ADVERTISEMENT

ಸಂತೇಬೆನ್ನೂರು: ರೈತರ ಮಗ್ಗುಲ ಮುಳ್ಳಾಗಿರುವ ಮುಳ್ಳು ಸಜ್ಜೆ!

ಕೆ.ಎಸ್.ವೀರೇಶ್ ಪ್ರಸಾದ್
Published 28 ಜೂನ್ 2025, 6:34 IST
Last Updated 28 ಜೂನ್ 2025, 6:34 IST
ಸಂತೇಬೆನ್ನೂರು ಸಮೀಪದ ಮೆಕ್ಕೆಜೋಳ ಬೆಳೆಯಲ್ಲಿ ಕಳೆ ಹಾಗೂ ರೋಗ ನಿರ್ವಹಣೆಗೆ ಔಷಧಿ ಸಿಂಪಡಿಸುತ್ತಿರುವುದು 
ಸಂತೇಬೆನ್ನೂರು ಸಮೀಪದ ಮೆಕ್ಕೆಜೋಳ ಬೆಳೆಯಲ್ಲಿ ಕಳೆ ಹಾಗೂ ರೋಗ ನಿರ್ವಹಣೆಗೆ ಔಷಧಿ ಸಿಂಪಡಿಸುತ್ತಿರುವುದು    

ಸಂತೇಬೆನ್ನೂರು: ಮುಂಗಾರು ಸಮೃದ್ಧವಾಗಿ ಸುರಿದ ಬೆನ್ನಲ್ಲೇ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. 20ರಿಂದ 25 ದಿನಗಳಿಂದ ಮೆಕ್ಕೆಜೋಳದ ವ್ಯಾಪಕ ಬಿತ್ತನೆ ನಡೆದಿದೆ. ಮೊಳಕೆಯೊಡೆದು ಚೋಟುದ್ದ ಬೆಳೆದ ಮೆಕ್ಕೆಜೋಳದ ಗಿಡದೊಂದಿಗೆ ಮುಳ್ಳುಸಜ್ಜೆಯೂ ಸ್ಪರ್ಧೆಗೆ ಬಿದ್ದು ಹುಲುಸಾಗಿ ಬೆಳೆಯುತ್ತಿರುವುದು ರೈತರ ನಿದ್ದೆಗೆಡಿಸಿದೆ.

ಗರಿ ಬಿಚ್ಚುವ ಹಂತದಲ್ಲಿ ಮೆಕ್ಕೆಜೋಳದ ಸಸಿಗಳನ್ನೇ ಹೋಲುವ ಮುಳ್ಳು ಸಜ್ಜೆ ನಿರ್ಮೂಲನೆಯದ್ದೇ ಚಿಂತೆಯಾಗಿದೆ. ಹಲವು ರೈತರು ಈಗಾಗಲೇ ಕಳೆನಾಶಕ ಸಿಂಪಡಿಸಿ ಅದರ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಕಳೆನಾಶಕಕ್ಕೂ ನಿಯಂತ್ರಣದ ಭರವಸೆ ಕಡಿಮೆ. ಕೆಲ ರೈತರು ಕುಂಟೆ ಹೊಡೆದು ಸಾಲುಗಳ ಮಧ್ಯದ ಕಳೆ ನಾಶಕ್ಕೆ ಮುಂದಾಗಿದ್ದಾರೆ. ಆದರೆ, ಬೆಳೆಯೊಂದಿಗೆ ಸಾಲುಗಳಲ್ಲಿ ಬೆಳೆಯುವ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಮಾನವ ಶ್ರಮವೇ ಬೇಕು ಎಂಬುದು ರೈತರ ಅನಿಸಿಕೆ.

‘ಈಗಾಗಲೇ 10 ಎಕರೆಯಲ್ಲಿ ಮೆಕ್ಕೆಜೋಳ ಹಾಗೂ ಪಾಪ್‌ಕಾರ್ನ್ ಬಿತ್ತನೆ ಮಾಡಲಾಗಿದೆ. ಬೆಳೆಯೊಂದಿಗೆ ಮುಳ್ಳುಸಜ್ಜೆ ಬೆಳೆದಿದೆ. ಕಳೆನಾಶಕ ಸಿಂಪಡಿಸಲಾಗಿದ್ದು, ಪ್ರತಿ ಎಕರೆಗೆ ಇದಕ್ಕಾಗಿಯೇ ಹೆಚ್ಚುವರಿಯಾಗಿ ₹ 2,500 ಖರ್ಚಾಗಿದೆ’ ಎಂಬುದು ರೈತರಾದ ಶಿವು ಹಾಗೂ ನಾಗರಾಜ್ ಅವರ ವಿವರಣೆ.

