಳೆ ಹೋದವರೆಲ್ಲ ಹಳ್ಳಿಗೆ ಮರಳಿ ಬಂದಿದ್ದು, ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಮನೆಯಲ್ಲಿ ನೀರಿನ ಬಳಕೆ ಹೆಚ್ಚಾಗಿದೆ. ನೀರಿಗಾಗಿ ಕೊಳವೆಬಾವಿ ಎದುರು ಕಾಯುವುದು ತಪ್ಪಿಲ್ಲ’ ಎನ್ನುತ್ತಾರೆ ಗ್ರಾಮದ ಯುವಕ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.