ADVERTISEMENT

ಕಾಂಗ್ರೆಸ್ ನಿಂದ ‘ಎಲ್ಲಿದ್ದಿ ಈಶ್ವರಪ್ಪ?’ ಸ್ಲೋಗನ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 14:13 IST
Last Updated 15 ಮಾರ್ಚ್ 2020, 14:13 IST
ಸಚಿವ ಕೆ.ಎಸ್. ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ    

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ನಾಪತ್ತೆಯಾಗಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರೇ ಉಸ್ತುವಾರಿ ಸಚಿವರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್‌ ಮತ್ತು ಪಾಲಿಕೆ ಸದಸ್ಯಎ.ನಾಗರಾಜ್‌ ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕ ಮಾಡಿದ ಹಿನ್ನೆಲೆಯಲ್ಲಿ ಮಾರ್ಚ್‌ 16ರಂದು ಮಧ್ಯಾಹ್ನ 12ಕ್ಕೆ ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಲಾಗುವುದು. ಈ ಸಂದರ್ಭದಲ್ಲಿ ‘ಈಶ್ವರಪ್ಪ ಎಲ್ಲಿದ್ದೀಯಪ್ಪ, ಉಸ್ತುವಾರಿ ಸಚಿವರ ಹುಡುಕಿಕೊಡಿ’ ಸ್ಲೋಗನ್‌ ಹಾಕಲಾಗುವುದು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗುಜರಾತ್‌ ಮಾದರಿ ಎಂದು ಹಿಂದೆ ಬಿಜೆಪಿಯವರು ಹೇಳುತ್ತಿದ್ದರು. ಅದಕ್ಕೆ ಜನ ಮನ್ನಣೆ ನೀಡದ ಕಾರಣ ಈಗ ಕರ್ನಾಟಕದ ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ. ನೂರಾರು ಕೋಟಿ ರೂಪಾಯಿ ಸುರಿದು ಕೋಳಿ, ಕುರಿಗಳಂತೆ ಶಾಸಕರನ್ನು ಖರೀದಿ ಮಾಡುವ ಮಾದರಿ ಇದು ಎಂದು ಹೇಳಿದರು.

ADVERTISEMENT

ಕೋಮು ದಳ್ಳುರಿ ನಡೆಸಿ ಅಧಿಕಾರ ಹಿಡಿಯುವ ಗುಜರಾತ್‌ ಮಾದರಿಯನ್ನು ದೇಶಕ್ಕೆ ಮಾದರಿ ಎಂದು ಬಿಂಬಿಸಿದ್ದೇ ದುರಂತ. ಆಪರೇಷನ್‌ ಕಮಲ ಮೂಲಕ ಅಧಿಕಾರ ಹಿಡಿಯುವ ಕರ್ನಾಟಕ ಮಾದರಿಯು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರ ನೇಮಕಾತಿಯಲ್ಲಿ ಕಾಂಗ್ರೆಸ್‌ ಪ್ರಾದೇಶಿಕವಾರು ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ ಎಂದು ಶ್ಲಾಘಿಸಿದರು.

ಪಾಲಿಕೆ ಸದಸ್ಯ ಕೆ.ಚಮನ್‌ಸಾಬ್‌, ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಇದರ ಲಾಭವನ್ನು ಗ್ರಾಹಕರಿಗೆ ನೀಡದೇ ಡೀಸೆಲ್‌ ಮತ್ತು ಪೆಟ್ರೋಲ್‌ ಮೇಲೆ ಅಬಕಾರಿ ಸುಂಕವನ್ನು ಲೀಟರ್‌ಗೆ ₹ 3 ಏರಿಸಿದ್ದಾರೆ. 2013ರಲ್ಲಿ ಅಡುಗೆ ಅನಿಲ ₹ 350 ಇತ್ತು. ಈಗ ₹ 900ಕ್ಕೆ ಏರಿದೆ. ಇದರಿಂದ ಜನಸಾಮಾನ್ಯರಿಗೆ ಹೊಡೆತ ಬಿದ್ದಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಗಡಿಗುಡಾಳ್‌ ಮಂಜುನಾಥ್‌, ಗಣೇಶ್‌ ಹುಲುಮನಿ, ಅಲ್ಲವಾಲಿ ಗಾಜಿಖಾನ್‌, ಲಿಯಾಕತ್‌ ಅಲಿ, ಅಥಣಿ ವೆಂಕಟೇಶ್‌, ಬಿ.ಎಚ್‌. ಉದಯಕುಮಾರ್‌, ಕೆ.ಜೆ. ಖಲೀಲ್‌, ಹಲೀಶ್‌, ದೇವರಮನೆ ಶಿವಕುಮಾರ್‌ ಅವರೂ ಇದ್ದರು.

‘ಕುಡಿಯುವ ನೀರಿಗೆ ಹಾಹಾಕಾರ’

ಮಾರ್ಚ್‌ನಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಬಂದಿದೆ. ನಗರದ ಹಲವು ಪ್ರದೇಶಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಹಿಂದೆಲ್ಲ ನೀರಿನ ಹರಿವು ಕಡಿಮೆಯಾದಾಗ ಮರಳಿನ ಚೀಲ ಹಾಕಿ ನೀರು ಕೆಳ ಹರಿಯದಂತೆ ತಡೆಯಲಾಗುತ್ತಿತ್ತು. ಈ ಬಾರಿ ಪಾಲಿಕೆಯ ಅಧಿಕಾರಿಗಳು, ಆಡಳಿತ ನಡೆಸುವವರು ಅತ್ತ ಗಮನವೇ ಹರಿಸಿಲ್ಲ ಎಂದು ಪಾಲಿಕೆ ಸದಸ್ಯ ಎ. ನಾಗರಾಜ್‌ ಆರೋಪಿಸಿದರು.

ಜಲಾಶಯದಲ್ಲಿ ನೀರಿದೆ. ಹಾಗಾಗಿ ಕಾಡಾಕ್ಕೆ ಮನವಿ ಸಲ್ಲಿಸಿ ನೀರು ಬಿಡುವಂತೆ ಮಾಡಬೇಕು ಎಂದು ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ನಗರದ ಮುಖ್ಯರಸ್ತೆಗಳ ಸೌಂದರ್ಯಕ್ಕಾಗಿ ವಿದೇಶಿ ಗಿಡಗಳನ್ನು ತಂದು ನೆಡಲಾಗಿತ್ತು. ಆದರೆ ನಿರ್ವಹಣೆ ಇಲ್ಲದೇ ಒಣಗುತ್ತಿದೆ. ಪಾಲಿಕೆ ಅತ್ತ ಗಮನ ಕೊಡುತ್ತಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.