ADVERTISEMENT

‘ಆರಂಭದಲ್ಲಿ ಮುಳ್ಳುಸಜ್ಜೆ ನಿರ್ಮೂಲನೆ ಮಾಡದಿದ್ದರೆ ಮೆಕ್ಕೆಜೋಳದೊಂದಿಗೆ ಪೈಪೋಟಿಗೆ ಬಿದ್ದಂತೆ ಬೆಳೆಯುತ್ತದೆ. ಕಾಂಡದಲ್ಲಿನ ಸಣ್ಣ ಮುಳ್ಳುಗಳು ಕೊಯ್ಲಿನ ವೇಳೆ ಕಿರಿಕಿರಿ ಉಂಟು ಮಾಡುತ್ತವೆ. ಕೆಲ ಕೂಲಿ ಕಾರ್ಮಿಕರು ಮುಳ್ಳುಸಜ್ಜೆ ಇದ್ದ ಕಡೆ ಕೆಲಸಕ್ಕೆ ಬರಲು ನಿರಾಕರಿಸುತ್ತಾರೆ. ಸದ್ಯ ಸಾಂಪ್ರದಾಯಿಕ ಕಳೆಗಿಂತ ಮುಳ್ಳುಸಜ್ಜೆಯೇ ತಲೆನೋವು ಉಂಟುಮಾಡಿದೆ’ ಎಂದು ರೈತ  ರಂಗಸ್ವಾಮಿ ದೂರುತ್ತಾರೆ.

‘ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ 3,500 ಹೆಕ್ಟೇರ್ ಪಾಪ್‌ಕಾರ್ನ್ ಹಾಗೂ ಮೆಕ್ಕೆಜೋಳ ಬಿತ್ತನೆ ಆಗಿದೆ. ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಬಿತ್ತನೆ ದಿನದಿಂದ 35 ದಿನ ಆರಂಭಿಕ ದಿನಗಳು. ಈ ಸಮಯದಲ್ಲಿಯೇ ಕಳೆ– ಬೆಳೆ ನಡುವೆ ಸ್ಪರ್ಧೆ ಇರುತ್ತದೆ. ಸಮಗ್ರ ಕಳೆ ನಿರ್ವಹಣೆಯೇ ಪರಿಹಾರ. ಮೆಕ್ಕೆಜೋಳಕ್ಕೆ ಲದ್ದಿ ಹುಳ ಬಾಧೆ ಕಾಡುತ್ತಿದೆ’ ಎಂದು ಕೃಷಿ ಅಧಿಕಾರಿ ಕುಮಾರ್ ಮಾಹಿತಿ ನೀಡಿದರು.

ಕಳೆದ ವರ್ಷದ ಮೆಕ್ಕೆಜೋಳದ ಹೊಲದಲ್ಲಿ ದಟ್ಟವಾಗಿ ಬೆಳೆದ ಮುಳ್ಳು ಸಜ್ಜೆ
‘ಕಳೆ ವ್ಯಾಪಕತೆಗೆ ಏಕಬೆಳೆ ಪದ್ದತಿ ಕಾರಣ’
ಮುಳ್ಳು ಸಜ್ಜೆ ಕಳೆ ವ್ಯಾಪಕತೆಗೆ ಏಕಬೆಳೆ ಪದ್ದತಿಯೇ ಕಾರಣ. ಬೆಳೆ ಪರಿವರ್ತನೆಗೆ ರೈತರು ಸಂಕಲ್ಪ ಮಾಡಬೇಕು. ನಿರ್ದಿಷ್ಟ ಕಳೆನಾಶಕ ಸಂಶೋಧನೆಯ ಹಂತದಲ್ಲಿದೆ. ಮೊದಲ 30 ದಿನಗಳಲ್ಲಿ ಕಳೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ರೈತ ತಿಮ್ಮಣ್ಣ ಅವರು ಸೊಯಾಬೀನ್ ಬಿತ್ತನೆ ಮಾಡಿದ್ದರಿಂದ ಮುಳ್ಳು ಸಜ್ಜೆ ಪ್ರವೇಶ ಇರಲಿಲ್ಲ. ಮುಳ್ಳು ಸಜ್ಜೆಯಿಂದ ಇಳುವರಿ ಕುಸಿತ ನಿಶ್ಚಿತ. ಬಿ.ಯು.ಮಲ್ಲಿಕಾರ್ಜುನ್ ಬೇಸಾಯ ತಜ್ಞ ತರಳಬಾಳು ಕೃಷಿ ಸಂಶೋಧನಾ ಕೇಂದ್ರ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.