ದಾವಣಗೆರೆ: 21 ವರ್ಷಗಳ ಕಾಲ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಊರಿಗೆ ಮರಳಿದ ಯೋಧ ಎಚ್. ಸುರೇಶ್‌ರಾವ್ ಘೋರ್ಪಡೆ ಅವರನ್ನು ಸೋಮವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಗ್ರಾಮದವರಾದ ಸುರೇಶ ರಾವ್ ಘೋರ್ಪಡೆ ಅವರು ಸೇನೆಯಲ್ಲಿನ ಅನೇಕ ರೋಚಕ ಕ್ಷಣಗಳು, ಕಾರ್ಯಾಚರಣೆ ವೇಳೆಯ ರೋಮಾಂಚನ ಸಂದರ್ಭ, ಹಲವು ಸನ್ನಿವೇಶ, ಅನುಭವಗಳ ಸಿಹಿ-ಕಹಿ ನೆನಪಿನ ಬುತ್ತಿಯೊಂದಿಗೆ ನಿವೃತ್ತರಾಗಿ ಊರಿಗೆ ಮರಳಿದರು.
ದಾವಣಗೆರೆಯ ರೈಲ್ವೆ ನಿಲ್ದಾಣಕ್ಕೆ ಬಂದ ಸುರೇಶ್‌ರಾವ್ ಅವರನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಸ್ವಾಗತಿಸಿದರು.ಯೋಧನ ಸ್ನೇಹಿತರು, ಸಂಬಂಧಿಕರು, ಕುಟುಂಬದವರು ಪಾಲ್ಗೊಂಡಿದ್ದರು. ದಾವಣಗೆರೆಯ ರೈಲ್ವೆ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಅಲ್ಲಿದ್ದವರೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ನಗರದೇವತೆ ದುರ್ಗಾಂಬಿಕಾ ದೇವಾಲಯ ಹಾಗೂ ಗಾಂಧಿನಗರದ ಹುಲಿಗೆಮ್ಮ ದೇವಾಲಯಕ್ಕೆ ಭೇಟಿ ದೇವರಿಗೆ ನಮಸ್ಕರಿಸಿದರು. ಆ ಬಳಿಕ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆ ಬಳಿಕ ಬಾಡ ಕ್ರಾಸ್ ಬಳಿಯ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಸಿಹಿ ವಿತರಿಸಿದರು.
ಯೋಧನ ಆಗಮನವಾಗುತ್ತಿದ್ದಂತೆ ಗ್ರಾಮದಲ್ಲಿ ಸೋಮವಾರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಬಾಡ ಕ್ರಾಸ್‌ನಿಂದ ತೋಳಹುಣಸೆಯವರೆಗೆ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು. ಆಂಜನೇಯ ಕಾಟನ್ ಮಿಲ್ ಮಾಲೀಕರು, ನಿವೃತ್ತ ಸೈನಿಕರು, ಸೇವಾಲಾಲ್ ಸಮಿತಿಯವರು, ಮುಸ್ಲಿ ಸಮಾಜದವರು ಅವರನ್ನು ಅಭಿನಂದಿಸಿದರು.
ಇಬ್ಬರು ಪಾಕ್ ಉಗ್ರರನ್ನು ಗುಂಡಿಕ್ಕಿ ಹತ್ಯೆಗೈದ ತಂಡದಲ್ಲಿ ಸುರೇಶ್ ರಾವ್ ಇದ್ದರು. ನಕ್ಸಲರು ಹೂತಿಟ್ಟಿದ್ದ ಬಾಂಬ್‍ಗಳನ್ನು ಯಾವುದೇ ಸಲಕರಣೆ ಇಲ್ಲದೇ ಇವರು ಪತ್ತೆ ಮಾಡಿದರು. ಪ್ರಾಣದ ಹಂಗನ್ನೇ ತೊರೆದು ದೇಶಕ್ಕೆ, ಸೇನೆಗೆ ಎದುರಾಗಬಹುದಾಗಿದ್ದ ಭಾರಿ ಅಪತ್ತು ತಪ್ಪಿಸಿದ ಹಿರಿಮೆ ಇವರದ್ದು.
‘ಯೋಧನಾಗಿ ದೇಶ ಸೇವೆ ಮಾಡಿದ್ದು ನನ್ನ ಪುಣ್ಯ. ಅದೊಂದು ಅವಿಸ್ಮರಣೀಯ ಕ್ಷಣ. ಪ್ರತಿಯೊಬ್ಬ ಯುವಕರೂ ದೇಶ ಸೇವೆ ಮಾಡಬೇಕು. ಆ ಮೂಲಕ ಎಲ್ಲರಿಗೂ ಗೌರವ ಸಿಗುವಂತಾಗಬೇಕು’ ಎಂಬುದು ಸುರೇಶ್‌ರಾವ್ ಅವರ ಅಭಿಮತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.